ತ್ಯಾಗ ಸೇವೆಯ ಸಂದೇಶ ಲಕ್ಷ್ಮೀ ಪೂಜೆಯಲ್ಲಿ ಅಡಗಿದೆ- ಮಾಣಿಲ ಶ್ರೀ
ವಿಟ್ಲ: ತ್ಯಾಗ ಸೇವೆಯ ಸಂದೇಶ ಲಕ್ಷ್ಮೀ ಪೂಜೆಯಲ್ಲಿ ಅಡಗಿದೆ. ದೇಶದ ಒಳಿತಿಗಾಗಿ ನಿರಂತರ ಕಾರ್ಯಕ್ರಮಗಳು ನಡೆಯುತ್ತದೆ. ಭಕ್ತಿ ಮಾರ್ಗ ಎಲ್ಲಕ್ಕಿಂತಲೂ ಮಿಗಿಲಾದುದು.
ಪ್ರಪಂಚ ಅನುಭೂತಿಯಿಂದ ದೂರವಾಗುತ್ತಿದೆ. ತಂದೆ – ತಾಯಿ, ಗುರು, ಹಾಗೂ ಹುಟ್ಟಿದ ಮಣ್ಣಿನ ಬಗ್ಗೆ ಗೌರವ ಅಗತ್ಯ. ಎಲ್ಲವನ್ನೂ ಅರಿತವರು ಗುರುಗಳು. ಸನಾತನ ಪದದ ಬಹಳ ಅರ್ಥಪೂರ್ಣವಾದುದು.ಎಲ್ಲರನ್ನು ನಮ್ಮವರೆಂದು ಪ್ರೀತಿಸುವ ಮನಸ್ಸು ನಮ್ಮದಾಗಬೇಕು ಎಂದು ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಂತನಿಗೆ ಸಮಾಜದ ಜವಾಬ್ದಾರಿಯಿದ್ದು, ಲೋಕದ ಒಳಿತಾಗಿ ಭಿಕ್ಷುಕರಾಗುವುದರಲ್ಲಿ ತಪ್ಪಿಲ್ಲ. ಹಿರಿಯ ಹಸಿವಿನ ನೆನಪು ಯುವ ಜನಾಂಗಕ್ಕೆ ಬೇಕಾಗಿದ್ದು, ಆಧ್ಯಾತ್ಮದ ಹಸಿವು ಮನುಷ್ಯನಿಗೆ ಹೆಚ್ಚಾಗಬೇಕು. ಪ್ರತಿಯೊಬ್ಬರಲ್ಲಿ ಅನುಭೂತಿ ಬೆಳೆಸಿಕೊಳ್ಳುವ ಜತೆಗೆ ಸನಾತನ ಧರ್ಮದ ಚಿಂತನೆಯಲ್ಲಿ ಸಾಗುವ ಕಾರ್ಯವಾಗಬೇಕು. ಸುಲಭವಾದುದನ್ನು ಕಠಿಣ ಎಂದು ಬಿಂಬಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ರೇಖಾ ಎಸ್. ಕಾಮತ್ ಕುಟುಂಬದಿಂದ ಗುರುದಕ್ಷಿಣೆ ಸಮರ್ಪಣೆ ನಡೆಯಿತು.ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆಯ ಶಿಕ್ಷಕ ಯತಿರಾಜ್, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಮುಳಿಯ ದಂಬೆ ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಆನಂದ ಶೆಟ್ಟಿ ಮುಳಿಯ, ಸೋಮೇಶ್ವರ ಪರಿಜ್ಞಾನ ಕಾಲೇಜು ಇಂಗ್ಲಿಷ್ ಉಪನ್ಯಾಸಕಿ ಸುಷ್ಮಾ ರಾಕೇಶ್ ಮಂಗಳೂರು, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಶ್ರೀಧಾಮ ಮಿತ್ರ ಮಂಡಳಿಯ ಕಾರ್ಯದರ್ಶಿ ಜಗನ್ನಾಥ ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಮಾಣಿಲ ಕೆ. ಪಿ. ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಶ್ರೀಧಾಮ ವಂದಿಸಿದರು.