ಆ.24: ಮುಂಬೈಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರ 2 ಕೃತಿಗಳ ಅನಾವರಣ- ‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಠಿ’ ಮತ್ತು ‘ಸೀಯನ’

0

ಮುಂಬಯಿ: ಕರಾವಳಿ ಕರ್ನಾಟಕದ ಹೆಸರಾಂತ ಸಾಹಿತಿ, ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿಗಳೆರಡು ಮುಂಬೈ ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಆ.24 ರಂದು ಶನಿವಾರ ಸಂಜೆ ಗಂ.4 ಕ್ಕೆ ಅನಾವರಣಗೊಳ್ಳಲಿವೆ. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಪ್ರಸಕ್ತ ವರ್ಷ ನಡೆಯಲಿರುವ ಸರಣಿ ತಾಳಮದ್ದಳೆ ಉದ್ಘಾಟನಾ ಸಮಾರಂಭದಲ್ಲಿ ಈ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ.

‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಠಿ’ ಕನ್ನಡ ಕವನ ಸಂಕಲನ:
ಕವಿ ಕುಕ್ಕುವಳ್ಳಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ರಚಿಸಿದ ವಿವಿಧ ಕನ್ನಡ ಕವನಗಳು ಕಾವ್ಯ ಸಿರಿ, ಭಾವ ಸಿರಿ,ಭಕ್ತಿ ಸಿರಿ ಎಂಬ ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’: ಭಾವ-ಅನುಭಾವ ಗೀತೆಗಳ ಗುಚ್ಛವನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇ.ಮೂ.ಪೆರ್ಣಂಕಿಲ ಹರಿದಾಸ ಭಟ್ ಅನಾವರಣಗೊಳಿಸುವರು.

‘ಸೀಯನ’ ತುಳು ಗೊಂಚಿಲ್:
ಮಾತೃಭಾಷೆ ತುಳುವಿನಲ್ಲಿ ಸಬಿ ಸೀಯನ, ಸೀಪೆ ಸೀಯನ,ಸುಗಿಪು ಸೀಯನ ಎಂಬ ಮೂರು ಗೊಂಚಲುಗಳಾಗಿ ಹೊರಬಂದಿರುವ ‘ಸೀಯನ’ ಚೀಪೆ ಕೋಪೆದ ಪಾಕ ಕಬಿತೆಲು – ಸಂಕಲನವನ್ನು ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಬಿಡುಗಡೆಗೊಳಿಸುವರು. ಈ ಎರಡೂ ಕವನ ಸಂಕಲನಗಳನ್ನು ಮೈಸೂರಿನ ರಾಜ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.
ಮುಂಬೈಯ ಹಿರಿಯ ಅರ್ಥಧಾರಿ ಕೆ.ಕೆ.ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕೃತಿಕರ್ತರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಉಪಸ್ಥಿತರಿರುವರು. ಕಲಾವಿದ ಸದಾಶಿವ ಆಳ್ವ ತಲಪಾಡಿ ಕೃತಿ ಪರಿಚಯ ನೀಡುವರು‌. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಲಿರುವರು.

‘ತುಳುನಾಡ ಬಲೀಂದ್ರೆ- ಜಾಬಾಲಿ ನಂದಿನಿ’ ತಾಳಮದ್ದಳೆ:
ಉದ್ಘಾಟನಾ ಸಮಾರಂಭದ ಬಳಿಕ ತಾಳಮದ್ದಳೆ ಸರಣಿಯ ಮೊದಲ ಕಾರ್ಯಕ್ರಮವಾಗಿ ‘ತುಳುನಾಡ ಬಲೀಂದ್ರೆ’ (ತುಳು), ‘ಜಾಬಾಲಿ-ನಂದಿನಿ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗುವುದು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸುವರು. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಗುರುತೇಜ ಶೆಟ್ಟಿ ಒಡಿಯೂರು ಅರ್ಥಧಾರಿಗಳಾಗಿರುವರು ಎಂದು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here