ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಿರ್ವಹಿಸುವಂತೆ ಸೂಚನೆ
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಅ.29ರಂದು ಪೆರಿಯಶಾಂತಿಯಿಂದ ಅಡ್ಡಹೊಳೆ ತನಕದ ಕಾಮಗಾರಿಯ ವೀಕ್ಷಣೆ ಮಾಡಿದರು.
ಆರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಪೆರಿಯಶಾಂತಿಯಲ್ಲಿ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಕಾಮಗಾರಿ ಗುತ್ತಿಗೆದಾರ ಕಂಪನಿಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿದ ಶಾಸಕರು ಅವರಿಂದ ಮಾಹಿತಿ ಪಡೆದು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಹೆದ್ದಾರಿ ಕಾಮಗಾರಿ ನಿರ್ವಹಿಸುವಂತೆ ಸೂಚಿಸಿದರು. ಪೆರಿಯಶಾಂತಿಯಲ್ಲಿನ ಅಂಡರ್‌ಪಾಸ್ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು ಸಮರ್ಪಕವಾಗಿ ನೀರು ಹರಿದುಹೋಗಲು ವ್ಯವಸ್ಥೆ ಮಾಡಬೇಕು, ಮಾರ್ಗಸೂಚಿ ನಾಮಫಲಕವನ್ನು ದೊಡ್ಡದಾಗಿ ಅಳವಡಿಸುವಂತೆ ಸೂಚನೆ ನೀಡಿದರು. ಬಳಿಕ ಶಾಸಕರು ಪೆರಿಯಶಾಂತಿಯಿಂದ ಅಡ್ಡಹೊಳೆ ತನಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶರಾದ ಅಬ್ದುಲ್ ಜಾವೇದ್ ಅಜ್ಮೀ, ಇಂಜಿನಿಯರ್‌ಗಳಾದ ನವೀನ್, ಶ್ರೀನಿವಾಸ್, ಜಗನ್‌ಮೋಹನ್, ವಿನೋದ್, ವಿವೇಕಾನಂದ, ಸಾಯಿರಾಮ್ ಮೊದಲಾದವರು ಕಾಮಗಾರಿ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ಪ್ರಸಾದ್ ಕಾಟೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.