ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ಪುತ್ತೂರು ಶಾರದೋತ್ಸವ ಅದ್ದೂರಿಯಾಗಿ ಸಮಾಪನಗೊಂಡಿದ್ದು, ಈ ಕುರಿತಂತೆ ಅವಲೋಕನಾ ಸಭೆಯು ಅ.18ರಂದು ರಾತ್ರಿ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಮಂದಿರದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾರದೋತ್ಸವ ಕುರಿತಂತೆ ಭಕ್ತಾದಿಗಳಲ್ಲಿ ಅಭಿಪ್ರಾಯ ಕೇಳಲಾಯಿತು. ಪುತ್ತೂರಿನಲ್ಲಿ ಇದುವರೆಗೆ ಇಂತಹ ಮೆರವಣಿಗೆ ನಡೆದಿಲ್ಲ, ಅಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಶೋಭಾಯಾತ್ರೆಯಲ್ಲಿ ಡಿ.ಜೆ ಮತ್ತು ಪಟಾಕಿ ನಿಷೇಧ ಮಾಡಲಾಗಿದ್ದು, ಈ ಕುರಿತಂತೆ ಸಭೆಯಲ್ಲಿ ಚಪ್ಪಾಳೆ ನೀಡುವ ಮೂಲಕ ಒಪ್ಪಿಗೆಯ ಸಹಮತ ಸೂಚಿಸಿದರು.
ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಮಾತನಾಡಿ ಕಾರ್ಯಕರ್ತರ ಪರಿಶ್ರಮ, ಸಹಕಾರದೊಂದಿಗೆ ನಿಮ್ಮ ಜತೆ ಮಾಡುವ ಸೇವೆಯು ಶಾರದಾ ಮಾತೆ ನಮಗೆ, ನಿಮಗೆ ಕೊಡುವಂತಹ ಪ್ರಸಾದವಾಗಿದೆ, ಶೋಭಾಯಾತ್ರೆ ಮುಗಿದ ಬಳಿಕ ನನಗೆ 900ಕ್ಕೂ ಮಿಕ್ಕಿ ಮೆಸೇಜ್ ಬಂದಿದೆ, ಅಮೇರಿಕಾ, ಆಸ್ಟೇಲಿಯಾದಲ್ಲಿರುವ ನನ್ನ ಸಂಬಂಧಿಕರು, ಸ್ನೇಹಿತರ ಕಾರ್ಯಕ್ರಮದ ಬಗೆಗೆ ಉತ್ತಮ ಅಭಿಪ್ರಾಯ ನೀಡಿದ್ದಾರೆ. ಈ ಕಾರ್ಯಕ್ರಮ ಈ ಮೊದಲೇ ಆಗಬೇಕಾಗಿತ್ತು, ಇದು ಹಿಂದೂ ಸಮಾಜಕ್ಕೆ ಬೇಕಾಗಿರುವ ಕಾರ್ಯಕ್ರಮ, ಲೇಟಾಗಿ ಬಂದಿದ್ದರೂ ಈವಾಗ ಕೂಡಿ ಬಂದಿರುವುದು ನಮ್ಮ ಆಶಯವಾಗಿದೆ ಎಂದರು.
ವೇದಿಕೆಯಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ಕೋಶಾಧಿಕಾರಿ ತಾರನಾಥ್, ಶೋಭಾಯಾತ್ರೆ ಸಂಚಾಲಕ ನವೀನ್‌ಕುಲಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು, ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಶೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಬಳಿಕ ಮಂದಿರದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು.