ಪುತ್ತೂರು: ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಮ್ಮ ದೇಶದ ಅಖಂಡತೆಯನ್ನು ಸಾರ್ವಭೌಮತೆಯನ್ನು ಉಳಿಸಲು ನಾವೆಲ್ಲರೂ ಕಂಕಣ ಬದ್ಧರಾಗಬೇಕು ಎಂದು ಮುಂಡೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ರಮೇಶ್ ಗೌಡ ಪಜಿಮಣ್ಣು ಹೇಳಿದರು. ಅವರು ಮಂಡೂರು ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಆಕರ್ಷಕವಾದ ಬ್ಯಾಂಡ್ ಸೆಟ್ ಮೂಲಕ ಮೆರವಣಿಗೆಯಲ್ಲಿ ಪಂಚಾಯತ್ ಗೆ ತೆರಳಿ ಅಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲೂ ಭಾಗವಹಿಸಿ, ಬಳಿಕ ಸಿಂಚನ ಗೆಳೆಯರ ಬಳಗ ಬದಿಯಡ್ಕ ಇಲ್ಲಿಗೆ ಘೋಷಣೆಯ ಮೂಲಕ ತೆರಳಿ ಅಲ್ಲಿಂದ ಶಾಲೆಗೆ ಆಗಮಿಸಿ ಬಳಿಕ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ರಮೇಶ್ ಗೌಡ ಪಜಿಮಣ್ಣ ವಹಿಸಿದ್ದರು. ಅತಿಥಿಗಳಾಗಿ ಶಾಲಾ ಅಭಿವೃದ್ಧಿ ಸಮಿತಿಯ ಶಿಕ್ಷಣ ತಜ್ಞರಾದ ಹುಕ್ರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ರೈ, ಸಿಂಚನ ಗೆಳೆಯರ ಬಳಗ ಇದರ ಅಧ್ಯಕ್ಷ ವಿನೋದ್ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸಂಗೀತ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಗೆ ವರ್ಗಾವಣೆಯ ಮೂಲಕ ಸೇರ್ಪಡೆಗೊಂಡ ಸಹಶಿಕ್ಷಕಿ ಮೂಕಾಂಬಿಕಾ ಇವರನ್ನು ಸ್ವಾಗತಿಸಲಾಯಿತು.
ಶಾಲೆಯ ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯಗುರು ವಿಜಯ ಪಿ ಸ್ವಾಗತಿಸಿದರು. ಶಿಕ್ಷಕ ರವೀಂದ್ರ ಶಾಸ್ತ್ರಿ ವಂದಿಸಿದರು. ಹಿರಿಯ ಶಿಕ್ಷಕ ರಾಮಚಂದ್ರ ಬಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಶಕುಂತಳಾ ಹಾಗೂ ಗೌರವ ಶಿಕ್ಷಕಿ ಅಂಕಿತಾ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ದೈಹಿಕ ಶಿಕ್ಷಣ ಶಿಕ್ಷಕಿ ಬಿ ವನಿತ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.ಸಹ ಶಿಕ್ಷಕ ಅಬ್ದುಲ್ ಬಷೀರ್ ಕೆ ಕಾರ್ಯಕ್ರಮ ನಿರೂಪಿಸಿದರು.