ಗ್ರಾ.ಪಂ.ನೌಕರರು,ಸದಸ್ಯರ ಒಕ್ಕೂಟದಿಂದ ಅನಿರ್ಧಿಷ್ಠ ಮುಷ್ಕರ

0

ಪಂಚಾಯತ್‌ ಗಳೆಲ್ಲ ಖಾಲಿ ಖಾಲಿ
ಗ್ರಾಮೀಣ ಸೇವೆಗಳು ಸ್ಥಗಿತ | ಪರದಾಡುತ್ತಿರುವ ನಾಗರಿಕರು

ಪುತ್ತೂರು:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿರುವ ಗ್ರಾಮೀಣಾಭಿವೃದ್ಧಿ,ಪಂಚಾಯತ್‌ರಾಜ್ ಇಲಾಖಾಧಿಕಾರಿಗಳು, ನೌಕರರು, ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಠ ಮುಷ್ಕರ ಮುಂದುವರಿದಿದ್ದು ಅದರ ಬಿಸಿ ಪುತ್ತೂರು ತಾಲೂಕಿನ ಗ್ರಾ.ಪಂಚಾಯತ್‌ ಗಳಿಗೂ ತಟ್ಟಿದೆ.

ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ ಮುಗಿದು ಅ.4ರಿಂದ ಎಂದಿನಂತೆ ಕೆಲಸ ಕಾರ್ಯಗಳು ಆರಂಭಗೊಂಡ ಬೆನ್ನಲ್ಲೇ ಇದೀಗ ಗ್ರಾಮ ಪಂಚಾಯತ್ ನೌಕರರ ಅನಿರ್ಧಿಷ್ಟ ಮುಷ್ಕರದಿಂದ ಪುತ್ತೂರು,ಕಡಬ ತಾಲೂಕಿನಲ್ಲಿ 44 ಗ್ರಾಮ ಪಂಚಾಯತ್‌ಗಳಲ್ಲಿಯೂ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಹೊರತು ಇತರ ಸೇವೆಗಳು ಸ್ಥಗಿತಗೊಂಡಿದ್ದರಿಂದಾಗಿ ನಾಗರಿಕರು ಪರದಾಡುವಂತಾಗಿದೆ.ಇದರಿಂದ ಜನರು ಆಕ್ರೋಶಗೊಂಡಿದ್ದು ಸರಕಾರ ಆದಷ್ಟು ಬೇಗ ಇದನ್ನು ಪರಿಹರಿಸಿ ಜನಸಾಮಾನ್ಯರಿಗೆ ನೆರವಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪುತ್ತೂರು,ಕಡಬದಲ್ಲೂ ಗ್ರಾ.ಪಂ.ಗಳಲ್ಲಿ ಸೇವೆ ಸ್ಥಗಿತ:
ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೂ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆ ಹೊರತು ಪಡಿಸಿ ಬಾಪೂಜಿ ಸೇವೆ ಹಾಗೂ ಕಛೇರಿಯ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವುದರಿಂದ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಸೇವೆಗಳು ಸ್ಥಗಿತಗೊಂಡು ಜನ ಸಮಸ್ಯೆ ಎದುರಿಸುವಂತಾಗಿದೆ.

ಅರಿಯಡ್ಕ ಗ್ರಾ.ಪಂ, ಕೆದಂಬಾಡಿ, ಒಳಮೊಗ್ರು,ನೆಟ್ಟಣಿಗೆ ಮುಡ್ನೂರು, ಕೊಳ್ತಿಗೆ,ಕೆಯ್ಯೂರು, ಆರ್ಯಾಪು ಗ್ರಾಮ ಪಂಚಾಯತ್‌ ಗಳು ಸೇರಿದಂತೆ ಎಲ್ಲಾ ಪಂಚಾಯತ್‌ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರಗಳಲ್ಲಿ ಪಾಲ್ಗೊಂಡಿದೆ.

ಅ.10ರಂದು ಸಭೆ:
ಗ್ರಾ.ಪಂ ಸದಸ್ಯರ ಒಕ್ಕೂಟ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ಅ.10ರಂದು ಸಭೆ ನಡೆದು ಮಾತುಕತೆ ನಡೆಯಲಿದ್ದು ಅ.10ರ ತನಕ ಮುಷ್ಕರ ಮುಂದುವರಿಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಎಂ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here