ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ಸೇತುವೆಯ ಬದಿ ಸೆ.3ರಂದು ಮೊಸಳೆಯೊಂದು ಪತ್ತೆಯಾಗಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ.
ಸೆ.3ರ ಸಂಜೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ನದಿಯ ಮತ್ತೊಂದು ಬದಿಯಲ್ಲಿ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಫಯಾಜ್ ಯು.ಟಿ. ಅವರು ಗಮನಿಸಿದ್ದು, ಇದರ ಪೋಟೋವನ್ನು ಕ್ಲಿಕ್ಕಿಸಿದ್ದಾರೆ. ದೊಡ್ಡ ಗಾತ್ರದ ಮೊಸಳೆ ಇದಾಗಿದೆ. ಕಳೆದ 2022ರ ಸೆಪ್ಟೆಂಬರ್ ತಿಂಗಳಲ್ಲಿ ಪಂಜಳದ ಪೆಟ್ರೋಲ್ ಪಂಪ್ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದವು. ಮಧ್ಯಾಹ್ನ ಹೊತ್ತಿನಲ್ಲಿ ನದಿ ಮಧ್ಯದಲ್ಲಿ ಇರುವ ಕುರುಚಲು ಹುಲ್ಲನ್ನು ಹೊಂದಿರುವ ಮರಳ ದಿಬ್ಬದ ಮೇಲೆ ಈ ಮೊಸಳೆಗಳು ವಿಶ್ರಾಂತಿ ಪಡೆಯುವುದು ಕಂಡು ಬಂದಿತ್ತು. ಇದರಲ್ಲಿ ಒಂದು ಮೊಸಳೆ ದೊಡ್ಡ ಗಾತ್ರದಾದರೆ, ಇನ್ನೆರಡು ಮೊಸಳೆಗಳು ಅದಕ್ಕಿಂತ ಸ್ವಲ್ಪ ಸಣ್ಣ ಗಾತ್ರದವಾಗಿದ್ದವು.
ಆದರೆ ಈ ಬಾರಿ ಒಂದು ಮೊಸಳೆ ಮಾತ್ರ ಕಂಡು ಬಂದಿದೆ. ನೇತ್ರಾವತಿ ನದಿಯಲ್ಲಿ ಮೊಸಳೆಗಳ ವಾಸ ಇವೆ ಎನ್ನುವುದಕ್ಕೆ ಇದು ಪುಷ್ಠಿ ನೀಡಿದೆ.
ಮೊಸಳೆ ಕಂಡು ಬಂದ ಸುಮಾರು 500 ಮೀ. ದೂರದಲ್ಲಿ ನೇತ್ರಾವತಿ- ಕುಮಾರಧಾರ ನದಿಗಳು ಸಂಗಮವಾಗುತ್ತಿದ್ದು, ಅಲ್ಲೇ ಇರುವ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರ ನಡೆಯುತ್ತಿವೆ. ಅಲ್ಲದೇ, ಈ ಭಾಗದಲ್ಲೆಲ್ಲಾ ನದಿಗಿಳಿದು ಮೀನು ಹಿಡಿಯಲು ಬಲೆ ಹಾಕುವುದು, ಗಾಳ ಹಾಕುವುದು ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಇದೇ ನದಿಯಲ್ಲಿ ಮೊಸಳೆ ಕಂಡು ಬಂದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.