ನೂತನ ʻಮಯೂರʼ ರಂಗಮಂದಿರ
ಶಾಲೆಗೆ ನೂತನ ರಂಗಮಂದಿರವನ್ನು ದಿ. ನುಳಿಯಾಲು ರಾಮಯ್ಯ ರೈ ಮತ್ತು ಸುಮತಿ ರೈ ದಂಪತಿ ಸ್ಮರಣಾರ್ಥವಾಗಿ ಅವರ ಮಕ್ಕಳು ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಮಾಡಿಕೊಟ್ಟಿರುತ್ತಾರೆ. ಈ ಭಾಗದಲ್ಲಿ ಸಕ್ರೀಯವಾಗಿರುವ ‘ಮುಂಡೂರು ಯುವಶಕ್ತಿ ರಚನೆ’ ಯ ಹೆಸರು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ನೂತನ ರಂಗಮಂದಿರಕ್ಕೆ ʻಮಯೂರ ರಂಗಮಂದಿರʼ ಎಂದು ಹೆಸರಿಡಲಾಗಿದೆ. ವಾರ್ಷಿಕೋತ್ಸವದ ದಿನ ಅದರ ಉದ್ಘಾಟನೆ ನಡೆಯಲಿದೆ ಎಂದು ರಾಧಾಕೃಷ್ಣ ಬೋರ್ಕರ್ ಹೇಳಿದರು.
ಬೆಟ್ಟಂಪಾಡಿ: ನಿಡ್ಪಳ್ಳಿ ಗ್ರಾಮದ ಮುಂಡೂರು -1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಾರ್ಷಿಕೋತ್ಸವ ಸಮಾರಂಭವು ಡಿ.14ರಂದು ನಡೆಯಲಿದ್ದು, ಅದರ ಪೂರ್ವಭಾವಿ ಸಭೆ ಡಿ.7ರಂದು ಜರಗಿತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕತ್ತಲೆಕಾನರವರು ʻವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ, ವ್ಯವಸ್ಥಿತವಾದ ರೀತಿಯಲ್ಲಿ ನಡೆಸಲು ಊರವರ ಸಲಹೆ ಸೂಚನೆ ಪಡೆದುಕೊಂಡು ಯೋಜನೆ ರೂಪಿಸಲಾಗಿದೆ. ದಿ. ರಾಮಯ್ಯ ರೈ ಸುಮತಿ ರೈಯವರ ಮಕ್ಕಳು ಅವರ ಸ್ಮರಣಾರ್ಥವಾಗಿ ರಂಗಮಂದಿರದ ಸುಮಾರು 1.5 ಲಕ್ಷ ರೂ. ಪೂರ್ಣ ವೆಚ್ಚವನ್ನು ಭರಿಸಿದ್ದಾರೆ. ಕೆಲಸ ಕಾಮಗಾರಿಗಳು ಪೋಷಕರ, ವಿದ್ಯಾಭಿಮಾನಿಗಳ ಶ್ರಮದಾನದ ಮೂಲಕ ನಡೆದಿದೆ. ಎಲ್ಲರೂ ನಮ್ಮ ಶಾಲೆ ಎಂಬ ಭಾವನೆಯಿಂದ ಕೆಲಸ ಮಾಡಿದ್ದಾರೆ. ವಾರ್ಷಿಕೋತ್ಸವವನ್ನು ನಮ್ಮ ಮನೆಯ ಕಾರ್ಯಕ್ರಮದ ರೀತಿಯಲ್ಲಿ ಮಾಡಲಿದ್ದೇವೆ. ಊಟ ತಿಂಡಿ ಎಲ್ಲವೂ ಶಾಲೆಯಲ್ಲಿ ತಯಾರಾಗಲಿದೆ. ಪ್ರತೀ ಮನೆಯವರು ಅವರ ಸಂಬಂಧಿಕರ ಜೊತೆಗೂಡಿ ಕಾರ್ಯಕ್ರಮಕ್ಕೆ ಬರಬೇಕುʼ ಎಂದರು.
ಮುಂಬಯಿ ಉದ್ಯಮಿ ಚಿತ್ತರಂಜನ್ ಶೆಟ್ಟಿ ನುಳಿಯಾಲುರವರು ಸಲಹೆ ನೀಡಿ ʻನಮ್ಮ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯುವಲ್ಲಿ ನಾವೆಲ್ಲಾ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತಾಗಬೇಕು. ರಂಗಮಂದಿರದ ಕೆಲಸ, ಶಾಲೆಯ ಶ್ರಮದಾನದ ಮೂಲಕ ಶಾಲೆಯ ಉಳಿವಿಗೆ ಹೋರಾಟ ಮಾಡಿರುವ ಪೋಷಕರಿಗೆ, ವಿದ್ಯಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ನುಳಿಯಾಲು ರಾಧಾಕೃಷ್ಣ ರೈಯವರು ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಸೀತಾ, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಕರ್ಕೇರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಭಟ್, ಶಾಲಾ ಮುಖ್ಯಗುರು ಆಶಾ ಗೋವಿಂದ ಭಟ್ ಉಪಸ್ಥಿತರಿದ್ದರು.
ಬೆಳಿಗ್ಗೆ ನೂತನ ರಂಗಮಂದಿರದಲ್ಲಿ ಪುರೋಹಿತರಾದ ರಾಧಾಕೃಷ್ಣ ಭಟ್ ಕಕ್ಕೂರುವರ ನೇತೃತ್ವದಲ್ಲಿ ಗಣಹೋಮ ನಡೆಯಿತು. ಪೋಷಕರು, ವಿದ್ಯಾಭಿಮಾನಿಗಳು, ವಿದ್ಯಾರ್ಥಿಗಳು ಪಾಲ್ಗೊಂಡರು.