ಶುದ್ಧ ಕುಡಿಯುವ ನೀರಿನ ಹೋರಾಟಕ್ಕೆ ತಾರ್ಕಿಕ ಅಂತ್ಯದ ಸಾಧ್ಯತೆ-ಸದ್ಯಕ್ಕೆ ಎರಡು ಕೊಳವೆ ಬಾವಿಗಳ ನೀರಿನ ಸಂಪರ್ಕಕಷ್ಟೇ ಮಾನ್ಯತೆ-ನಗರಸಭಾ ಆಯುಕ್ತರ ಅಂತಿಮ ಮುದ್ರೆ ಬಾಕಿ!

0

ಉಪ್ಪಿನಂಗಡಿ: 34 ನೆಕ್ಕಿಲಾಡಿಯಲ್ಲಿ ಗ್ರಾ.ಪಂ. ನೀಡುತ್ತಿರುವ ಕೊಳವೆ ಬಾವಿಯ ಕುಡಿಯುವ ನೀರು ಕುಡಿಯಲು ಯೋಗ್ಯವಾಗಿಲ್ಲ. ನಮಗೆ 34 ನೆಕ್ಕಿಲಾಡಿಯಿಂದ ಪುತ್ತೂರು ನಗರ ಸಭೆಗೆ ಪೂರೈಕೆಯಾಗುವ ಜಲಸಿರಿ ನೀರನ್ನು ನೀಡಬೇಕು ಎನ್ನುವ ಹೋರಾಟಕ್ಕೆ ಸದ್ಯದಲ್ಲೇ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಯಿದ್ದು, ಪುತ್ತೂರು ನಗರಸಭಾ ಆಯುಕ್ತರ ಅಂತಿಮ ಮುದ್ರೆ ಬೀಳುವುದೊಂದೇ ಬಾಕಿಯಿದೆ.


ಪುತ್ತೂರು ನಗರಸಭೆಗೆ ‘ಜಲಸಿರಿ’ ಯೋಜನೆಯಡಿ 34 ನೆಕ್ಕಿಲಾಡಿಯಿಂದ ಪೂರೈಕೆಯಾಗುವ ಶುದ್ಧ ಕುಡಿಯುವ ನೀರನ್ನು ನೀಡಬೇಕೆಂದು ಗ್ರಾಮಸ್ಥರ ಬೇಡಿಕೆ ಬಹಳ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಗ್ರಾಮಸ್ಥ ಮುಹಮ್ಮದ್ ರಫೀಕ್ ಅವರು ಈ ಬಗ್ಗೆ ಜನತಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಸಂದರ್ಭ ನಗರ ಸಭೆಯವರು ನ್ಯಾಯಾಲಕ್ಕೆ ಅಫಿದಾವಿತ್ ಸಲ್ಲಿಸಿ, ನಾವು 34 ನೆಕ್ಕಿಲಾಡಿ ಗ್ರಾ.ಪಂ.ಗೆ ನೀರು ಕೊಡವುದಾಗಿ ತಿಳಿಸಿದ್ದರು. ಆದರೂ ನೆಕ್ಕಿಲಾಡಿಗೆ ಜಲಸಿರಿಯ ಶುದ್ಧ ಕುಡಿಯುವ ನೀರು ಮಾತ್ರ ನೀಡಿರಲಿಲ್ಲ. ಆ ಬಳಿಕ ಗ್ರಾಮಸ್ಥರಾದ ಶಬೀರ್ ಅಹಮ್ಮದ್, ಅಸ್ಕರ್ ಅಲಿ, ಮುಹಮ್ಮದ್ ರಫೀಕ್ ಅವರು ಇದರ ಹೋರಾಟಕ್ಕೆ ಧುಮುಕಿದ್ದು, ಯುನಿಕ್ ಕಾಂಪೌಂಡ್ ಬಳಿ ಹಾಗೂ ಬೊಳಂತಿಲದ ಪ್ರಶಾಂತ್ ಅವರ ಮನೆಯ ಎದುರಿನ ಕೊಳವೆ ಬಾವಿಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆಗ ಈ ಎರಡು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಯೋಗಾಲಯದ ವರದಿ ಬಂದಿತ್ತು. ಇದನ್ನು ಮುಂದಿಟ್ಟು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದಿದ್ದಲ್ಲದೆ, ಮಾಹಿತಿ ಹಕ್ಕಿನಲ್ಲಿ ಎಲ್ಲಾ ದಾಖಲೆಗಳನ್ನು ತೆಗೆದು ಹೋರಾಟ ಮುಂದುವರಿಸಿದ್ದರು. ಇವರ ಹೋರಾಟದ ಫಲವಾಗಿ ಈಗ ಅಧಿಕಾರಿಗಳು ಈ ಎರಡು ಕೊಳವೆ ಬಾವಿಯಿಂದ ಸಂಪರ್ಕವಿರುವ ಮನೆಗಳಿಗೆ ಜಲಸಿರಿಯ ನೀರು ನೀಡುವಲ್ಲಿ ಮುತುವರ್ಜಿ ವಹಿಸಿದ್ದಾರೆ.


ಇಒ ಭೇಟಿ:
34 ನೆಕ್ಕಿಲಾಡಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಅವರ ನಿಯೋಗ ನ.29ರಂದು ಪುತ್ತೂರು ತಾ.ಪಂ. ಕಾರ್ಯನಿರ್ವಹಕಾಧಿಕಾರಿಯವರನ್ನು ಭೇಟಿ ಮಾಡಿದ್ದು, ಜಲಸಿರಿ ಯೋಜನೆಯ ನೀರು ನೆಕ್ಕಿಲಾಡಿಗೆ ನೀಡುವಂತೆ ಆಗ್ರಹ ಮಂಡಿಸಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ 34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೇವಪ್ಪ ನಾಯ್ಕ, ನಾವು ಈ ಮೊದಲು ಎರಡು ಬಾರಿ 34 ನೆಕ್ಕಿಲಾಡಿಗೆ ಜಲಸಿರಿಯ ಕುಡಿಯುವ ನೀರು ನೀಡುವಂತೆ ನಗರಸಭೆಗೆ ಪತ್ರ ಬರೆದಿದ್ದೇವೆ. ಇಂದು ತಾ.ಪಂ. ಇಒ ಅವರನ್ನು ಭೇಟಿ ಮಾಡಿದ್ದೇವೆ. ಇ.ಒ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಗರ ಸಭೆಯ ಆಯುಕ್ತರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಕಲುಷಿತಗೊಂಡಿರುವ ಎರಡು ಕೊಳವೆ ಬಾವಿಯ ಸಂಪರ್ಕವಿರುವ ಮನೆಗಳಿಗೆ ಜಲಸಿರಿಯ ಶುದ್ಧ ಕುಡಿಯುವ ನೀರು ಒದಗಿಸಬಹುದೆಂಬ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.


ಸರ್ವೇ ಕಾರ್ಯ:
ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿದ್ದು, ಅದು ಪೂರ್ಣಗೊಳ್ಳಲು ಒಂದು ವರ್ಷವಾದರೂ ಬೇಕು. ಈಗ ನೆಕ್ಕಿಲಾಡಿಯಲ್ಲಿ ಎರಡು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲದಿರುವುದರಿಂದ ಆ ಕೊಳವೆ ಬಾವಿಯ ನೀರನ್ನು ಬಳಸುವವರಿಗೆ ಜಲಸಿರಿ ನೀರನ್ನು ಕೊಡುವುದಾದರೆ ನಾವು ಪೈಪ್ ಅಳವಡಿಸಿಕೊಡುತ್ತೇವೆ. ಇದಕ್ಕಾಗಿ ನ.೨೮ರಂದು ಸರ್ವೇ ಕಾರ್ಯವೂ ನಡೆದಿದೆ. ಪೈಪ್ ಡಿ.೬ಕ್ಕೆ ಬರುತ್ತದೆ ಎಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರು ತಿಳಿಸಿದ್ದಾರೆ. ಪಂಚಾಯತ್‌ನವರು ಬಲ್ಕ್ ಮೀಟರ್ ಅಳವಡಿಸಿ, ಈ ಪೈಪ್‌ಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಅನುಷ್ಠಾನವಾಗುವಲ್ಲಿಯವರೆಗೆ ಜಲಸಿರಿ ಯೋಜನೆಯ ನೀರಿನ ಸಂಪರ್ಕ ಕೊಡಬಹುದು ಎಂದು ತಿಳಿಸಿದ್ದಾರೆ.
ಆದರೆ 34 ನೆಕ್ಕಿಲಾಡಿಯ ಇಡೀ ಗ್ರಾಮಕ್ಕೂ ಜಲಸಿರಿ ಯೋಜನೆಯ ನೀರನ್ನು ನೀಡಬೇಕೆನ್ನುವುದು ಸಾರ್ವಜನಿಕರ ಹಾಗೂ ಹೋರಾಟಗಾರರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here