ಪುತ್ತೂರು: ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾರಂಟ್ ಆರೋಪಿಯೊಬ್ಬನನ್ನು ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಬಂಧಿಸಿ ಪುತ್ತೂರಿನ 5ನೇ ಹಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆತನನ್ನು ಶಿಕ್ಷಾಧೀನ ಕೈದಿಯಾಗಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಒಳಮೊಗ್ರು ಗ್ರಾಮದ ಆರೋಪಿ ದಿನೇಶ್ ಎಂಬಾತನಿಗೆ ಪುತ್ತೂರು ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿತ್ತು. ಬಳಿಕ ಆರೋಪಿ ದಿನೇಶ್ ಈ ಕುರಿತು ಉಚ್ಚ ನ್ಯಾಯಾಲಯಕ್ಕೆ ಅಪೀಲು ಅರ್ಜಿ ಸಲ್ಲಿಸಿದ್ದ. ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿ ಈತನಿಗೆ ಶಿಕ್ಷೆಯನ್ನು ಖಾಯಂಗೊಳಿಸಿತ್ತು. ಅದರಂತೆ ಆರೋಪಿಯನ್ನು ಬಂಧಿಸುವಂತೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.