ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಸುಂದರ ಪೂಜಾರಿ
ಪುತ್ತೂರು: 1 ಕೆಜಿ ಹಿಂಡಿಗೆ ರೂ. 30 ರಿಂದ 40ರಷ್ಟು ದರವಿದೆ. 1 ಬಾಟಲಿ ನೀರಿಗೂ ಸಹ 15ರಿಂದ 20ರಷ್ಟು ದರವಿದೆ. ಹಾಗಿರುವ ಹಾಲು ಉತ್ಪಾದಕರಿಗೂ ಕನಿಷ್ಠ ರೂ. 45ರಿಂದ 50ರಷ್ಟು ದರ ನೀಡಬೇಕು ಎಂದು ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಹೇಳಿದರು.
ಸೆ.24ರಂದು ಕೃಷ್ಣನಗರ ಆಶೀರ್ವಾದ ಕಾಂಪ್ಲೆಕ್ಸ್ ನಲ್ಲಿ ನಡೆದ ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇವತ್ತು ಹೈನುಗಾರಿಕೆಯಲ್ಲಿ ಹಾಲು ಉತ್ಪಾದನೆ ಬಹಳ ಕಷ್ಟದ ಕೆಲಸ. ಸದ್ಯ ಹಾಲು ಉತ್ಪಾದಕರಿಗೆ ನೀಡುವ ರೂ.35 ಎಲ್ಲೂ ಸಾಲದು ಇದರ ಜೊತೆಗೆ ಸರಕಾರ ಪ್ರೋತ್ಸಾಹ ಧನ ರೂ.5 ನೀಡುತ್ತಾರೆಯಾದರೂ ಅದು ಜಮೆ ಆಗುವುದು ತಡ ಆಗುತ್ತಿದೆ. ಇವತ್ತು ಬೇರೆಲ್ಲ ವಸ್ತುಗಳಿಗೆ ದರ ಏರಿಕೆಯಾಗುತ್ತಿದೆ. ಒಂದು ಬಾಟಲ್ ನೀರಿಗೂ ದರ ಏರಿಕೆಯಾಗಿದೆ. ಹಾಲು ವಿತರಣೆ ಮಾಡುವ ಉತ್ಪಾಕದರಿಗೆ ಮಾತ್ರ ದರ ಏರಿಕೆಯಾಗಿಲ್ಲ. ಯಾವ ಸರಕಾರವೂ ಆಗಲಿ ಹಾಲಿನ ವಿಚಾರದಲ್ಲಿ ಮಧ್ಯೆ ಪ್ರವೇಶಿಸದೆ ಹೈನುಗಾರರಿಗೆ ಸಹಕಾರ ನೀಡಬೇಕು ಎಂದರು. ಇವತ್ತು ಒಕ್ಕೂಟದಲ್ಲಿ ದಿನದಿಂದ ದಿನಕ್ಕೆ ಹಾಲು ಇಳಿಕೆಯಾಗುತ್ತಿದೆ. ಹಾಗಾಗಿ ಒಕ್ಕೂಟ ಉಳಿಯಬೇಕಾದರೆ ಪ್ರತಿ ಮನೆಯಲ್ಲೂ ಕನಿಷ್ಠ ಎರಡು ದನ ಸಾಕಬೇಕು. ಇದು ನಮ್ಮ ಆರೋಗ್ಯಕ್ಕೂ ಉತ್ತಮ ಎಂದರು.
ಹಾಲಿನ ದರ ಕಂಡಿತಾ ಹೆಚ್ಚಾಗಲಿದೆ:
ವಿಸ್ತರಣಾಧಿಕಾರಿ ಮಾಲತಿ ಅವರು ಮಾತನಾಡಿ ಸಂಘದಲ್ಲಿ ಹಿಂದಿನದಕ್ಕಿಂತ ಇವತ್ತು ದಿನಪ್ರಂತಿ 116 ಲೀಟರ್ ಕಡಿಮೆ ಆಗಿದೆ. ಆದರೆ ಇದಕ್ಕೆ ನಾನಾ ಕಾರಣ ಇರಬಹುದು. ಹೆಚ್ಚಿನ ಮನೆಯಲ್ಲಿ ಮೂರು ನಾಲ್ಕು ದನಗಳಿರುವಲ್ಲಿ ಈಗ ಒಂದೆರಡು ದನ ಮಾತ್ರ ಇದೆ. ಇನ್ನೊಂದು ಕಡೆ ಹಾಲಿನ ದರದ ಕುರಿತು ಪ್ರಸ್ತಾಪವೂ ಇರಬಹುದು. ಆದರೆ ಪತ್ರಿಕೆಯಲ್ಲಿ ಬಂದಿರುವಂತೆ ಖಂಡಿತಾ ಹಾಲಿನ ದರ ಏರಿಕೆಯಾಗಲಿದೆ. ಹಾಗಾಗಿ ಯಾರು ಕೂಡಾ ದನವನ್ನು ಮಾರಾಟ ಮಾಡಬೇಡಿ. ದನ ಮಾರಾಟ ಮಾಡುವವರು ನಮ್ಮ ಸಂಘದ ಗಮನಕ್ಕೆ ತನ್ನಿ ಎಂದ ಅವರು ಒಕ್ಕೂಟದ ಕಡೆಯಿಂದ ಹೈನುಗಾರಿಕೆಯವರಿಗೆ ಹಲವು ಯೋಜನೆ ನೀಡುತ್ತಿದ್ದೇವೆ. ಗೊಬರ್ ಗ್ಯಾಸ್, ರಬ್ಬರ್ ಮ್ಯಾಟ್ ಪಡೆಯುವ ಕುರಿತು ಮಾಹಿತಿ ನೀಡಿದರು.
ಪ್ರೋತ್ಸಾಹಕ ಬಹುಮಾನ :
ಸಂಘಕ್ಕೆ ಅತಿ ಹೆಚ್ಚು ಹಾಲನ್ನು ನೀಡುವ ಮೂಲಕ ಪ್ರಥಮ ಸ್ಥಾನ ಪಡೆದ ಮೋನಪ್ಪ ಗೌಡ ಬೀರಿಗ, ದ್ವಿತೀಯ ಸ್ಥಾನ ಪಡೆದ ಸುದರ್ಶನ್ ಬಿ, ತೃತೀಯ ಸ್ಥಾನ ಪಡೆದ ಸುರೇಶ್ ಬಿ ಯು ಅವರನ್ನು ಸಂಘದ ವತಿಯಿಂದ ಬಹುಮಾನ ನೀಡಿ ಗೌರವಿಸಲಾಯಿತು. ಬಹುಮಾನ ಪಡೆದವರು ಸಂಘ ನಿರ್ದೇಶಕರೇ ಆಗಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಹೇಳಿದರು. ಸಂಘದ ಉಪಾಧ್ಯಕ್ಷ ಸುರೇಶ್ ಬಿ.ಯು, ನಿರ್ದೇಶಕರಾದ ರಾಜೇಶ್ ಗೌಡ ಜಿ, ಮೋನಪ್ಪ ಗೌಡ ಬೀರಿಗ, ಗಂಗಾಧರ ಗೌಡ, ನಾಗೇಶ್ ಮೂಲ್ಯ, ಸುದರ್ಶನ ಪಿ, ಶ್ರೀಧರ್ ಪೂಜಾರಿ ಬಡಾವು, ಮುದರು, ಜಾನಕಿ, ನಿರ್ಮಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಅನುರಾಧ ಸಾಮಾನ್ಯ ಸಭೆಯ ನಡಾವಳಿ ಮತ್ತು ವಾರ್ಷಿಕ ವರದಿ ಮಂಡಿಸಿದರು. ವಿಸ್ತರಣಾಧಿಕಾರಿ ಮಾಲತಿ ಲೆಕ್ಕಪತ್ರ ಮಂಡಿಸಿದರು. ಉಮಾವತಿ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ದಿನೇಶ್ ಸಾಲಿಯಾನ್ ಸ್ವಾಗತಿಸಿದರು. ಚಿದಾನಂದ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ರೂ.2,60,115 ಲಾಭ
ಸಂಘದಲ್ಲಿ 368 ಮಂದಿ ಸದಸ್ಯರಿದ್ದಾರೆ. ಇದರಲ್ಲಿ ರಿಯಾಯಿತಿ ದರದಲ್ಲಿ ಪಶು ಆಹಾರ, ಬೇಡಿಕೆ ಮೇರೆಗೆ ಹಿಂಡಿನ ಬೀಜ, ರಿಯಾಯಿತಿ ದರದಲ್ಲಿ ಹಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವರದಿ ವರ್ಷದಲ್ಲಿ 2.4ಲಕ್ಷ ಲೀಟರ್ ಹಾಲು ಖರೀದಿಸಿದ್ದು, ಅದರಲ್ಲಿ ಸ್ಥಳೀಯವಾಗಿ ಮಾರಾಟ ಮಾಡಿ ಉಳಿದ 1.58 ಲಕ್ಷ ಲೀಟರ್ ಹಾಲನನ್ನು ಜಿಲ್ಲಾ ಒಕ್ಕೂಟಕ್ಕೆ ಸರಬರಾಜು ಮಾಡಲಾಗಿದೆ.
ಸಂಘವು ವಾರ್ಷಿಕ ವರದಿಯಲ್ಲಿ ರೂ. 2,60,115 ಲಾಭ ಪಡೆದಿದ್ದು, ಹಾಲು ಉತ್ಪಾದಕರಿಗೆ ಲೀಟರ್‌ಗೆ 60 ಪೈಸೆ ಬೋನಸ್ ನೀಡಲಾಗುವುದು. ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಘೋಷಣೆ ಮಾಡಿದರು.