ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂಸ್ಕೃತ ಸಂಘ ಇದರ ಆಶ್ರಯದಲ್ಲಿ ಸೆ.3ರಂದು ಕಾಲೇಜಿನ ಸಭಾಂಗಣದಲ್ಲಿ ‘ಸಂಸ್ಕೃತ ಮತ್ತು ಆಯುರ್ವೇದ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ತಲಪಾಡಿ ಶಾರದಾ ಆಯುರ್ವೇದ ಕಾಲೇಜಿನ ಸಂಹಿತ ಸಿದ್ಧಾಂತ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕರಾದ ಗಣೇಶ್ ಕೃಷ್ಣ ಶರ್ಮಾ ಎಂ ವಿ ಮಾತನಾಡಿ ಸಂಸ್ಕೃತ ಬಹಳ ಪ್ರಧಾನವಾದ ಭಾಷೆ ಅಲ್ಲದೆ ಜೀವನದಲ್ಲಿ ಸಂಸ್ಕಾರವನ್ನು ಬೆಳೆಸುವ ಭಾಷೆ. ಆಯುರ್ವೇದ ಶಾಸ್ತ್ರ ಅಧ್ಯಯನಕ್ಕೆ ಸಂಸ್ಕೃತವೇ ಮೂಲಾಧಾರ. ಸಂಸ್ಕೃತದಿಂದ ಬುದ್ಧಿ ಸಾಮರ್ಥ್ಯ ವೃದ್ಧಿಸುತ್ತದೆ. ಮನಸ್ಸು ಶಾಂತಗೊಳ್ಳುತ್ತದೆ. ಯೋಗ, ವ್ಯಾಯಾಮ, ಪಂಚ ಕರ್ಮಗಳೆಲ್ಲವೂ ಹಿಂದಿನ ಕಾಲದಂತೆ ಈಗಲೂ ಚಾಲ್ತಿಯಲ್ಲಿದೆ. ವಿದ್ಯಾರ್ಥಿಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದಿದರೆ ವಿದ್ಯೆಗೂ, ಆರೋಗ್ಯಕ್ಕೂ ಉತ್ತಮ. ಭಾಷೆ ಅಧ್ಯಯನ ವ್ಯಾಕರಣ ಸಹಿತವಾಗಿ ಅಭ್ಯಾಸಿಸಬೇಕು. ಉಚ್ಚಾರ ತಪ್ಪಿದರೆ ಅರ್ಥ ವ್ಯತ್ಯಾಸ ಉಂಟಾಗುತ್ತದೆ. ವರ್ಣಗಳ ಉತ್ಪತ್ತಿ ,ಸ್ಥಾನಗಳ ಮಹತ್ವದ ಕುರಿತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ವಿದ್ಯಾರ್ಥಿಗಳು ಹಿತವಾಗಿ, ಮಿತವಾಗಿ ಕಾಲಕ್ಕನುಗುಣವಾಗಿ ಆಹಾರ ಸೇವನೆ, ನಿದ್ರೆ, ಎದ್ದೇಳುವುದು ಮಾಡಿದರೆ ಆರೋಗ್ಯ ವೃದ್ಧಿಯಾಗಲು ಸಾಧ್ಯ. ಅನಾರೋಗ್ಯಕ್ಕೆ ಉತ್ತಮ ಮನೆಮದ್ದುಗಳು ಇದ್ದು, ಅದನ್ನು ಅರಿಯುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಸಂಘದ ನಿರ್ದೇಶಕರಾದ ಸುರೇಶ್ ಕುಮಾರ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಕೃತ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಅಪೂರ್ವ ಸ್ವಾಗತಿಸಿ, ಆಕಾಶ್ ಪಿ.ಜಿ ಅತಿಥಿಗಳನ್ನು ಪರಿಚಯಿಸಿದರು. ಅನ್ಸೀನ ವಂದಿಸಿ, ತೃಷಾ ಕಾರ್ಯಕ್ರಮವನ್ನು ನಿರೂಪಿಸಿದರು.