ಕಣಚೂರು ಆಸ್ಪತ್ರೆ, ಸಂಶೊಧನಾ ಕೇಂದ್ರದ ಆಶ್ರಯದಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ದೇರಳಕಟ್ಟೆ ಜಂಕ್ಷನ್‌ನ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ

0

ಜಂಕ್ಷನ್ ಸೌಂದರೀಕರಣಕ್ಕೆ ಕಣಚೂರು ಶಿಕ್ಷಣ ಸಂಸ್ಥೆ ಮುಂದೆ ಬಂದಿರುವುದು ಶ್ಲಾಘನೀಯ: ಯು.ಟಿ.ಖಾದರ್

ವಿಟ್ಲ: ಬೆಂಗಳೂರು ಮತ್ತು ಕೇರಳ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಲಿಂಕ್ ರಸ್ತೆಯಾಗಿರುವ ತೊಕ್ಕೊಟ್ಟು-ಮೆಲ್ಕಾರ್ ರಾಜ್ಯ ಹೆದ್ದಾರಿಯನ್ನು ಮುಂದಿನ ಐದು ವರ್ಷದೊಳಗೆ ಸ್ಮಾರ್ಟ್ ಹಾಗೂ ಮಾದರಿ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಈಗಾಗಲೇ ನೀಲಿ ನಕಾಶೆ ಮಾಡಿದ್ದು, ತೊಕ್ಕೊಟ್ಟು ಜಂಕ್ಷನ್ ಸೇರಿದಂತೆ ರಾಜ್ಯ ರಸ್ತೆಯ ಉಳಿದ ಕಾಮಗಾರಿ 25 ಕೋಟಿ ರೂ ವೆಚ್ಚದಲ್ಲಿ ನಡೆಯಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.


ದೇರಳಕಟ್ಟೆ ಜಂಕ್ಷನ್‌ನಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೊಧನಾ ಕೇಂದ್ರದ ಆಶ್ರಯದಲ್ಲಿ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದೇರಳಕಟ್ಟೆ ಜಂಕ್ಷನ್‌ನ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಈಗಾಗಲೇ ನಾಟೆಕಲ್ ಜಂಕ್ಷನ್ ಯೇನೆಪೊಯ ವಿವಿ ಅಭಿವೃದ್ಧಿ ಪಡಿಸಿದ್ದು, ಕುತ್ತಾರು ಜಂಕ್ಷನ್ ನಿಟ್ಟೆ ವಿವಿ ಅಭಿವೃದ್ಧಿ ಪಡಿಸಲು ಮುಂದೆ ಬಂದಿದೆ. ಕ್ಷೇತ್ರದ ಹೃದಯ ಭಾಗವಾಗಿರುವ ದೇರಳಕಟ್ಟೆ ಜಂಕ್ಷನ್ ಸೌಂದರೀಕರಣಕ್ಕೆ ಕಣಚೂರು ಶಿಕ್ಷಣ ಸಂಸ್ಥೆ ಮುಂದೆ ಬಂದಿರುವುದು ಶ್ಲಾಘನೀಯ ಎಂದರು.


ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ತೊಕ್ಕೊಟ್ಟುವಿನಿಂದ – ಮುಡಿಪುವರೆಗಿನ ರಸ್ತೆ ಕಾಮಗಾರಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಶೇ.50 ಕಾಮಗಾರಿ ನಡೆದಿದ್ದು, ರಸ್ತೆ ಕಾಮಗಾರಿ ನಡೆದ ಕೂಡಲೇ ರಸ್ತೆ ಬದಿಯ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ನಾನು ಶಾಸಕನಾಗಿ ಇದ್ದರೂ ಇಲ್ಲದೇ ಹೋದರೂ ಸ್ಮಾರ್ಟ್ ರಸ್ತೆಗೆ ಬೇಕಾದ ನೀಲಿ ನಕಾಶೆ ಸಿದ್ಧತೆಯನ್ನು ಮಾಡಿದ್ದು, ಜಿಲ್ಲೆಯಲ್ಲೇ ಮಾದರಿ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.


ಐದು ಕೋಟಿ ಬಿಡುಗಡೆ :
ರಸ್ತೆ ನಿರ್ಮಾಣ ಸಂದರ್ಭದಲ್ಲಿ ಹಾನಿಗೀಡಾದ ಕಟ್ಟಡಗಳ ಸಂರಕ್ಷಣೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಐದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ.ಎಂದು ಯು.ಟಿ. ಖಾದರ್ ತಿಳಿಸಿದರು.


ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್, ಆರ್ಕಿಟೆಕ್ಟ್ ವೆಂಕಟೇಶ್‌ಪೈ. ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೇಮಾವತಿ, ಮಾಜಿ ಅಧ್ಯಕ್ಷರಾದ ಅಬ್ದುಲ್ ಸತ್ತಾರ್, ಅಕ್ಸಾ ಉಸ್ಮಾನ್, ಮಾಜಿ ಉಪಾಧ್ಯಕ್ಷ ಹಸೈನಾರ್ ಕಾನೆಕೆರೆ ಸದಸ್ಯರಾದ ಇಕ್ಬಾಲ್ ಎಚ್. ಆರ್., ರವೂಫ್ ರಂಜಾಡಿ, ಹನಿಫ್ ಬದ್ಯಾರ್, ಮಂಜನಾಡಿ ಗ್ರಾ, ಪಂ. ಸದಸ್ಯ ಬಶೀರ್, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಶೇಟ್ ಮೋನು, ಮಾಜಿ ಅಧ್ಯಕ್ಷ ಕುಂಇಮೋನು ನಾಟೆಕಲ್, ಭೂನ್ಯಾಯ ಮಂಡಳಿ ಸದಸ್ಯರಾದ ರವಿರಾಜ್ ಶೆಟ್ಟಿ, ಕಾಂಗ್ರೆಸ್ ವಲಯ ಅಧ್ಯಕ್ಷ ಕಬೀರ್, ಉದ್ಯಮಿ ಸಿ.ಎಂ. ಫಾರೂಕ್, ನಾರಾಯಣ ಶೆಟ್ಟಿ , ಅನ್ಸಾರುಲ್ ಅಸೋಸಿಯೇಷನ್ ಅಧ್ಯಕ್ಷ ಹನೀಫ್ ಜೆ., ಮುರಳೀಮೋಹನ್ ಸಾಲ್ಯಾನ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here