ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವೃಕ್ಷ ಸಮೃದ್ಧಿಗೆ ಚಾಲನೆ

0

ಹಿರೆಬಂಡಾಡಿ: ಸಂಭ್ರಮ ಶನಿವಾರದ ನಿಮಿತ್ತ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವನಸಿರಿ ಇಕೋಕ್ಲಬ್ ಮತ್ತು ಟೀಂ ದಕ್ಷಿಣಕಾಶಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಜು.26ರಂದು ವೃಕ್ಷ ಸಮೃದ್ಧಿಗೆ ಚಾಲನೆ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ ಅವರು ಮಾತನಾಡಿ, ಅಡಕೆ ಸಸಿ ನೆಡಲು ದೊಡ್ಡ ದೊಡ್ಡ ಮರಗಳನ್ನು ಕಡಿಯದೆ ಇರೋಣ. ಖಾಲಿ ಇರುವ ಜಾಗಗಳಲ್ಲಿ ಫಲನೀಡುವ ಸಸ್ಯಗಳನ್ನು ನೆಟ್ಟು ಪೋಷಿಸೋಣ ಎಂದು ಹೇಳಿದರು.ಶಾಲಾಮುಖ್ಯ ಗುರು ಶ್ರೀಧರ ಭಟ್‌ರವರು ಅಶ್ವತ್ಥ ಮರವೊಂದು ಶೇ.100 ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡರೆ, ಬೇವು, ಆಲ ಇತ್ಯಾದಿ ಮರಗಳು ಶೇ.80ರಷ್ಟು ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತದೆ ಎಂದು ವೃಕ್ಷದ ಮಹತ್ವ ವಿವರಿಸಿದರು.

ಟೀಂ ದಕ್ಷಿಣ ಕಾಶಿ ಉಪ್ಪಿನಂಗಡಿ ಇದರ ಸದಸ್ಯರಾದ ರವಿಯವರು ಸಂಸ್ಥೆಯ, ಹುಟ್ಟು, ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿ, ಸಮಾಜಮುಖಿ ಸೇವಾಕಾರ್ಯಗಳ ಬಗ್ಗೆ ವಿವರಿಸಿದರು. ’ಉಬರ್ ಉತ್ಸವ’ ಎಂಬ ಸಾಂಸ್ಕೃತಿಕ ಸಮ್ಮಿಲನ, ಆಂಬ್ಯುಲೆನ್ಸ್ ಲೋಕಾರ್ಪಣೆ, ಶ್ರೀರಾಮ ಶಾಲೆಯಲ್ಲಿ ಅನ್ನಬ್ರಹ್ಮ ಬಿಸಿಯೂಟ ಯೋಜನೆ ಜೊತೆಗೆ ಈ ವರ್ಷ ಮನೆ-ಮನೆಗೆ ವೃಕ್ಷ ಸಮೃದ್ಧಿಯ ಜಾಗೃತಿಯನ್ನು ತಲುಪಿಸಿ ಮಕ್ಕಳಲ್ಲಿ ಗಿಡ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯರವರು ಮಾತನಾಡಿ, ಅಶ್ವತ್ಥ ಮರಕ್ಕೆ ಸುತ್ತು ಬರುವುದು ಮೂಢನಂಬಿಕೆ ಅಲ್ಲ ಮೂಲನಂಬಿಕೆ, ಸಾಲುಮರದ ತಿಮ್ಮಕ್ಕನಂತೆ ನಾವೂ ಮರ ಬೆಳೆಸೋಣ ಎಂದರು. ಹಿರೆಬಂಡಾಡಿ ಗ್ರಾಮ ವ್ಯಾಪ್ತಿಯ ಬೀಟ್ ಫಾರೆಸ್ಟರ್ ಸುಧೀರ್ ಹೆಗ್ಡೆಯವರು ಅರಣ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಟೀಂ ದಕ್ಷಿಣಕಾಶಿ ಉಪ್ಪಿನಂಗಡಿ ಇದರ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಅಧ್ಯಾಪಕ ವೃಂದ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ಸಹಕರಿಸಿದರು. ವನಸಿರಿ ಇಕೋ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕರಾದ ಮನೋಹರ ಮರಂಕಾಡಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಮಲ್ಲಿಕಾ ಐ ವಂದಿಸಿದರು. ಶಿಕ್ಷಕರಾದ ಲಲಿತಾ ಕೆ, ವಸಂತಕುಮಾರ್, ಅಥಿತಿ ಶಿಕ್ಷಕಿಯರಾದ ಮಮತ, ಆರತಿ ವೈ ಸಹಕರಿಸಿದರು. ತದ ನಂತರ ಶಾಲಾ ಆವರಣ ಮತ್ತು ಮೈದಾನದ ಸುತ್ತ ಸುಮಾರು 80 ವಿವಿಧ ಜಾತಿಯ ಗಿಡಗಳನ್ನು ಟೀಂ ದಕ್ಷಿಣಕಾಶಿ ಇದರ ಸದಸ್ಯರು ನೆಡಲು ಸಹಕರಿಸಿದರು.

LEAVE A REPLY

Please enter your comment!
Please enter your name here