ನಾಗರಾಜ ಕುಲಕರ್ಣಿ ಅವರ ಸೇವೆ:ಡಿ.15 ಕುಕ್ಕೆ ಪುರ ಪ್ರವೇಶ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬೆಳ್ಳಿಯ ಪಲ್ಲಕಿಯನ್ನು ಸೇವಾರೂಪದಲ್ಲಿ ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸಮರ್ಪಣೆ ಮಾಡಲಿದ್ದಾರೆ. ಸುಮಾರು 17 ಲಕ್ಷದ 65 ಸಾವಿರದ 200 ರೂ ವೆಚ್ಚದಲ್ಲಿ ಪಲ್ಲಕಿ ರಚನೆಯಾಗಿದೆ. ಶ್ರೀ ದೇವಳದ ಬೆಳ್ಳಿಯ ವಸ್ತುಗಳ ಕೆಲಸ ನಿರ್ವಹಿಸುವ ಕಾರ್ಕಳದ ಬಜಗೋಳಿಯ ಸುಧಾಕರ ಡೋಂಗ್ರೆ ಮತ್ತು ಶಿಷ್ಯರು ನೂತನ ಪಲ್ಲಕಿಯನ್ನು ನಿರ್ಮಿಸುತ್ತಿದ್ದಾರೆ. ಈಗ ಇರುವ ಪಲ್ಲಕಿಯಂತೆ ನೂತನ ಪಲ್ಲಕಿಯು ನಿರ್ಮಾಣಗೊಳ್ಳಲಿದೆ. ಸಂಪ್ರದಾಯ ಪ್ರಕಾರ ಈಗಿನ ಪಲ್ಲಕಿಯ ರೀತಿಯಲ್ಲಿ ಹೊಸ ಪಲ್ಲಕಿ ರಚಿತವಾಗಿ ಶ್ರೀ ದೇವರಿಗೆ ಡಿ.16ರಂದು ಅರ್ಪಣೆಯಾಗಲಿದೆ.
ಶ್ರೀ ದೇವರ ಪರಮ ಭಕ್ತರಿಂದ ಸೇವೆ:
ಮೂಲತಃ ಬಾಗಲಕೋಟೆವರಾಗಿರುವ ಉದ್ಯಮಿ ನಾಗರಾಜ ಕುಲಕರ್ಣಿ ಮತ್ತು ಕುಟುಂಬಸ್ಥರು ಶ್ರೀ ದೇವರ ಪರಮ ಭಕ್ತ.ಅವರು ಪ್ರತಿವರ್ಷ ಶ್ರೀ ದೇವಳಕ್ಕೆ ಆಗಮಿಸಿ ದೇವರ ಸೇವೆ ನೆರವೇರಿಸುತ್ತಾ ಬರುತ್ತಿದ್ದಾರೆ. ಅಲ್ಲದೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಬಳಿಕ ಅವರಿಗೆ ಒಳಿತಾಗಿತ್ತು, ಶ್ರೀ ದೇವರ ಆಶೀರ್ವಾದದಿಂದ ಗಣನೀಯವಾದ ಅಭಿವೃದ್ಧಿ ಉಂಟಾಗಿತ್ತು.ಆದುದರಿಂದ ಶ್ರೀ ದೇವಳಕ್ಕೆ ಏನಾದರೂ ಒಂದು ಸೇವೆ ನೆರವೇರಿಸುವ ಆಕಾಂಕ್ಷೆ ಇವರಿಗಿತ್ತು. ಈ ವರ್ಷ ನವೆಂಬರ್‌ನಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಅವರು ಕುಕ್ಕೆ ಸುಬ್ರಹ್ಮಣ್ಯದ ಇವರ ಆತ್ಮೀಯ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ ಅವರಲ್ಲಿ ತಮ್ಮ ಆಸೆಯನ್ನು ತೋರ್ಪಡಿಸಿದರು. ತಕ್ಷಣವೇ ಶ್ರೀಕುಮಾರ್ ಅವರು ದೇವಳದ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಈ ಬಗ್ಗೆ ತಿಳಿಸಿ ಬಳಿಕ ದೇವಳದ ಅಧೀಕ್ಷಕರ ಸಲಹೆಯಂತೆ ಶ್ರೀ ದೇವರ ಪಲ್ಲಕಿಯ ಬಗ್ಗೆ ತಿಳಿದುಕೊಂಡರು. ಬಳಿಕ ಈ ಬಗ್ಗೆ ಸೇವಾರ್ಥಿ ಮತ್ತು ಅವರ ಸ್ನೇಹಿತರು ಸಮಾಲೋಚನೆ ನಡೆಸಿ ನೂತನ ಪಲ್ಲಕಿಯನ್ನೇ ಸೇವಾರೂಪದಲ್ಲಿ ದೇವರಿಗೆ ಕೊಡುವುದಾಗಿ ನಿರ್ಧರಿಸಿದರು.
ಈ ಹಿಂದಿನ ಪಲ್ಲಕಿಯಂತೆ:
ನಂತರ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರಾ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಲ್ಲಿ ನೂತನ ಪಲ್ಲಕಿ ಸೇವಾ ರೂಪದಲ್ಲಿ ನೀಡುವ ಬಗ್ಗೆ ತಿಳಿಸಿದರು.ಅಧಿಕಾರಿಗಳ ಒಪ್ಪಿಗೆ ಬಳಿಕ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರಲ್ಲಿ ಈ ಬಗ್ಗೆ ಕೇಳಿದಾಗ ಅವರು ಈ ಹಿಂದಿನ ಪಲ್ಲಕಿಯಂತೆ ನೂತನ ಪಲ್ಲಕಿ ಇರಬೇಕು.ಅದರ ಆಯ, ಕೆತ್ತನೆ, ವಿಸ್ತೀರ್ಣ ಇತ್ಯಾದಿಗಳು ಈ ಹಿಂದಿನ ಪಲ್ಲಕಿ ಇದ್ದಂತೆ ಸಂಪ್ರದಾಯ ಪ್ರಕಾರ ನಿರ್ಮಿಸಬೇಕು.ಯಾವುದೇ ಬದಲಾವಣೆ ಆಗಬಾರದು ಎಂದು ಸಲಹೆ ನೀಡಿದರು. ಇವರ ಸಲಹೆಯಂತೆ ಈಗಿರುವ ಪಲ್ಲಕಿಯಂತೆ ನೂತನ ಪಲ್ಲಕಿಯನ್ನು ಸುಧಾಕರ ಡೋಂಗ್ರೆ ಮತ್ತು ಶಿಷ್ಯ ವೃಂದ ನಿರ್ಮಿಸಲು ಆರಂಭಿಸಿದರು.
ಆಕರ್ಷಕ ಕೆತ್ತನೆ:
ಈಗಿರುವ ಪಲ್ಲಕಿಯಲ್ಲಿರುವಂತೆ ಆಕರ್ಷಕ ಬೆಳ್ಳಿಯ ಕೆತ್ತನೆಗಳನ್ನು ನೂತನ ಪಲ್ಲಕಿಯಲ್ಲಿ ಮಾಡಲಾಗಿದೆ. ಆರಂಭದಲ್ಲಿ ಮರದ ಪಲ್ಲಕಿಯನ್ನು ನಿರ್ಮಿಸಿ ಅದಕ್ಕೆ ಬೆಳ್ಳಿಯ ಕೆತ್ತನೆಗಳನ್ನು ಅಳವಡಿಸಲಾಗುವುದು.ಬೆಳ್ಳಿಯ ನೆಗಳೆ ಬಾಯಿ, ಮುಂಭಾಗದಲ್ಲಿ, ಒಳ ಭಾಗದಲ್ಲಿ ದೊಡ್ಡ, ಮದ್ಯಮ ಗಾತ್ರದ ಮತ್ತು ಚಿಕ್ಕ ಬೆಳ್ಳಿಯಗೊಂಡೆಯನ್ನೊಳಗೊಂಡ ಜಾಲರಿ, ಬೆಳ್ಳಿಯ ಗೊಂಡೆ ಮಾಲೆ, ಗಣಪತಿ, ನಾಗ, ನವಿಲು, ಕುಕ್ಕುಟವನ್ನು ಈ ಹಿಂದಿನ ಪಲ್ಲಕಿಯಲ್ಲಿ ಇರುವಂತೆ ಕೆತ್ತನೆ ಮಾಡಲಾಗಿದೆ. ಈ ಹಿಂದಿನ ಪಲ್ಲಕಿಯ ತದ್ರೂಪದಂತೆ ನೂತನ ಪಲ್ಲಕಿಯು ಸುಮಾರು ಒಂದು ತಿಂಗಳ ಕಾಲಾವಧಿಯಲ್ಲಿ ರಚನೆಯಾಗಿದೆ.
ವೀಳ್ಯ ನೀಡಿಕೆ:
ಸೇವಾರ್ಥಿಯಾದ ನಾಗರಾಜ ಕುಲಕರ್ಣಿ ಅವರಿಗೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಶ್ರೀ ದೇವರ ಪ್ರಸಾದವನ್ನು ಗರ್ಭಗುಡಿಯ ಮುಂಭಗದಲ್ಲಿ ಪ್ರಾರ್ಥನೆ ಮಾಡಿ ಪ್ರಸಾದ ನೀಡುವ ಮೂಲಕ ನೂತನ ಪಲ್ಲಕಿ ರಚನಾ ಸೇವೆಗೆ ವೀಳ್ಯ ನೀಡಿದರು.ಅಲ್ಲದೆ ಶ್ರೀ ದೇವರ ಆಶೀರ್ವಾದದಿಂದ ಈಗಿರುವ ಪಲ್ಲಕಿಯಂತೆ ನೂತನ ಪಲ್ಲಕಿ ರಚನೆಯಾಗಲಿ ಈ ಕಾರ್ಯವು ನಿರ್ವಿಘ್ನವಾಗಿ ನೆರವೇರಿ ಶ್ರೀ ದೇವರಿಗೆ ಸಮರ್ಪಣೆಯಾಗ ಎಂದು ಆಶೀರ್ವದಿಸಿದರು.
ಈ ಸಂದರ್ಭ ಸೇವಾರ್ಥಿಗಳಾದ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಸೇವಾರ್ಥಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು.
ಡಿ.15 ಕುಕ್ಕೆ ಪುರ ಪ್ರವೇಶ:
ನೂತನ ಬೆಳ್ಳಿಯ ಪಲ್ಲಕಿಯು ಡಿ.15ರಂದು ಆದಿತ್ಯವಾರ ಬೆಳಗ್ಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪುರ ಪ್ರವೇಶಿಸಲಿದೆ.ಕಾಶಿಕಟ್ಟೆ ಬಳಿಯಿಂದ ಶ್ರೀ ದೇವಳದ ತನಕ ಮೆರವಣಿಗೆಯಲ್ಲಿ ಪಲ್ಲಕಿಯನ್ನು ಕೊಂಡೊಯ್ಯಲಾಗುವುದು.ಮಂಗಳವಾದ್ಯ, ಚೆಂಡೆ, ಬ್ಯಾಂಡ್, ಬಿರುದಾವಳಿಗಳೊಂದಿಗೆ ಶ್ರೀ ದೇವಳದ ಅಧಿಕಾರಿಗಳ, ಗಣ್ಯರ ಮತ್ತು ಭಕ್ತರ ಉಪಸ್ಥಿತಿಯಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಡಿ.16ರಂದು ಸೋಮವಾರ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ನೂತನ ಬೆಳ್ಳಿಯ ಪಲ್ಲಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ಸರ್ವ ಭಕ್ತರು ಭಾಗವಹಿಸಬೇಕಾಗಿ ಸೇವಾರ್ಥಿ ನಾಗರಾಜ ಕುಲಕರ್ಣಿ ವಿನಂತಿಸಿದ್ದಾರೆ.