ಪುತ್ತೂರು/ಬೆಂಗಳೂರು: ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದ ಹಾಗೂ ತೆಂಕು ತಿಟ್ಟಿನ ಯಕ್ಷಗಾನ ಕ್ಷೇತ್ರದ ಹಾಸ್ಯ ಪರಂಪರೆಯ ಕೊನೆಯ ಕೊಂಡಿ ಎಂದೇ ಗುರುತಿಸಲ್ಪಟ್ಟಿದ್ದ ಮತ್ತು ತನ್ನ ಶುದ್ಧ ಹಾಸ್ಯದ ಮೂಲಕ ಯಕ್ಷ ಪ್ರೇಕ್ಷಕರ ಮನ ರಂಜಿಸುತ್ತಿದ್ದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ, ಬಂಟ್ವಾಳ ಜಯರಾಮ ಆಚಾರ್ಯ ಅವರು ಹೃದಯಾಘಾತದಿಂದ ಅ.21ರಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅ.20ರ ಆದಿತ್ಯವಾರ ಬೆಳಗ್ಗೆ ಇಲ್ಲಿನ ಆರ್.ಕೆ. ಭಟ್ಟರ ಮನೆಯಲ್ಲಿ ಬಂದು ಇಳಿದ ತಂಡದಲ್ಲಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಸೋಮವಾರ ಮುಂಜಾನೆ ನಾಲ್ಕು ಗಂಟೆಗೆ ತೀವ್ರ ಸ್ವರೂಪದ ಹೃದಯಾಘಾತ ಉಂಟಾಯಿತು. ಕೂಡಲೇ ತಂಡದಲ್ಲಿದ್ದ ಸಹ ಕಲಾವಿದರು ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಫಲ ಸಿಗಲಿಲ್ಲ. ಈ ಮೂಲಕ ತೆಂಕು ತಿಟ್ಟಿನ ಯಕ್ಷರಂಗದಲ್ಲಿ 50 ದಶಕಗಳಿಗೂ ಹೆಚ್ಚು ಕಾಲ ಮಿಂಚಿದ್ದ ‘ಹಾಸ್ಯರತ್ನ’ವೊಂದು ಮರೆಯಾದಂತಾಗಿದೆ.
ಬಂಟ್ವಾಳ ಜಯರಾಮ ಆಚಾರ್ಯ ಅವರು ಪತ್ನಿ ಶ್ಯಾಮಲಾ, ಮಕ್ಕಳಾದ ವರ್ಷಾ ಹಾಗೂ ವರುಣ್ ಅವರನ್ನು ಅಗಲಿದ್ದಾರೆ.
ಬಂಟ್ವಾಳದಲ್ಲಿ 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮನವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯವರ ಪ್ರೇರಣೆಯಿಂದ ಯಕ್ಷಗಾನ ರಂಗದತ್ತ ಆಕರ್ಷಿತರಾಗಿ, ಅಮ್ಮಾಡಿ, ಸೊರ್ನಾಡು ಮೇಳಗಳಲ್ಲಿ ತಮ್ಮ ಆರಂಭದ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು.
ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು.ಮತ್ತೆ ಕಟೀಲು ಮೇಳ, ಎಡನೀರು ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಮಿಂಚಿದ್ದ ಜಯರಾಮ ಆಚಾರ್ಯರು ಕಳೆದ ಕೆಲವು ವರ್ಷಗಳಿಂದ ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರಿನಲ್ಲಿರುವ ಆರ್.ಕೆ ಭಟ್ಟರ ಮನೆಯಲ್ಲಿ ಬಂಟ್ವಾಳ ಜಯರಾಮ ಆಚಾರ್ಯರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಅಲ್ಲಿಂದ ಆಂಬುಲೆನ್ಸ್ ಮೂಲಕ ಅವರ ಪಾರ್ಥಿವ ಶರೀರವನ್ನು ಊರಿಗೆ ತರಲಾಗುವುದು ಎಂಬ ಮಾಹಿತಿಯನ್ನು ಭಾಗವತರಾದ ಗಿರೀಶ್ ರೈ ಕಕ್ಯಪದವು ನೀಡಿದ್ದಾರೆ.