ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಮಹಿಳಾ ಗ್ರಾಮ ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದ.19 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು. ಮಿಷನ್ ಶಕ್ತಿಯೋಜನೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಕಛೇರಿ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಸಬಲೀಕರಣ ಅರಿವು ಕಾರ್ಯಕ್ರಮವೂ ನಡೆಯಿತು. ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಅಶ್ವಿನಿಯವರು ಮಾಹಿತಿ ನೀಡುತ್ತಾ, ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು. ಕೌಟುಂಬಿಕ ದೌರ್ಜನ್ಯ, ಕಿರುಕುಳ, ಆತ್ಮಹತ್ಯೆ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ನೆಮ್ಮದಿಯ ಜೀವನ ಕ್ರಮಗಳು, ಮಹಿಳಾ ಸಾಂತ್ವನ ಕೇಂದ್ರದ ಬಗ್ಗೆಯೂ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಒಳಮೊಗ್ರು ಕಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಪ್ರಮೀಳಾರವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ಸುಲೋಚನಾರವರು ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯರವರು ಮಹಿಳೆಯ ಜೀವನ ಕ್ರಮಗಳು, ಆರೋಗ್ಯ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಸುಂದರಿ, ಶಾರದಾ, ವನಿತಾ ಕುಮಾರಿ, ಚಿತ್ರಾ ಬಿ.ಸಿ, ನಳಿನಾಕ್ಷಿ ಉಪಸ್ಥಿತರಿದ್ದರು. ಸದಸ್ಯೆ ರೇಖಾ ಯತೀಶ್ ಬಿಜತ್ರೆ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ವಂದಿಸಿದರು. ಸಿಬ್ಬಂದಿಗಳಾದ ಜಾನಕಿ, ಕೇಶವ, ಲೋಕನಾಥ ಸಹಕರಿಸಿದ್ದರು.
ಸ್ವಚ್ಛತಾ ಸೇನಾನಿಗಳಿಗೆ ಗೌರವಾರ್ಪಣೆ
ಗ್ರಾಮ ಪಂಚಾಯತ್‌ನ ಸ್ವಚ್ಛವಾಹಿನಿ ಸ್ವಚ್ಛತಾ ಸೇನಾನಿಗಳಾದ ಕವಿತಾ, ಕಮಲಾಕ್ಷಿ ಮತ್ತು ಕವಿತಾ ರವರುಗಳಿಗೆ ಈ ಸಂದರ್ಭದಲ್ಲಿ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಲು,ಸ್ಮರಣಿಕೆ, ಹೂ ನೀಡಿ ಅವರುಗಳನ್ನು ಗೌರವಿಸಲಾಯಿತು.
‘ ಮಹಿಳಾ ಸಬಲೀಕರಣದೊಂದಿಗೆ ಮಹಿಳೆಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಹಾಗೇ ಮಹಿಳೆಯರ ಜೀವನ ಕ್ರಮ, ಆರೋಗ್ಯದ ಬಗ್ಗೆ ಮಹಿಳಾ ಗ್ರಾಮಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಸ್ವಚ್ಛತಾ ಸೇನಾನಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದ್ದೇವೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ