ಕಟ್ಟಡ ಕುಸಿತಗೊಂಡ ಕುಂತೂರು ಶಾಲೆಗೆ ಶಾಸಕಿ ಭಾಗೀರಥಿ ಮುರುಳ್ಯ, ಅಧಿಕಾರಿಗಳ ಭೇಟಿ-ಪೂರ್ಣ ಕಟ್ಟಡ ನೆಲಸಮಕ್ಕೆ ನಿರ್ಧಾರ

0

5 ಹೊಸ ಕೊಠಡಿ ನಿರ್ಮಾಣಕ್ಕೆ 1 ಕೋಟಿ ರೂ.ಗೆ ಸರಕಾರಕ್ಕೆ ಮನವಿ: ಭಾಗೀರಥಿ ಮುರುಳ್ಯ

ಪುತ್ತೂರು: ಶಾಲಾ ಕಟ್ಟಡ ಕುಸಿತಗೊಂಡ ಕಡಬ ತಾಲೂಕಿನ ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಅಧಿಕಾರಿಗಳ ತಂಡ ಆ.28ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲಾ ಎಸ್‌ಡಿಎಂಸಿ ಹಾಗೂ ಪೋಷಕರ ಜೊತೆ ಸಭೆ ನಡೆಸಿದರು. ಶಾಸಕಿ ಭಾಗೀರಥಿ ಮುರುಳ್ಯ ಅವರು ಬೆಳಿಗ್ಗೆಯೇ ಶಾಲೆಗೆ ಆಗಮಿಸಿ ಕುಸಿತಗೊಂಡ ಕಟ್ಟಡದ ಪರಿಶೀಲನೆ ನಡೆಸಿ ಕಡಬಕ್ಕೆ ತೆರಳಿ ಆಡಳಿತ ಸೌಧದಲ್ಲಿ ಬಿಇಒ, ತಹಶೀಲ್ದಾರ್ ಹಾಗೂ ಇತರೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮತ್ತೆ ಅಧಿಕಾರಿಗಳ ಜೊತೆಗೆ ಶಾಲೆಗೆ ಆಗಮಿಸಿ ಪೋಷಕರ ಸಭೆ ನಡೆಸಿದರು.


5 ಹೊಸ ಕೊಠಡಿ ನಿರ್ಮಾಣ ಭರವಸೆ:
ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ವಿಪರೀತ ಮಳೆಯಿಂದಾಗಿ ಶಾಲಾ ಕಟ್ಟಡ ಕುಸಿತವಾಗಿದೆ. ನಡೆಯಬಾರದ ಘಟನೆ ನಡೆದುಹೋಗಿದೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ನಾವು ಚಿಂತಿಸಬೇಕಾಗಿದೆ. ಘಟನೆ ಕುರಿತಂತೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಜೊತೆಯೂ ಮಾತುಕತೆ ನಡೆಸಿದ್ದೇನೆ. ಹಳೆಯ ಕಟ್ಟಡವನ್ನು ಒಂದು ವಾರದೊಳಗೆ ಸಂಪೂರ್ಣ ನೆಲಸಮಗೊಳಿಸಿ ಇಲ್ಲಿಗೆ ತುರ್ತಾಗಿ 5 ಹೊಸ ಕೊಠಡಿ ನಿರ್ಮಾಣಕ್ಕೆ 1 ಕೋಟಿ ರೂ., ಅನುದಾನಕ್ಕೆ ಸರಕಾರಕ್ಕೆ ಮನವಿ ಮಾಡಲಾಗುವುದು. ಜೊತೆಗೆ ಎಂಆರ್‌ಪಿಎಲ್‌ನವರಿಗೆ ಸಿಎಸ್‌ಆರ್ ನಿಧಿಯಲ್ಲಿ ಕೊಠಡಿ ನಿರ್ಮಾಣಕ್ಕೆ ಮನವಿ ಮಾಡಲಾಗುವುದು. ಅಲ್ಲಿಯ ತನಕ ಸಮೀಪದಲ್ಲಿ ಬಾಡಿಗೆ ಕಟ್ಟಡ ಇದ್ದಲ್ಲಿ ಅಲ್ಲಿಗೆ ತರಗತಿ ತಾತ್ಕಾಲಿಕ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪೋಷಕರು, ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕೆಂದು ಹೇಳಿದರು. ಸುಳ್ಯ ಕ್ಷೇತ್ರದ ಸರಕಾರಿ ಶಾಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೆ. ಸರಕಾರದಲ್ಲಿ ಹಣ ಇಲ್ಲದ ಕಾರಣ ಒಟ್ಟು 90 ಲಕ್ಷ ರೂ.ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲು ತಿಳಿಸಿದ್ದರು. ನಂತರ ರೂ.30 ಲಕ್ಷಕ್ಕೆ ಕ್ರೀಯಾ ಯೋಜನೆ ಮಾಡಲು ತಿಳಿಸಿದ್ದರು. ಅದರಲ್ಲಿ ಕುಂತೂರು ಸರಕಾರಿ ಶಾಲೆಗೆ ರೂ 1.50 ಲಕ್ಷ ಹಣ ದುರಸ್ತಿಗೆ ನೀಡಲಾಗಿತ್ತು ಎಂದು ಶಾಸಕಿ ಭಾಗೀರಥಿ ತಿಳಿಸಿದರು.

ಮುಖ್ಯಶಿಕ್ಷಕರ ಕೊಠಡಿಯ ಹಳೆ ಕಟ್ಟಡವೂ ತೆರವು:
ಸರ್ವಶಿಕ್ಷಣ ಅಭಿಯಾನದಡಿ 2011-12ನೇ ಸಾಲಿನಲ್ಲಿ 4.46 ಲಕ್ಷ ರೂ.ಸರಕಾರದ ಅನುದಾನ ಹಾಗೂ ದಾನಿಯೊಬ್ಬರ ರೂ.75 ಸಾವಿರ ಕೊಡುಗೆಯಲ್ಲಿ ನಿರ್ಮಾಣಗೊಂಡ ಮುಖ್ಯಶಿಕ್ಷಕರ ಕೊಠಡಿಯ ಗೋಡೆ ಬಿರುಕು ಬಿಟ್ಟಿದ್ದು ಇದರಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಆದ್ದರಿಂದ ಈ ಕೊಠಡಿಯನ್ನೂ ತೆರವುಗೊಳಿಸುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಇಒ ಲೋಕೇಶ್ ಎಸ್.ಆರ್. ಅವರು ಪೋಷಕರ ಪ್ರಶ್ನೆಗೆ ಉತ್ತರಿಸಿದರು. ಈ ವಿಚಾರವಾಗಿ ಮಾತನಾಡಿದ ಗ್ರಾ.ಪಂ.ಸದಸ್ಯ ಸದಾನಂದ ಕುಂಟ್ಯಾನ ಅವರು, 5 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡ ಕೊಠಡಿ ಐದೇ ವರ್ಷದಲ್ಲಿ ಬಿರುಕು ಬಿಟ್ಟು ನಿರುಪಯುಕ್ತವಾಗಿದೆ. ಇದಕ್ಕೆ ಯಾರು ಹೊಣೆ. ಜನರ ತೆರಿಗೆ ಹಣವನ್ನು ಸರಕಾರ ಅನುದಾನದ ರೂಪದಲ್ಲಿ ಕಟ್ಟಡಕ್ಕೆ ನೀಡಿದೆ. ಆದರೆ ಆ ಕಟ್ಟಡ 5 ವರ್ಷದಲ್ಲೇ ನಿರುಪಯುಕ್ತವಾಗಿದೆ. ಈ ಕಟ್ಟಡದ ಕಳಪೆ ಕಾಮಗಾರಿಗೆ ಕಾರಣರಾದ ಇಂಜಿನಿಯರ್, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ವೇಳೆ ಮಾತನಾಡಿದ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಭವಾನಿಶಂಕರ್ ಅವರು, ಅದು ಸರ್ವಶಿಕ್ಷಣ ಅಭಿಯಾನದಲ್ಲಿ ಆಗಿರುವ ಕಟ್ಟಡ. ಇದರ ಬಗ್ಗೆ ವಿಸ್ತೃತ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ಎಂದರು.

ಪಕ್ಕದ ಖಾಸಗಿ ಕಟ್ಟಡಕ್ಕೆ ತರಗತಿ ಸ್ಥಳಾಂತರ:
ಶಾಲಾ ಮೈದಾನಕ್ಕೆ ಹೊಂದಿಕೊಂಡಿರುವ ಸಫ್ವಾನ್ ಗ್ರೂಫ್ ಅವರಿಗೆ ಸೇರಿದ ಕಟ್ಟಡಕ್ಕೆ ತರಗತಿ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲು ನಿರ್ಧಾರ ಮಾಡಲಾಗಿದೆ. 1 ರಿಂದ 3 ತನಕದ ತರಗತಿಯನ್ನು ಈಗಿರುವ ನಲಿಕಲಿ ಕಟ್ಟಡದಲ್ಲಿ ಮುಂದುವರಿಸುವುದು. ಉಳಿದಂತೆ ಶಿಕ್ಷಕರ ಕಚೇರಿಯ ಮುಂಭಾಗದ ಹಾಲ್, ರಂಗಮಂದಿರವನ್ನು ತರಗತಿ ನಡೆಸಲು ಉಪಯೋಗಿಸುವುದು ಹಾಗೂ ಉಳಿದ ತರಗತಿಗಳನ್ನು ಶಾಲಾ ಮೈದಾನದ ಪಕ್ಕದಲ್ಲೇ ಇರುವ ಸಫ್ವಾನ್ ಗ್ರೂಫ್‌ನವರ ಕಟ್ಟಡದ ನೆಲ ಅಂತಸ್ತಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ತರಗತಿ ನಡೆಸಲು ಉಚಿತವಾಗಿ ಕಟ್ಟಡ ನೀಡುವುದಾಗಿಯೂ ಸಫ್ವಾನ್ ಗ್ರೂಫ್‌ನವರು ಒಪ್ಪಿಕೊಂಡಿದ್ದಾರೆ. ಶಾಸಕರು ಹಾಗೂ ಅಧಿಕಾರಿಗಳು ಸಭೆಯ ಬಳಿಕ ಕಟ್ಟಡಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಶಾಸಕರು ಕಟ್ಟಡದ ಮಾಲಕರೊಂದಿಗೆ ದೂರವಾಣಿ ಮೂಲಕ ಮಾತುಕತೆಯೂ ನಡೆಸಿದರು. ಇದಕ್ಕೂ ಮೊದಲು ಗ್ರಂಥಾಲಯ, ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ತರಗತಿ ನಡೆಸುವ ಬಗ್ಗೆಯೂ ಚರ್ಚೆ ನಡೆಯಿತು.

ಇಂಜಿನಿಯರ್ ವಿರುದ್ಧ ದೂರು:
ಗ್ರಾ.ಪಂ.ಸದಸ್ಯ ಸಿ.ಎಂ.ಫಯಾಜ್ ಅವರು ಮಾತನಾಡಿ, ಶಾಲಾ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಜಿನಿಯರ್, ಮುಖ್ಯಶಿಕ್ಷಕರ ಅಮಾನತು ಮಾಡಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಪೋಷಕರಿಗೆ ಪೊಲೀಸ್ ಠಾಣೆಯಿಂದ ಕರೆ ಮಾಡಿ ದೂರು ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಶಾಲಾ ವತಿಯಿಂದಲೇ ಇಂಜಿನಿಯರ್ ವಿರುದ್ಧ ದೂರು ದಾಖಲಿಸಬೇಕು ಎಂದು ಪೋಷಕರು ಹೇಳುತ್ತಿದ್ದಾರೆ. ಇಲ್ಲದೇ ಇದ್ದಲ್ಲಿ ಅದೇ ಇಂಜಿನಿಯರ್ ಬೇರೆ ಕಡೆಯೂ ಈ ರೀತಿ ಮಾಡಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಭಾಗೀರಥಿ ಅವರು, ಇಂಜಿನಿಯರ್ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಸಮನ್ವಯ ರೀತಿಯಲ್ಲಿ ನಿರ್ಧಾರ ಕೈಗೊಳ್ಳುವ. ಗಾಯಗೊಂಡಿರುವ ಮಕ್ಕಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿಯೂ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ನಿರ್ವಹಣೆ ಜವಾಬ್ದಾರಿ ಕೊಡಿ:
ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳೀಯರೆಲ್ಲರಿಗೂ ಶಾಸಕರು, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧ್ಯವಿಲ್ಲ. ಆದ್ದರಿಂದ ಸ್ಥಳೀಯ ತಂಡವೊಂದನ್ನು ರಚಿಸಿ ಅದಕ್ಕೆ ಒಬ್ಬರಿಗೆ ನಾಯಕತ್ವ ನೀಡಿ ಅವರ ಮೂಲಕ ಶಾಸಕರ, ಅಧಿಕಾರಿಗಳ ಸಂಪರ್ಕ ಆಗಬೇಕೆಂದು ಪೋಷಕರು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆದು ಗ್ರಾ.ಪಂ.ಸದಸ್ಯ, ಮಾಜಿ ಅಧ್ಯಕ್ಷರೂ ಆದ ಚಂದ್ರಶೇಖರ ರೈ ಅವರಿಗೆ ಜವಾಬ್ದಾರಿ ನೀಡಲಾಯಿತು.

ಮುಖ್ಯಶಿಕ್ಷಕರ ಅಮಾನತು ಹಿಂತೆಗೆದುಕೊಳ್ಳಿ:
ಘಟನೆ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕ ರಮೇಶ್ ಅವರನ್ನು ಅಮಾನತುಗೊಳಿಸಲಾಗಿದೆ.ಆದರೆ ಈ ಘಟನೆಯಲ್ಲಿ ಅವರಿಂದ ಯಾವುದೇ ತಪ್ಪು ಆಗಿಲ್ಲ. ಅವರು ಶಾಲೆಗೆ ಬಂದ ಬಳಿಕ ಹಲವು ಅಭಿವೃದ್ಧಿ ಕೆಲಸವೂ ಆಗಿದೆ. ಆದ್ದರಿಂದ ಅವರ ಅಮಾನತು ಆದೇಶ ಹಿಂತೆಗೆದುಕೊಂಡು ಅವರನ್ನು ಈ ಶಾಲೆಯಲ್ಲಿಯೇ ಮುಖ್ಯಶಿಕ್ಷಕರಾಗಿ ಮುಂದುವರಿಸಬೇಕೆಂದೂ ಎಸ್‌ಡಿಎಂಸಿ, ಪೋಷಕರು ಸಭೆಯಲ್ಲಿ ಒತ್ತಾಯಿಸಿದರು. ಈ ಬಗ್ಗೆ ಎಸ್‌ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಸಕರಿಗೆ ಲಿಖಿತ ಮನವಿಯೂ ಸಲ್ಲಿಸಲಾಯಿತು.

74 ವರ್ಷಗಳ ಇತಿಹಾಸ:
ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ 10-1-1951ರಲ್ಲಿ ಸ್ಥಾಪನೆಗೊಂಡಿದ್ದು 74 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ ಹಂತ ಹಂತವಾಗಿ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಶಾಲೆಗೆ 5.08 ಎಕ್ರೆ ಜಾಗವೂ ಇದೆ. ಈಗ ಇಲ್ಲಿ ಸುಮಾರು 100 ಮೀಟರ್‌ಗೂ ಹೆಚ್ಚು ಉದ್ದದ ಹಂಚಿನ ಛಾವಣಿಯ ಶಾಲಾ ಕಟ್ಟಡ, ನಲಿಕಲಿ ತರಗತಿ ನಡೆಸುತ್ತಿರುವ ಕಾಂಕ್ರಿಟ್ ಕಟ್ಟಡ, ಶಿಕ್ಷಕರ ಕಚೇರಿಯಿರುವ ಕಾಂಕ್ರಿಟ್ ಕಟ್ಟಡ, ರಂಗಮಂದಿರ ಇದೆ. 100 ಮೀಟರ್‌ಗೂ ಹೆಚ್ಚು ಉದ್ದದ ಹಂಚಿನ ಛಾವಣಿಯಿದ್ದ ಶಾಲಾ ಕಟ್ಟಡದ ಒಂದು ಬದಿಯ ಹಿಂಬದಿಯ ಗೋಡೆ ಹಾಗೂ ಮೇಲ್ಛಾವಣಿ ಆ.27ರಂದು ಮಧ್ಯಾಹ್ನದ ವೇಳೆಗೆ ಕುಸಿದು ಬಿದ್ದಿದೆ. 50 ವರ್ಷ ಹಳೆಯದಾಗಿರಬಹುದು ಎನ್ನಲಾದ ಈ ಕಟ್ಟಡ ಮೊದಲೇ ಶಿಥಿಲಗೊಂಡಿದ್ದು ಇದಕ್ಕೆ ಹಿಂಬದಿಯಲ್ಲಿ ಆಧಾರವಾಗಿ ತಡೆಗೋಡೆ ನಿರ್ಮಾಣ ಮಾಡಲೆಂದು ಜೆಸಿಬಿಯಲ್ಲಿ ಪಾಯ ತೆಗೆಯುತ್ತಿದ್ದ ವೇಳೆ ಕಟ್ಟಡ ಕುಸಿದು ಬಿದ್ದಿದೆ. ಈಗ ಈ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ತರಗತಿ ನಡೆಸಲು ಅಸಾಧ್ಯ: ಇಂಜಿನಿಯರ್
ಶಾಸಕರು ಹಾಗೂ ಸಹಾಯಕ ಆಯುಕ್ತರ ಸೂಚನೆಯಂತೆ ಆ.28 ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಹಾಯಕ ಇಂಜಿನಿಯರ್ ಭರತ್ ಬಿ.ಎಂ.ಅವರು ಶಾಲೆಗೆ ಭೇಟಿ ನೀಡಿ ಕುಸಿತಗೊಂಡ ಕಟ್ಟಡದ ಇನ್ನೊಂದು ಭಾಗದಲ್ಲಿದ್ದ ಕೊಠಡಿಗಳ ಗುಣಮಟ್ಟ ಪರಿಶೀಲನೆ ನಡೆಸಿದರು. ಈ ಕೊಠಡಿಗಳೂ ಶಿಥಿಲವಾಗಿದ್ದು ತರಗತಿ ನಡೆಸಲು ಅಸಾಧ್ಯ ಎಂದು ಅವರು ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಪೆರಾಬೆ ಗ್ರಾ.ಪಂ.ಸದಸ್ಯೆ ಮಮತಾ ಅಂಬರಾಜೆ, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಬಾಣಬೆಟ್ಟು ಅವರು ವಿವಿಧ ವಿಚಾರಗಳನ್ನು ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು. ಸಭೆಯಲ್ಲಿ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಕಡಬ ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್, ಜಿ.ಪಂ.ಇಂಜಿನಿಯರಿಂಗ್ ಪುತ್ತೂರು ಉಪವಿಭಾಗದ ಸಹಾಯಕ ಇಂಜಿನಿಯರ್ ಭರತ್ ಬಿ.ಎಂ., ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ, ಉಪಾಧ್ಯಕ್ಷೆ ವೇದಾವತಿ, ಪಿಡಿಒ ಶಾಲಿನಿ ಕೆ.ಬಿ., ಸದಸ್ಯರಾದ ಚಂದ್ರಶೇಖರ ರೈ, ಕುಮಾರ್ ಬಿ.ಕೆ., ಕೃಷ್ಣ ಎರ್ಮಾಳ, ರಾಜು, ಮೋಹಿನಿ, ಲೀಲಾವತಿ, ಮೇನ್ಸಿ ಸಾಜನ್, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಆಲಂಕಾರು ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್ ಬಾಕಿಲ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಎಸ್‌ಡಿಎಂಸಿ ಉಪಾಧ್ಯಕ್ಷೆ ಅಪ್ಸಾ, ಸದಸ್ಯರಾದ ಮಲ್ಲಿಕಾ, ಖಾಸೀಂ, ರೈಹಾನ, ಜೋಹರಾ, ರಮೀಝ, ವಿಶ್ವನಾಥ ಗೌಡ, ಕವಿತಾ, ಮಾಧವಿ, ಶೇಖರ ಗೌಡ, ಸುಂದರ ನಾಯ್ಕ್, ಸುಮಿತ್ರಾ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಪ್ರಕಾಶ್ ಮರುವಂತಿಲ, ಎಸ್‌ಡಿಎಂಸಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ ಹಾಗೂ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಮಧ್ಯಾಹ್ನ ಪುತ್ತೂರು ಡಿವೈಎಸ್‌ಪಿ ಅವರು ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here