ಉಪ್ಪಿನಂಗಡಿ: ಸಿಬಿಐ ಆಫೀಸರ್‌ ಎಂದು ನಂಬಿಸಿ ಹಣ ಕಬಳಿಸಲು ಯತ್ನ-ಅಪಹರಣದ ಕರೆಯೂ ಬಂದಿತ್ತು

0

ಉಪ್ಪಿನಂಗಡಿ : ನಾನು ಸಿಬಿಐ ಆಫೀಸರ್ ಮಾತನಾಡುತ್ತಿದ್ದೇನೆ. ಇಂತಹಾ ಹೆಸರಿನವನು ನಿಮ್ಮ ಮಗನಾ ? ಅವನ ಚಟುವಟಿಕೆಯ ಬಗ್ಗೆ ನಿಮಗೆ ಅರಿವಿದೆಯಾ ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ. ಎಂದೆಲ್ಲಾ ಬೆದರಿಸಿ ಹಣ ಕಬಳಿಸುವ ಜಾಲದ ಕರೆಯೊಂದು ಉಪ್ಪಿನಂಗಡಿ ನಿವಾಸಿಗೆ ಬಂದಿದ್ದು, ಅವರ ಸಮಯಪ್ರಜ್ಞೆಯ ನಡೆಯಿಂದಾಗಿ ಕರೆ ಮಾಡಿದವನೇ ಮತಿಗೆಟ್ಟು ಕರೆ ಕಡಿತ ಮಾಡಿದ ಘಟನೆ ವರದಿಯಾಗಿದೆ.


ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯ ನಿವಾಸಿ ಅಬ್ಬಾಸ್ ಎಂಬವರ ಮೊಬೈಲ್ ಗೆ 92-3471745608 ಸಂಖ್ಯೆಯಿಂದ ಪೋನ್ ಕರೆಯೊಂದು ಬಂದು, ಹಿಂದಿ ಭಾಷೆಯಲ್ಲಿ ತಾನು ಸಿಬಿಐ ಆಫೀಸರ್ ಆಗಿದ್ದು ದೆಹಲಿ ಕಚೇರಿಯಿಂದ ಮಾತಾನಾಡುತ್ತಿದ್ದೇನೆ. ಅಬ್ಬಾಸ್ ರವರ ಪ್ರಥಮ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿರುವ ಮಗನ ಹೆಸರನ್ನು ಸ್ಪಷ್ಠವಾಗಿ ಉಲ್ಲೇಖಿಸಿ , ಆತ ನಿಮ್ಮ ಮಗನಲ್ಲವೆ ? ಆತ ಏನೆಲ್ಲಾ ಮಾಡುತ್ತಿದ್ದಾನೆ ಎಂಬ ಅರಿವು ನಿಮಗಿದೆಯಾ ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ ಎಂದೆಲ್ಲಾ ಬೆದರಿಸಲಾಗುತ್ತದೆ. ಪೋನ್ ಕರೆ ಬಂದ ನಂಬ್ರದಲ್ಲಿ ಪ್ರೊಪೈಲ್ ಪೋಟೋ ಕೂಡಾ ಪೊಲೀಸ್ ಆಫೀಸರ್‌ನಂತಿರುವ ವ್ಯಕ್ತಿಯದಿದ್ದು, ಪೋನ್ ನಂಬ್ರದ ಕೆಳಗಡೆ ಸಿಬಿಐ ಎಂದೂ ದಾಖಲಿಸಲ್ಪಟ್ಟಿರುವುದು ಕಂಡು ಬಂದಿದೆ.

ಆದರೆ ತನ್ನ ಮಗನ ಕಾರ್ಯಚಟುವಟಿಕೆಯ ಬಗ್ಗೆ ಸ್ಪಷ್ಟ ಅರಿವು ಇದ್ದ ಅಬ್ಬಾಸ್ ರವರು , ಪೋನಾಯಿಸಿದ ವ್ಯಕ್ತಿಗೆ ಸಂಬಂಧಿಸಿ ಕೆಲವೊಂದು ಪ್ರಶ್ನೆ ಕೇಳಿದಾಗ ನಿಮಗೆ ನಮ್ಮನ್ನು ಪ್ರಶ್ನಿಸುವ ಹಕ್ಕಿಲ್ಲ . ಏನಿದ್ದರೂ ನಾವು ಕೇಳುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಎಂದು ಧಿಮಾಕಿನಿಂದ ಹೇಳಲಾಗುತ್ತದೆ. ಮಗನ ನಡವಳಿಕೆಯ ಬಗ್ಗೆ ದೃಢವಾದ ನಂಬಿಕೆ ಹಾಗೂ ಪೋನ್ ಕರೆಯಲ್ಲಿ ಬೆದರಿಕೆಯೊಡ್ಡಿ ಹಣ ಕಬಳಿಸುವ ಜಾಲದ ಅರಿವು ಹೊಂದಿದ್ದ ಅಬ್ಬಾಸ್ ರವರು ತನ್ನ ಮಾತಿನ ಶೈಲಿಯನ್ನು ವಿಧೇಯತೆಯಿಂದ ಆಕ್ರಮಣಕಾರಿಯಾಗಿ ಬದಲಾಯಿಸಿ ತಿಳಿದಿರುವ ಹಿಂದಿ ಭಾಷೆಯಲ್ಲಿ ಮನಸ್ಸಿಗೆ ತೋಚಿದ ಎಲ್ಲಾ ಸ್ತರದ ಬೈಗುಳಗಳನ್ನು ಆಕ್ರೋಶಭರಿತನಾಗಿ ನುಡಿದಾಗ ಪೋನ್ ಕರೆ ಮಾಡಿದಾತ ಮತಿಗೆಟ್ಟು ಕರೆಯನ್ನು ಕಡಿತಗೊಳಿಸಿದ್ದಾನೆ.

ಅಂತರಾಷ್ಟ್ರೀಯ ನೆಲೆಗಟ್ಟಿನಲ್ಲಿ ಮೊಬೈಲ್ ಪೋನ್ ಕರೆಯ ಕೋಡ್ ಸಂಖ್ಯೆ 92 ಎಂದಾಗಿದ್ದು ಅದು ಪಾಕಿಸ್ತಾನದಲ್ಲಿ ಬಳಕೆಯಾಗುವ ಪೋನ್ ಆಗಿರುತ್ತದೆ. ಅಲ್ಲಿನ ವ್ಯಕ್ತಿಗೆ ಉಪ್ಪಿನಂಗಡಿಯ ನಿವಾಸಿಯಾಗಿರುವ ಅಬ್ಬಾಸ್ ರವರ ಮೊಬೈಲ್ ಸಂಖ್ಯೆ ಹಾಗೂ ಅವರ ಮಗನ ಹೆಸರು ಸ್ಪಷ್ಠವಾಗಿ ತಿಳಿದಿರಬೇಕಾದರೆ ಈ ಜಾಲದಲ್ಲಿ ಸ್ಥಳೀಯರ ಬಾಗೀಧಾರಿಕೆಯ ಶಂಕೆ ಮೂಡುತ್ತಿದೆ.


ಇದೇ ಕುಟುಂಬಕ್ಕೆ ಅಪಹರಣದ ಕರೆ ಬಂದಿತ್ತು
ಅಬ್ಬಾಸ್ ರವರ ಸಂಬಂಧಿಕರೊಬ್ಬರ ಮಗಳು ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಕಲಿಯುತ್ತಿದ್ದು, ಆಕೆಯನ್ನು ಅಪಹರಿಸಲಾಗಿದೆ ಎಂಬ ಪೋನ್ ಕರೆಯನ್ನು ಆಕೆಯ ತಾಯಿಗೆ ಮಾಡಿರುವುದಲ್ಲದೆ, ತನ್ನನ್ನು ಅಪಹರಣಕಾರರಿಂದ ಬಿಡಿಸಿಕೊಳ್ಳಿ ಎಂದು ವಿದ್ಯಾರ್ಥಿನಿ ಅಳುತ್ತಾ ಅಂಗಲಾಚುತ್ತಿದ್ದ ದ್ವನಿಯನ್ನೂ ಪೋನ್ ಕರೆಯಲ್ಲಿ ಕೇಳಿಸಲಾಗಿತ್ತು. ಪೋನ್ ಕರೆಯನ್ನು ಸ್ವೀಕರಿಸಿದ ತಾಯಿ ಮಗಳ ಅಳುವ ದ್ವನಿಯನ್ನು ಆಲಿಸಿ ಅಸ್ವಸ್ಥರಾದರೆ, ಇತ್ತ ಆಕೆಯ ಸಹೋದರಿಯರು ಮತ್ತು ಸಂಬಂಧಿಕರು ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿ ಅಪಹರಣಕ್ಕೆ ತುತ್ತಾಗಿದ್ದಾಳೆಂದು ತಿಳಿಸಲಾದ ವಿದ್ಯಾರ್ಥಿನಿ ಮಂಗಳೂರಿನ ಕಾಲೇಜಿನ ತರಗತಿಯಲ್ಲಿ ಸುರಕ್ಷಿತವಾಗಿರುವುದನ್ನು ಖಾತ್ರಿ ಪಡಿಸಿಕೊಂಡರು. ತನ್ಮೂಲಕ ಇದೊಂದು ಸುಳ್ಳು ಸುದ್ದಿಯನ್ನು ಬಿತ್ತರಿಸಿ ಬೆದರಿಕೆಯೊಡ್ಡಿ ಹಣ ಕಬಳಿಸುವ ಜಾಲವೆನ್ನುವುದನ್ನು ದೃಢಪಡಿಸಿಕೊಂಡು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಅಬ್ಬಾಸ್ ರವರಿಗೆ ಸಿಬಿಐ ಅಧಿಕಾರಿಯ ಹೆಸರಿನಲ್ಲಿ ಪೋನ್ ಕರೆ ಮಾಡಿ ಮಗನನ್ನು ಬಂಧಿಸುವ ಬೆದರಿಕೆಯೊಡ್ಡಿ ಹಣ ಕಬಳಿಸುವ ಯತ್ನ ಮಾಡಿರುವುದನ್ನು ಅವರ ಸ್ವಯಂ ಜಾಗೃತಿಯಿಂದ ತಡೆಗಟ್ಟಿದ್ದಾರೆ. ಇಂತಹಾ ಘಟನೆಗಳು ಪ್ರಸಕ್ತ ವ್ಯಾಪಕವಾಗಿ ನಡೆದು ಸಮಾಜದ ಶಿಕ್ಷಿತರೆನಿಸಿದರನ್ನೂ ವಂಚನಾ ಕೂಪಕ್ಕೆ ಬೀಳಿಸಲಾಗುತ್ತಿರುವುದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕೆಂಬ ಆಶಯದಲ್ಲಿ ಅಬ್ಬಾಸ್ ರವರು ಪ್ರಕರಣವನ್ನು ಮಾದ್ಯಮದ ಗಮನಕ್ಕೆ ತಂದಿದ್ದಾರೆ.


LEAVE A REPLY

Please enter your comment!
Please enter your name here