ಅಧ್ಯಕ್ಷ: ರಿತೇಶ್, ಕಾರ್ಯದರ್ಶಿ: ಕಾವ್ಯ , ಸಹ ಕಾರ್ಯದರ್ಶಿ: ಪುನೀತ್‌ಕುಮಾರ್
ಲಲಿತ ಕಲಾ ಸಂಘದ ಕಾರ್ಯದರ್ಶಿ: ಭವ್ಯಶ್ರೀ, ಜೊತೆ ಕಾರ್ಯದರ್ಶಿ: ನುಸ್ರೀಲ್
ಕ್ರೀಡಾ ಸಹ ಕಾರ್ಯದರ್ಶಿ: ರಾಹುಲ್
ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿರುವ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಪದವಿ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆಯು ಸೆ.26ರಂದು ನಡೆಯಿತು.
ಅಧ್ಯಕ್ಷರಾಗಿ ತೃತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ರಿತೇಶ್ ಹಾಗೂ ಕಾರ್ಯದರ್ಶಿಯಾಗಿ ತೃತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿ ಕಾವ್ಯ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ತೃತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪುನೀತ್ ಕುಮಾರ್, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ತೃತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಭವ್ಯಶ್ರೀ, ಲಲಿತಕಲಾ ಸಂಘದ ಜೊತೆ ಕಾರ್ಯದರ್ಶಿನಿಯಾಗಿ ತೃತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನುಸ್ರೀಲ್ ಅಜೀಝ್ ಹಾಗೂ ಕ್ರೀಡಾ ಸಹ ಕಾರ್ಯದರ್ಶಿಯಾಗಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಾಹುಲ್ ಆಯ್ಕೆಯಾದರು.
ವಿದ್ಯಾರ್ಥಿ ಸಂಘದ ಲಲಿತಕಲಾ ಸಂಘದ ಕಾರ್ಯದರ್ಶಿ ಹಾಗೂ ಕ್ರೀಡಾ ಸಹ ಕಾರ್ಯದರ್ಶಿ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಲಲಿತಕಲಾ ಸಂಘದ ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಯಿತು. ವಿದ್ಯಾರ್ಥಿ ಸಂಘದ ಸಂಚಾಲಕರೂ, ಚುನಾವಣಾ ಅಧಿಕಾರಿಯೂ ಆದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ನೂರಂದಪ್ಪ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಮತ ಎಣಿಕೆ ಅಧಿಕಾರಿ ಹಾಗೂ ವಿದ್ಯಾರ್ಥಿ ಸಂಘದ ಸದಸ್ಯರಾದ ದೈಹಿಕ ಶಿಕ್ಷಣ ನಿರ್ದೇಶಕರಾದ ಪಾವನಕೃಷ್ಣ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪಾವನಾ ರೈ ಅವರ ಉಸ್ತುವಾರಿಯಲ್ಲಿ ಮತ ಎಣಿಕೆ ನಡೆಯಿತು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ| ಸೀತಾರಾಮ ಪಿ. ಅವರು ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿ, ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ| ನೂರಂದಪ್ಪ, ಸದಸ್ಯರಾದ ಚಂದ್ರಕಲಾ ಬಿ., ವನಿತಾ ಪಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸುರೇಶ್ ಕೆ., ಡಾ| ಪುರುಷೋತ್ತಮ ಅವರ ಸಹಯೋಗದಲ್ಲಿ ಚುನಾವಣಾ ಪ್ರಕ್ರಿಯೆ ಆಯೋಜಿಸಲಾಗಿತ್ತು. ಅಭ್ಯರ್ಥಿಗಳ ಸಮಕ್ಷಮ ಮತದಾನ ಪ್ರಕ್ರಿಯೆ ನಡೆಸಿ ಮತಪೆಟ್ಟಿಗೆಗಳನ್ನು ಸೀಲ್ ಮಾಡಲಾಯಿತು. ಅಭ್ಯರ್ಥಿಗಳ ಉಪಸ್ಥಿತಿಯಲ್ಲಿ ಮತಪೆಟ್ಟಿಗೆಯನ್ನು ತೆರೆದು ಮತ ಎಣಿಕೆ ನಡೆಸಲಾಯಿತು. ಮತ ಚಲಾಯಿಸಲು ವಿದ್ಯಾರ್ಥಿಗಳು ಕಾಲೇಜಿನ ಗುರುತಿನ ಚೀಟಿ ತರುವುದು ಕಡ್ಡಾಯವಾಗಿತ್ತು. ಮಧ್ಯಾಹ್ನ 2 ಗಂಟೆಯಿಂದ 3 ಗಂಟೆವರೆಗೆ ನಡೆದ ಮತದಾನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.