ರೋಟರಿ ಈಸ್ಟ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಪ್ರಾಜೆಕ್ಟ್‌ಗಳು ಸಮಾಜದಲ್ಲಿ ಇಂಪ್ಯಾಕ್ಟ್ ಆಗುವಂತಾಗಲಿ-ವಿಕ್ರಂ ದತ್ತ

ಪುತ್ತೂರು: ಕ್ಲಬ್ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳ ಕಾರ್ಯತಂತ್ರದ ದಾಖಲೀಕರಣಗೊಳಿಸಿದಾಗ ಕ್ಲಬ್ ಸಕ್ರಿಯರೆನಿಸಿಕೊಳ್ಳುವುದು. ರೋಟರಿ ಸದಸ್ಯರು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಕ್ಲಬ್ ಹಮ್ಮಿಕೊಳ್ಳುವ ಪ್ರಾಜೆಕ್ಟ್‌ಗಳು ಸಮಾಜದಲ್ಲಿ ಇಂಪ್ಯಾಕ್ಟ್(ಪ್ರಭಾವ) ಆಗುವಂತಾಗಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.


ರೋಟರಿ ಮನೀಷಾ ಸಭಾಂಗಣದಲ್ಲಿ ಅ.14 ರಂದು ಜರಗಿದ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭ ಅವರು ಮಾತನಾಡಿದರು.


ರೋಟರಿಗೆ ನೀಡುವ ದೇಣಿಗೆ ಒಳ್ಳೆಯ ಪ್ರಾಜೆಕ್ಟ್‌ಗೆ ವಿನಿಯೋಗವಾಗುತ್ತೆ-ಸೂರ್ಯನಾಥ ಆಳ್ವ:
ರೋಟರಿ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವರವರು ಡಾ.ಶ್ಯಾಮ್‌ಪ್ರಸಾದ್ ಎಂ.ರವರ ಸಂಪಾದಕತ್ವದ “ರೋಟ ವಾಹಿನಿ” ಬುಲೆಟಿನ್ ಬಿಡುಗಡೆ ನೆರವೇರಿಸಿ ಮಾತನಾಡಿ, ರೋಟರಿ ಈಸ್ಟ್ ಕ್ಲಬ್ ಪ್ರತೀ ವರ್ಷವೂ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ ನಾವು ನೀಡುವ ದೇಣಿಗೆ ಅದು ಎಲ್ಲಿಯೂ ಹೋಗಲ್ಲ. ಮೆಗಾ ಪ್ರಾಜೆಕ್ಟ್ ಮಾಡುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ನಮ್ಮ ದೇಣಿಗೆಯನ್ನು ಹಿಂದಿರುಗಿಸುವ ಮೂಲಕ ಒಂದೊಳ್ಳೆಯ ಜನ ಮೆಚ್ಚುವ ಕಾರ್ಯಕ್ರಮ ನೀಡದಂತಾಗುತ್ತದೆ ಎಂದರು.

ಚಿತ್ರ: ನವೀನ್ ರೈ ಪಂಜಳ


ರೋಟರಿ ಸಿಂಬಲ್ ಅದಕ್ಕೆ ಸೆಲ್ಯೂಟ್ ವ್ಯಕ್ತವಾಗುತ್ತದೆ-ಮೊಹಮ್ಮದ್ ರಫೀಕ್:
ರೋಟರಿ ವಲಯ ಸೇನಾನಿ ಮೊಹಮ್ಮದ್ ರಫೀಕ್ ದರ್ಬೆ ಮಾತನಾಡಿ, ರೋಟರಿ ಸಂಸ್ಥೆಯು ನಮ್ಮನ್ನು ರೋಟರಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಮಾತ್ರವಲ್ಲ ಅದು ನಮ್ಮನ್ನು ಬೆಳೆಸುತ್ತದೆ, ಉಳಿಸುತ್ತದೆ, ಗೌರವಿಸುತ್ತದೆ, ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸುತ್ತದೆ. ನಾವು ಎಲ್ಲೆಡೆ ಹೋದರೂ ನಮ್ಮಲ್ಲಿನ ರೋಟರಿ ಸಿಂಬಲ್ ಅದಕ್ಕೆ ಸೆಲ್ಯೂಟ್ ವ್ಯಕ್ತವಾಗುತ್ತದೆ. ನಾವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಮಾದರಿ ಪುತ್ತೂರನ್ನಾಗಿ ಮಾಡುವಲ್ಲಿ ಶ್ರಮಿಸೋಣ ಎಂದರು.


ಸಮಾಜಮುಖಿ ಪ್ರಾಜೆಕ್ಟ್‌ಗಳಿಗೆ ಸದಸ್ಯರು ಕೈಜೋಡಿಸಿದ್ದಾರೆ-ಡಾ.ರವಿಪ್ರಕಾಶ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ ಮಾತನಾಡಿ, ನನ್ನ ಕಿರು ಅಧ್ಯಕ್ಷಾವಧಿಯಲ್ಲಿ ಹಮ್ಮಿಕೊಂಡ ಹಲವಾರು ಸಮಾಜಮುಖಿ ಪ್ರಾಜೆಕ್ಟ್‌ಗಳಿಗೆ ಸದಸ್ಯರು ಕೈಜೋಡಿಸಿದ್ದಾರೆ. ರೋಟರಿ ಧ್ಯೇಯೋದ್ಧೇಶಗಳನ್ನು ಕಂಡುಕೊಳ್ಳಲು, ಸೇವೆ ಎಷ್ಟರಮಟ್ಟಿಗೆ ಇದೆ ಎಂದು ಗಮನಿಸಲು ಹಾಗೂ ಮಾರ್ಗದರ್ಶನ ನೀಡಲು ಆಗಮಿಸಿದ ಡಿಜಿ ವಿಕ್ರಂ ದತ್ತರವರಿಗೆ ಅಭಿನಂದನೆಗಳು ಎಂದರು.


ಹೊಸ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ರೇಡಿಯೋಜಿಸ್ಟ್ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ರಾಮಕಿಶೋರ್ ಕಾನಾವುರವರಿಗೆ ಡಿಜಿ ವಿಕ್ರಂ ದತ್ತರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಹಾಗೂ ನಿಯೋಜಿತ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.


ಪಿ.ಎಚ್.ಎಫ್ ಗೌರವ:
ಇಂಟರ್ನ್ಯಾಷನಲ್ ಸರ್ವಿಸ್‌ನಡಿಯಲ್ಲಿ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಪಡೆದ ಪುರಂದರ ರೈ ಮಿತ್ರಂಪಾಡಿ, ಡಾ.ಸೂರ್ಯನಾರಾಯಣ ಕೆ, ಸೂರ್ಯನಾಥ ಆಳ್ವ, ಕೃಷ್ಣನಾರಾಯಣ ಮುಳಿಯ, ಡಾ.ರವಿಪ್ರಕಾಶ್ ಕಜೆ, ಸಚ್ಚಿದಾನಂದ, ಮುರಳೀಶ್ಯಾಂ, ಶಶಿಧರ್ ಕಿನ್ನಿಮಜಲು, ರವಿಕುಮಾರ್ ರೈ, ಡಾ.ಶ್ಯಾಂಪ್ರಸಾದ್, ಕೆ.ಆರ್ ಶೆಣೈ, ರಾಧಾಕೃಷ್ಣ ರೈ ಬೂಡಿಯಾರು, ಮನೋಜ್ ಡಿ’ಸೋಜ, ಸುರೇಶ್ ಕೆ.ಯು, ದಿವಾಕರ ನಿಡ್ವಣ್ಣಾಯರವರುಗಳನ್ನು ಡಿಜಿ ವಿಕ್ರಂ ದತ್ತರವರು ಅಭಿನಂದಿಸಿದರು.


ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಗೆ ಗ್ಲೋಬಲ್ ಮ್ಯಾಚಿಂಗ್ ಗ್ರ್ಯಾಂಟ್ ಅನ್ನು ತರಲು ಶ್ರಮಿಸಿರುವ ವಿನಾಯಕ ಕುಡ್ವರವರನ್ನು ಡಿಜಿ ವಿಕ್ರಂ ದತ್ತರವರು ಶಾಲು ಹೊದಿಸಿ ಅಭಿನಂದಿಸಿದರು. ಆನೆಟ್ ಭಾರವಿ ಪ್ರಾರ್ಥಿಸಿದರು. ರೋಟರಿ ಈಸ್ಟ್ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ ಸ್ವಾಗತಿಸಿ, ಕಾರ್ಯದರ್ಶಿ ವಸಂತ್ ಜಾಲಾಡಿ ವರದಿ ಮಂಡಿಸಿ, ವಂದಿಸಿದರು. ಕ್ಲಬ್ ಸದಸ್ಯರಾದ ಡಾ.ಸೂರ್ಯನಾರಾಯಣ, ಜನಾರ್ದನ ಭಟ್, ಮುರಳೀಶ್ಯಾಂರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಕೆಎಸ್ ಕೆ.ವಿಶ್ವಾಸ್ ಶೆಣೈರವರು ಡಿಜಿರವರ ಪರಿಚಯ ಮಾಡಿದರು. ಟಿ.ಆರ್.ಎಫ್ ಚೇರ್‌ಮ್ಯಾನ್ ಮುರಳೀಶ್ಯಾಂ, ಯೂತ್ ಸರ್ವಿಸ್ ನಿರ್ದೇಶಕ ಪ್ರಕಾಶ್ ರೈ ಮನವಳಿಕೆರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದಿವಾಕರ ನಿಡ್ವಾಣ್ಣಾಯ ಹಾಗೂ ಡಾ.ಪ್ರಸನ್ನ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ಸಮಾಜಮುಖಿ ಸೇವೆಗಳು..
ಕಮ್ಯೂನಿಟಿ ಸರ್ವಿಸ್ ವತಿಯಿಂದ ನಿಶ್ಮಿತಾ ಎಸ್.ದೇವಾಡಿಗರವರಿಗೆ ರೂ.೬೫೦೦ ಮೊತ್ತದ ಹೊಲಿಗೆ ಯಂತ್ರ ಹಸ್ತಾಂತರ, ಜಿಲ್ಲಾ ಪ್ರಾಜೆಕ್ಟ್ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಕನ್ಯಾನ ಭಾರತ ಸೇವಾಶ್ರಮಕ್ಕೆ ರೂ.15 ಸಾವಿರ ಮೊತ್ತದ ಪಾತ್ರೆ ಸಾಮಾಗ್ರಿಗಳ ಕೊಡುಗೆ, ಕೆ.ಆರ್ ಶೆಣೈರವರ ಪ್ರಾಯೋಜಕತ್ವದಲ್ಲಿ ಪ್ರಜ್ಞಾ ಆಶ್ರಮಕ್ಕೆ ಓರ್ವನಿಗೆ ಒಂದು ವರ್ಷದ ರೂ.25 ಸಾವಿರ ವೆಚ್ಚವನ್ನು ಆಶ್ರಮದ ಮುಖ್ಯಸ್ಥ ಅಣ್ಣಪ್ಪರವರಿಗೆ ಹಸ್ತಾಂತರ, ಜಿಲ್ಲಾ ಪ್ರಾಜೆಕ್ಟ್ ಎನಿಸಿದ ಅಂಗನವಾಡಿ ಅಭಿವೃದ್ಧಿ ನಿಟ್ಟಿನಲ್ಲಿ ಬಪ್ಪಳಿಗೆ ಅಂಗನವಾಡಿ ಕೇಂದ್ರಕ್ಕೆ 20 ಕುರ್ಚಿಗಳು, ನರಿಮೊಗರು ಸರಸ್ವತಿ ವಿದ್ಯಾಮಂದಿರಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್ ಮೆಷಿನ್, ತಿಂಗಳಾಡಿ ಪ್ರಾಥಮಿಕ ಶಾಲೆಗೆ ರೂ.38500 ಮೊತ್ತದ ಕಂಪ್ಯೂಟರ್ ಹಸ್ತಾಂತರ, ಬೋರ್ಡ್ ಹೈಸ್ಕೂಲ್ ಹಾಗೂ ಫಿಲೋಮಿನಾ ಪ್ರೌಢಶಾಲೆಗೆ ಪ್ರಜಾವಾಣಿಯಲ್ಲಿ ಪ್ರಕಟವಾಗುವ ಎಸೆಸ್ಸೆಲ್ಸಿ ಮಾದರಿ ಪ್ರಶ್ನೆಪತ್ರಿಕೆ ವೆಚ್ಚವಾಗಿ ರೂ.7500 ಕೊಡುಗೆಯ ಹಸ್ತಾಂತರ ಈ ಸಂದರ್ಭದಲ್ಲಿ ಜರಗಿತು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪುರಂದರ ರೈ ಮಿತ್ರಂಪಾಡಿರವರು ಸಭೆಗೆ ಪರಿಚಯಿಸಿದರು.

ಕಿರುಚಿತ್ರ ಅನಾವರಣ..
ಜಿಲ್ಲಾ ಪ್ರಾಜೆಕ್ಟ್‌ನಡಿಯಲ್ಲಿ ಹೃದಯಾಘಾತ ಕಾಯಿಲೆಗಳ ಬಗ್ಗೆ ಜಾಗೃತಿ, ಹೃದ್ರೋಗ ಬರದಂತೆ ಅದನ್ನು ತಡೆಗಟ್ಟುವುದು ಹೇಗೆ?, ಎಂಬ “ಸೇವ್ ಯುವರ್ ಆರ್ಟ್” ಎಂಬ ಕಿರು ಚಿತ್ರವನ್ನು ಈ ಸಂದರ್ಭದಲ್ಲಿ ಡಿಜಿ ವಿಕ್ರಂ ದತ್ತರವರು ಅನಾವರಣಗೊಳಿಸಿದರು. ಜಿಲ್ಲಾ ಚೇರ್ಮನ್ ಡಾ.ಶ್ಯಾಮ್ ಪ್ರಸಾದ್‌ರವರು ಕಿರು ಚಿತ್ರದ ಕುರಿತು ಮಾತನಾಡಿದರು.

ಸನ್ಮಾನ..
ವೊಕೇಶನಲ್ ಸರ್ವಿಸ್‌ನಡಿಯಲ್ಲಿ ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದು ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಮತ್ತು ಪಂಚ ಕಲ್ಯಾಣ ಸಮಿತಿಯ ಕಾರ್ಯದರ್ಶಿ, ಸದ್ರಿ ಬಸದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಸಮಿತಿಯಲ್ಲಿ ಹತ್ತು ವರ್ಷ ನಿರ್ದೇಶಕರಾಗಿ, ಬನ್ನೂರು ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ದ.ಕ ಜೈನ ವಿದ್ಯಾವರ್ಧಕ ಸಂಘದ ಪ್ರಸ್ತುತ ಅಧ್ಯಕ್ಷರಾಗಿ ಸೇವೆ, ಶ್ರೀ ರಾಮಕೃಷ್ಣ ಸೇವಾ ಸಮಾಜದ ಆಡಳಿತ ಸಮಿತಿಯ ಕಾರ್ಯದರ್ಶಿಯಾಗಿ ಕಳೆದ 20 ವರ್ಷಗಳಿಂದ ಸೇವೆ ನೀಡುತ್ತಿರುವ ಪಡ್ನೂರು ನಿವಾಸಿ ಗುಣಪಾಲ್ ಜೈನ್‌ರವರನ್ನು, ಯೂತ್ ಸರ್ವಿಸ್ ವತಿಯಿಂದ ಆಸ್ಟ್ರೇಲಿಯಾದದಲ್ಲಿ ನಡೆದ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಅನೇಕ ಪದಕಗಳನ್ನು ಗಳಿಸಿದ ತ್ರಿಶೂಲ್ ಗೌಡರವರನ್ನು ಹಾಗೂ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here