ಕುಂತೂರುಪದವು ಸಂತಜಾರ್ಜ್ ಅನುದಾನಿತ ಕ.ಮಾ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆ

0

ಎಂಆರ್ ಪಿಎಲ್ ನ 40 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ

ಕಡಬ : ಕುಂತೂರು ಪದವು ಸಂತ ಜಾರ್ಜ್ ಸರಕಾರಿ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಂಆರ್ ಪಿಎಲ್ ನ 40 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಆ.8 ರಂದು ನಡೆಯಿತು.


ಸಂಸ್ಥೆಯ ಅಧ್ಯಕ್ಷ ಕುಂತೂರುಪದವು ಆರ್ಥೋಡಾಕ್ಸ್ ಸಿರಿಯನ್ ಚರ್ಚ್ ನ ಧರ್ಮಗುರು ರೆ. ಫಾ.ನಿತಿನ್ ಮ್ಯಾಥ್ಯು ಅವರು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಭದ ಉದ್ದೇಶದಿಂದ ಇಲ್ಲಿ ಸಂಸ್ಥೆ ಆರಂಭಿಸಿಲ್ಲ. 1988ರಲ್ಲಿ ವಿದ್ಯಾಸಂಸ್ಥೆ ಆರಂಭಗೊಂಡಿದ್ದರು 2011ರಲ್ಲಿ ಸರಕಾರದ ಅನುದಾನ ಲಭಿಸಿತು. ಚರ್ಚ್ ನ ಸದಸ್ಯರ, ಪೋಷಕರ, ಶಿಕ್ಷಕರ ಸಹಕಾರದಿಂದ ಸಂಸ್ಥೆ ಬೆಳೆದು ಬಂದಿದೆ ಎಂದರು.

ಸಂಸ್ಥೆಯ ಚಿತ್ರಕಲಾ ಶಿಕ್ಷಕ ಕಿಶೋರ್ ಅವರು ಎಂಆರ್ ಪಿಎಲ್ ಸಂಸ್ಥೆಯವರ ಜೊತೆ ಸಂಪರ್ಕ ಮಾಡಿ ಕಟ್ಟಡ ರಚನೆಗೆ 40 ಲಕ್ಷ ರೂ. ಅನುದಾನ ತರಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ಮುಖ್ಯ ಶಿಕ್ಷಕ ಹರಿಶ್ಚಂದ್ರ ಅವರು ಪ್ರಾಮಾಣಿಕ ವಾಗಿ ಲೆಕ್ಕ ಪತ್ರ ನಿರ್ವಹಣೆ ಯೊಂದಿಗೆ ಕಾರ್ಮಿಕನಾಗಿಯೂ ಕೆಲಸ ನಿರ್ವಹಣೆ ಮಾಡಿದ್ದಾರೆ. ಶಿಕ್ಷಕರಿಂದ, ಚರ್ಚ್ ನ ಸದಸ್ಯರಿಂದ ಸಹಕಾರ ದೊರೆತಿದೆ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಸಮುದಾಯದ ಸಹಕಾರ ಅಗತ್ಯವಿದೆ. ಜೊತೆಗೆ ಪೋಷಕರ ಸಹಕಾರ , ಶಿಕ್ಷಕರ ಪರಿಶ್ರಮವೂ ಬೇಕು. ಸರಕಾರಿ ಶಾಲೆಗಳಿಗೆ ಎಂಆರ್ ಪಿಎಲ್ ನಿಂದ ಸಾಕಷ್ಟು ಅನುದಾನ ಸಿಗುತ್ತಿದೆ. ಹೊಸದಾಗಿ ರಚನೆಗೊಂಡ ಕಡಬ ತಾಲೂಕು ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿನ ಶಾಲೆಗಳಿಗೆ ಹೆಚ್ಚಿನ ಅನುದಾನ ಸಿಗಬೇಕು ಎಂದರು. ಕುಂತೂರು ಪದವು ಅನುದಾನಿತ ಪ್ರೌಢಶಾಲೆ ಚೆನ್ನಾಗಿ ನಡೆಯುತ್ತಿದೆ. ಯಾವುದೇ ದೂರುಗಳಿಲ್ಲ. ಶೈಕ್ಷಣಿಕ ಪ್ರಗತಿಗೆ ಆಡಳಿತ ಮಂಡಳಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು. ಎಂಆರ್ ಪಿಎಲ್ ನ ಸಿಎಸ್ ಆರ್ ಫಂಡ್ ವಿಭಾಗದ ಸಹಾಯಕ ವ್ಯವಸ್ಥಾಪಕ ಹರೀಶ್ ರಾವ್ ಅವರು ಮಾತನಾಡಿ, ಎಂಆರ್ ಪಿಎಲ್ ನ ಲಾಭಾಂಶದಲ್ಲಿ ಶೇ 2 ರಷ್ಟು ಭಾಗ ಸಮಾಜ ಸೇವೆಗೆ ಬಳಕೆಯಾಗುತ್ತಿದೆ. ಇದರಲ್ಲಿ ಹೆಚ್ಚಿನ ಅನುದಾನ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಉಪಯೋಗವಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಲಾಭವಾಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಕಟ್ಟಡ ರಚನೆಗೆ 40 ಲಕ್ಷ ರೂ.ಅನುದಾನ ನೀಡಲಾಗಿದೆ. ಮಕ್ಕಳು ಶಾಲೆಗೆ ಕೀರ್ತಿ ತರಬೇಕು ಎಂದರು.

ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕೆ., ಇಂಜಿನಿಯರ್ ಶಿವರಾಮ, ನಿವ್ರತ ಮುಖ್ಯ ಶಿಕ್ಷಕ ತಮ್ಮಯ್ಯ ಗೌಡ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಕೋಚಕಟ್ಟೆ, ಆಲಂಕಾರು ಕ್ಲಸ್ಟರ್ ಸಿಆರ್ ಪಿ ಪ್ರಕಾಶ್ ಬಾಕಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್ ರೈ ಕೇವಳ ಸಂದರ್ಭೋಚಿತವಾಗಿ ಮಾತನಾಡಿದರು. ಸಂಸ್ಥೆಯ ಸಂಚಾಲಕ ವಿ ಐ ಅಬ್ರಹಾಂ, ಕಾರ್ಯದರ್ಶಿ ವಿ ವಿ ವರ್ಗೀಸ್, ಖಜಾಂಜಿ ಕೆ.ಎಸ್.ತೋಮಸ್, ಮಾಜಿ ಕಾರ್ಯದರ್ಶಿ ಕೆ.ಎಂ.ತೋಮಸ್ , ಸದಸ್ಯ ಝಕರಿಯಾ ಮ್ಯಾಥ್ಯು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ :
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್., ಎಂ ಆರ್ ಪಿಎಲ್ ನ ಹರೀಶ್ ರಾವ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯ ಶಿಕ್ಷಕ ಹರಿಶ್ಚಂದ್ರ ಹಾಗೂ ಎಂ ಆರ್ ಪಿಎಲ್ ನಿಂದ ಅನುದಾನ ತರಿಸುವಲ್ಲಿ ಪ್ರಯತ್ನಿಸಿದ ಶಾಲಾ ಚಿತ್ರ ಕಲಾ ಶಿಕ್ಷಕ ಕಿಶೋರ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡದ ಇಂಜಿನಿಯರ್ ಶಿವರಾಮ ಗೌಡ ಹಾಗೂ ವಿವಿಧ ಕಾಮಗಾರಿ ನಿರ್ವಹಿಸಿದ ಕಾರ್ಮಿಕರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕ ಹರಿಶ್ಚಂದ್ರ ಸ್ವಾಗತಿಸಿ, ಮಾಜಿ ಸಂಚಾಲಕ ರಾಯ್ ಅಬ್ರಹಾಂ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ತ್ರೇಸ್ಯಮ್ಮ, ಶ್ರೀಮತಿ ಭುವನೇಶ್ವರಿ ಪಿ ಯಂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಿಯರು ಪ್ರಾರ್ಥಿಸಿದರು. ಶಿಕ್ಷಕರು ಸಹಕರಿಸಿದರು.

ಶುದ್ಧೀಕರಣ :
ಬ್ರಹ್ಮಾವರ ಧರ್ಮಪ್ರಾಂತ್ಯದ ಬಿಷಪ್ ಯಾಕೋಬ್ ಮಾರ್ ಏಲಿಯಾಸ್ ಅವರು ಆ. 7 ರಂದು ಸಂಜೆ ನೂತನ ಕಟ್ಟಡದ ಶುದ್ಧೀಕರಣ ವಿಧಿ ನೆರವೇರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರೆ.ಫಾ.ನಿತಿನ್ ಮ್ಯಾಥ್ಯು ಹಾಗೂ ಸ್ಥಳೀಯ ಚಚ್೯ ನ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here