ಪರಿವರ್ತನೆಯ ಶಕ್ತಿ ಗುರುತತ್ವಕ್ಕಿದೆ : ಒಡಿಯೂರು ಶ್ರೀ
ವಿಟ್ಲ: ಜೀವನದಲ್ಲಿ ಗುರು ದೀಕ್ಷೆ ಅತೀ ಅಗತ್ಯ. ಮಾನವೀಯತೆಯ ಕೊಂಡಿಯನ್ನು ಬಲಗೊಳಿಸುವ ಕೆಲಸವಾಗಬೇಕು. ಪರಿವರ್ತನೆಯ ಶಕ್ತಿ ಗುರುತತ್ವಕ್ಕಿದೆ.
ಆಧ್ಯಾತ್ಮಿಕ ಅರಿವು ನಮ್ಮೊಳಗಿರಬೇಕು. ಭಾವನೆಗಳು ಶುದ್ದವಿದ್ದರೆ ದೈವಾನುಗ್ರಹ ಸಾಧ್ಯ. ಬದುಕಿನ ಸಮತೋಲನ ನಮ್ಮಲ್ಲಿರಬೇಕು. ದತ್ತ ತತ್ವ ಬಹಳಷ್ಟು ವಿಶೇಷವಾದುದು. ಗುರುದೀಕ್ಷೆಗೆ ಬದ್ದರಾಗುವ ಸಮಯವಿದು. ನಾವು ಮಾಡಿದ ಸತ್ಕರ್ಮಗಳು ನಮ್ಮನ್ನು ಕಾಪಾಡುತ್ತದೆ. ಮಾಲಾಧಾರಣೆ ಸಂದರ್ಭದಲ್ಲಿ ಭಕ್ತಿ ಶ್ರದ್ಧೆ ನಮ್ಮಲ್ಲಿರಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ.14ರ ವರೆಗೆ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಇದೊಂದು ಅಂತರಂಗದ ಸಂಭ್ರಮ. ಸಮಾಜದ ಓರೆ ಕೋರೆಯನ್ನು ತಿದ್ದುವ ಕಾರ್ಯ ಹರಿದಾಸರಿಂದ ಸಾಧ್ಯ. ಅವಧೂತನೆಂದರೆ ಅಕ್ಷರ ಬ್ರಹ್ಮ. ವೇದ ಉಪನಿಷತ್ ನ ಸಾರ ಜನರಿಗೆ ತಲುಪಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸಂಸ್ಥಾನದ ಪರಿಷ್ಕೃತ ವೆಬ್ ಸೈಟ್ ಗೆ ಚಾಲನೆ ನೀಡಿದರು. ಬಳಿಕ ಶ್ರೀಗಳು ಭಕ್ತರಿಗೆ ಮುದ್ರಾಧಾರಣೆ, ಮಾಲಾಧಾರಣೆ ನಡೆಸಿದರು. ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಮುಂಬೈಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ, ಕಲ್ಪನಾ ಮುಂಬೈ, ಅಜಿತ್ ಕುಮಾರ್ ಪಂದಳಂ, ಪೊಳಲಿ ಜಗದೀಶ್ ದಾಸರು, ಗಿರಿಜಾ ಬಾಯಿ, ರಮೇಶ್ ಹೆಬ್ಬಾರ್ , ಕೌಶಿಕ್ ಮಂಜನಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂತೋಷ್ ಭಂಡಾರಿ ಸ್ವಾಗತಿಸಿ, ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವೈದಿಕ ಸಾಂಸ್ಕೃತಿಕ ಕಾರ್ಯಕ್ರಮ:
ಡಿ.8ರಂದು ಬೆಳಗ್ಗೆ ದೀಪಾರಾಧನೆ, ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ, ಘಂಟೆ 9.30ರಿಂದ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ ನಡೆಯಿತು. ಮಧ್ಯಾಹ್ನ ಘಂಟೆ 12.30ರಿಂದ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಮಹಾಸಂತರ್ಪಣೆ ನಡೆಯಿತು. ಪೊಳಲಿ ಜಗದೀಶದಾಸರಿಂದ ‘ಪುರಂದರದಾಸರು’ ಹರಿಕಥಾ ಸತ್ಸಂಗ ನಡೆಯಿತು. ಯಕ್ಷಗಾನ ಸಾಪ್ತಾಹದ ಅಂಗವಾಗಿ ಯಜ್ಞ ಸಂಭ್ರಕ್ಷಣೆ-ಸೀತಾ ಕಲ್ಯಾಣ ಯಕ್ಷಗಾನ ನಡೆಯಿತು.