ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನೂತನ ಸಭಾಂಗಣದ ಉದ್ಘಾಟನೆ ಮತ್ತು 36ನೇ ವಾರ್ಷಿಕೋತ್ಸವ

0

ಭಾರತೀಯ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆಯಿರಲಿ: ಡಾ. ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ

ಪುತ್ತೂರು: ಭಾರತವು ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀಮಂತ ರಾಷ್ಟ್ರವಾಗಿದೆ. ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲೇ ಅತ್ಯಂತ ವಿಶಿಷ್ಟ ಸ್ಥಾನಮಾನವಿದೆ. ಅರ್ಥಪೂರ್ಣವಾಗಿ ಹಾಗೂ ಮೌಲ್ಯಯುತವಾಗಿ ಯಾವ ರೀತಿ ಬದುಕಬೇಕೆನ್ನುವ ಆದರ್ಶ ಜೀವನಶೈಲಿಯನ್ನು ಜಗತ್ತಿಗೆ ಕೊಟ್ಟ ಶ್ರೇಷ್ಠ ಪರಂಪರೆ ನಮ್ಮದಾಗಿದೆ. ನಮ್ಮ ಭಾರತೀಯ ಭವ್ಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಗೌರವಿಸುವ ಮನಸ್ಸು ನಮ್ಮದಾಗಲಿ ಹಾಗೂ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಜೈನಕಾಶಿ ಮೂಡುಬಿದಿರೆಯ ಜೈನಮಠದ ಪರಮಪೂಜ್ಯ ಜಗದ್ಗುರು, ಭಾರತಭೂಷಣ, ಸ್ವಸ್ಥಿಶ್ರೀ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು. ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ 36ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಅವರು, ನೂತನ ಸಭಾಂಗಣದ ಉದ್ಘಾಟಿಸಿ, ನಂತರ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿಯ ಅಸ್ತಿತ್ವವು ಅದರ ಮೌಲ್ಯಗಳಲ್ಲಿ ತುಂಬಿಕೊಂಡಿದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರಲ್ಲಿದೆ. ಕಾನೂನು ವಿದ್ಯಾರ್ಥಿಗಳಾಗಿ ಭಾರತೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಎಲ್ಲರಿಗೂ ನ್ಯಾಯ ಒದಗಿಸುವ ನಿಷ್ಠಾವಂತ ನ್ಯಾಯಾಧೀಶರು, ನ್ಯಾಯವಾದಿಗಳಾಗಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಸ್ತುತ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾವಾದಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಮಿತಿಯ ಸದಸ್ಯರು ಆಗಿರುವ ನಿಕಟಪೂರ್ವ ಆಡಿಷನಲ್ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಮಾತನಾಡಿ, ಒಬ್ಬ ಕಾನೂನು ವಿದ್ಯಾರ್ಥಿಯಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಳೆದ ಸಮಯವನ್ನು ಮೆಲುಕು ಹಾಕಿದರಲ್ಲದೆ, ಕಾನೂನು ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳನ್ನು ವಿವರಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಅಧ್ಯಕ್ಷರು ಆಗಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಮಾನವೀಯ ಚಿಂತನೆ ಇಟ್ಟುಕೊಂಡು ಬದುಕುತ್ತಿರುವ ಭಾರತೀಯರು ಎಂದಿಗೂ ಬೇರೆಯವರಿಗೆ ಕೆಟ್ಟದು ಮಾಡಲು ಹೋಗಿಲ್ಲ. ಅಂತಹ ವಿಶಿಷ್ಟ ಪರಂಪರೆಯ ಭಾಗಗಳಾಗಿರುವ ನಾವು ಸದೃಢ ಸಮಾಜದ ನಿರ್ಮಾಣಕ್ಕಾಗಿ ಪ್ರಜ್ಞಾವಂತ ನಾಗರಿಕರಾಗಿ ದುಡಿಯೋಣ. ಕಾನೂನು ವಿದ್ಯಾರ್ಥಿಗಳ ಮುಂದೆ ಈ ಅವಕಾಶವಿದ್ದು, ಬಳಸಿಕೊಳ್ಳಿ ಎಂದು ಕರೆ ನೀಡಿದರು. ಗೌರವ ಉಪಸ್ಥಿತರಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಂದ್ರ ಕಿಣಿ ಜಿ. ಮಾತನಾಡಿ ಶುಭಹಾರೈಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ. ಪಿ. ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು. ಇದೇ ವೇಳೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ಹೃತಿಕ್ ರಾಜ್ ವಿದ್ಯಾರ್ಥಿ ಪರಿಷತ್ ನಿಂದ ನಡೆಸಲಾದ ಕಾರ್ಯ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಎಂ., ವಿವೇಕಾನಂದ ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ. ಎಂ., ಕಾನೂನು ಅದ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ. ಕೆ. ರವೀಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಭಾಷಿಣಿ ಜೆ., ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಕು. ಮಾಳವಿಕ ಹಾಗೂ ಜೊತೆ ಕಾರ್ಯದರ್ಶಿ ಕು. ಅರ್ಪಿತಾ ಪ್ರಶಾಂತ್ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಸ್ವಾಗತಿಸಿ, ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕು. ಶ್ವೇತಾ ವಿಶ್ವೇಶ್ವರ ಹೆಗಡೆ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರಿಯಾ ಎಸ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಗಾಯತ್ರಿ ಎನ್. ವೈಯಕ್ತಿಕ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರುಗರು, ಪದಾಧಿಕಾರಿಗಳು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ವಕೀಲರ ಸಂಘದ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತ್ತು.

ನೂತನ ಸಭಾಂಗಣದ ಹೆಸರು ಅನಾವರಣ:
ವಿವೇಕಾನಂದ ಕಾನೂನು ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣದ ಉದ್ಘಾಟನೆ ಹಾಗೂ ನೂತನ ಸಭಾಂಗಣಕ್ಕೆ ಹೆಸರು ಅನಾವರಣ ಕಾರ್ಯಕ್ರಮ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು, ದೃಶ್ಯ ಮಾಧ್ಯಮದ ಮೂಲಕ ನೂತನ ಸಭಾಂಗಣಕ್ಕೆ ‘ಸುಜ್ಞಾನ ದೀಪಿಕಾ’ ಎನ್ನುವ ಹೆಸರನ್ನು ಅನಾವರಣಗೊಳಿಸಿದರು. ಇದೇ ವೇಳೆ ನೂತನ ಸಭಾಂಗಣವನ್ನು ನಿರ್ಮಿಸಿದ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ನ ಗೋಪಾಲ ಮೂಲ್ಯ ರವರನ್ನು ಗುರುತಿಸಿ ಗೌರವಿಸಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ನಡೆಯಿತು. ಶೈಕ್ಷಣಿಕವಾಗಿ ಸಾಧನೆ ಮಾಡಿದ ಹಲವಾರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಸ್ಕೂಲರ್ ಶಿಪ್ ನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ವಿದ್ಯಾರ್ಥಿಗಳನ್ನು ಗುರುತಿಸಿ ಟ್ರೋಫಿ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಸಾಂಸ್ಕೃತಿಕ ಹಾಗೂ ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here