ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ಚಾಲನೆ – 3ನೇ ಸ್ಪರ್ಧಿಯಾಗಿ ಧನರಾಜ್ ಆಚಾರ್ ದೊಡ್ಮನೆ ಪ್ರವೇಶ

0

‘ನನಗೆ ನಾನೇ ನಾಯಕನಿಮ್ಮನ್ನ ನಗ್ಸೋದೆ ನನ್ನ ಕಾಯಕ. ಕಾಫಿ ಕುಡಿಯೋ ಅಭ್ಯಾಸ ಇಲ್ಲ. ಕಂಟೆಂಟ್ ಕಾಪಿ ಮಾಡೋ ದುರಭ್ಯಾಸನೂ ಇಲ್ಲ. ಒರಿಜಿನಲ್ ಕಂಟೆಂಟ್ ಮಾತ್ರ’ ಎಂದು ಧನರಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ಮಾಹಿತಿ ನೀಡಿದ್ದಾರೆ.

ಪುತ್ತೂರು: ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಸೆ.29ರಂದು ಸಂಜೆ ಅದ್ಧೂರಿ ಚಾಲನೆ ಸಿಕ್ಕಿದೆ. ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದ ಪುತ್ತೂರು ಸಮೀಪದ ಅನಂತಾಡಿಯ ಧನರಾಜ್ ಆಚಾರ್ ಅವರು ಈ ಸಲ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಈ ರಿಯಾಲಿಟಿ ಶೋವನ್ನು ಖ್ಯಾತ ನಟ ಸುದೀಪ್ ಅವರು ನಿರೂಪಿಸುತ್ತಿದ್ದಾರೆ.


ಧನರಾಜ್ ಆಚಾರ್ ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಬಿಗ್‌ಬಾಸ್ ಮನೆಯನ್ನು ಈ ಬಾರಿ ಸ್ವರ್ಗ ಹಾಗೂ ನರಕ ಎಂಬ ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮನೆಗೆ ಬರುವ ಸ್ಪರ್ಧಿಗಳು ಸ್ವರ್ಗ ಅಥವಾ ನರಕ ಎರಡರಲ್ಲಿ ಒಂದಕ್ಕೆ ಹೋಗಬೇಕಾಗುತ್ತದೆ. ಬಿಗ್‌ಬಾಸ್ ಮನೆಗೆ ಮೊದಲು ಪ್ರವೇಶ ಮಾಡಿದ ಭವ್ಯಾ ಹಾಗೂ ಶ್ರೀನಿಧಿ ಅವರು ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರದಿಂದ ಧನರಾಜ್‌ರವರನ್ನು ಸ್ವರ್ಗಕ್ಕೆ ಆಯ್ಕೆ ಮಾಡಿದ್ದಾರೆ. ಶಾರ್ಟ್ ವಿಡಿಯೋ, ಶಾರ್ಟ್ ಮೂವಿ, ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಧನರಾಜ್ ಆಚಾರ್ ಜನಪ್ರಿಯರಾಗಿದ್ದಾರೆ. ಪತ್ನಿ ಹಾಗೂ ಕುಟುಂಬದ ಜೊತೆ ಹೆಚ್ಚು ರೀಲ್ಸ್ ಮಾಡುವುದರ ಜೊತೆಗೆ ಕಾಮಿಡಿ ವಿಡಿಯೋಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದ್ದರಿಂದ ಅವರು ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಷ್ಟು ನಗಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.


‘ಬಿಗ್ ಬಾಸ್’ ಬಗ್ಗೆ ಧನರಾಜ್ ಅವರು ಈ ಹಿಂದೆ ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್‌ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋವನ್ನು ಬಿಗ್‌ಬಾಸ್ ಮನೆಯಲ್ಲಿ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಅವರು ಧನರಾಜ್‌ಗೆ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು. ‘ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್‌ಪಿಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ‘ನಾನು ಮಾಡಿರೋದು ತಮಾಷೆಗೆ. ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ’ ಎಂದು ಧನರಾಜ್ ಕೇಳಿಕೊಂಡರು. ಆ ಬಳಿಕ ಸುದೀಪ್ ನಕ್ಕರು. ಆಗ ಧನರಾಜ್ ನಿಟ್ಟುಸಿರು ಬಿಟ್ಟರು. ಧನರಾಜ್‌ಗೆ ಮಗು ಜನಿಸಿ ಇನ್ನೂ ಒಂದು ತಿಂಗಳೂ ಆಗಿಲ್ಲ. ಮಗು ಜನಿಸಿದ ಬಳಿಕ ಅವರಿಗೆ ಬಿಗ್ ಬಾಸ್‌ನಿಂದ ಆಫರ್ ಬಂದಿತ್ತು. ಹೀಗಾಗಿ ಇದನ್ನು ಅವರು ಒಪ್ಪಿಕೊಂಡರು. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕಾಮಿಡಿ ಹೆಚ್ಚಿರಲಿ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದರು. ಈಗ ಧನರಾಜ್ ಆಚಾರ್ ಅವರು ದೊಡ್ಮನೆಗೆ ಬಂದಿರೋದ್ರಿಂದ ಹಾಸ್ಯವನ್ನು ನಿರೀಕ್ಷಿಸಬಹುದಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.


ಧನರಾಜ್ ಅವರು ‘ಗಿಚ್ಚಿ ಗಿಲಿ ಗಿಲಿ-2’ ಶೋನಲ್ಲೂ ಭಾಗಿಯಾಗಿ ಖ್ಯಾತರಾಗಿದ್ದರು. ‘ಅಬ್ಬಬ್ಬಾ’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಇವರು ಮಾಣಿ ಸಮೀಪದ ಅನಂತಾಡಿ ಮಾಮೇಶ್ವರ ರಾಘವೇಂದ್ರ ಆಚಾರ್ಯ ಮತ್ತು ಸಂಧ್ಯಾ ಆಚಾರ್ಯ ದಂಪತಿ ಪುತ್ರ. ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.
ಚೈತ್ರಾ ಕುಂದಾಪುರ ಎಂಟ್ರಿ: ಐದನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಕುಂದಾಪುರ ಮೂಲದ ವಿವಾದಾತ್ಮಕ ಹಿಂದೂ ಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಕಾಲಿಟ್ಟಿದ್ದಾರೆ. ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here