ಹಿರೇಬಂಡಾಡಿಯಲ್ಲಿ ಅಕ್ರಮ- ಸಕ್ರಮ ಬೈಠಕ್

0

ಉಪ್ಪಿನಂಗಡಿ: ನಿಮ್ಮೆಲ್ಲರ ಸಹಕಾರದಿಂದ ಬಡವರ ಸೇವೆ ಮಾಡುವ ಅವಕಾಶವನ್ನು ದೇವರು ನನಗೆ ಒದಗಿಸಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಜವಾಬ್ದಾರಿ ನನ್ನದಾಗಿದೆ. ಆದ್ದರಿಂದ ಅಕ್ರಮ- ಸಕ್ರಮ ಬೈಠಕ್ ಅನ್ನು ಗ್ರಾಮ ಮಟ್ಟದಲ್ಲಿ ನಡೆಸಿ ಜಾತಿ- ಧರ್ಮ, ರಾಜಕೀಯ ಬೇಧವಿಲ್ಲದೆ ಎಲ್ಲಾ ಅರ್ಹರಿಗೂ ಅಕ್ರಮ- ಸಕ್ರಮ, 94ಸಿ, 94ಸಿಸಿ ಯ ಹಕ್ಕುಪತ್ರಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಕೆಲಸವನ್ನು ನನ್ನ ಶಾಸಕತ್ವದ ಅವಧಿಯಲ್ಲಿ ಮಾಡುತ್ತಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.


ಹಿರೇಬಂಡಾಡಿಯ ಗ್ರಾ.ಪಂ. ಸಭಾಂಗಣದಲ್ಲಿ ಡಿ.31ರಂದು ನಡೆದ ಅಕ್ರಮ- ಸಕ್ರಮ ಬೈಠಕ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಅಧಿಕಾರ ಕೊಟ್ಟದ್ದು ಬಡವರ ಸೇವೆ ಮಾಡಲು. ನಾನಾಗಲಿ, ಅಧಿಕಾರಿಗಳಾಗಲೀ ಇಲ್ಲಿ ನಮ್ಮ ಜಾಗವನ್ನು ನಿಮಗೆ ನೀಡುವುದಲ್ಲ. ನೀವು ಈ ಮೊದಲಿಂದ ಅನುಭವಿಸಿಕೊಂಡು ಬರುತ್ತಿರುವ ಜಾಗವನ್ನು ನಿಮಗೆ ಅಕ್ರಮ- ಸಕ್ರಮ, 94ಸಿ ಮೂಲಕ ನೀಡುವುದು. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಹಿಂದೆ ಲಕ್ಷ ಲಕ್ಷ ರೂಪಾಯಿ ನೀಡಿದವರ ಕಡತಗಳು ಆಗಿದ್ದು, ಬಡವರ ಕಡತಗಳು ಮಾತ್ರ ಧೂಳು ತಿನ್ನುತ್ತಿವೆ. ನಾನು ಶಾಸಕನಾಗಿ ಅದೆಲ್ಲಾವನ್ನು ನ್ಯಾಯಯುತವಾಗಿ ಅರ್ಹರಿಗೆ ನೀಡಬೇಕೆನ್ನುವ ಗುರಿ ನನ್ನದಾಗಿದ್ದು, ಯಾವುದೇ ಜಾತಿ, ಧರ್ಮ, ರಾಜಕೀಯ ಬೇಧ ಮಾಡದೇ, ಲಂಚ, ಭ್ರಷ್ಟಾಚಾರ ಮುಕ್ತವಾಗಿ ಆ ಕಡತಗಳನ್ನು ಜನರ ಮನೆಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದೇನೆ. ಈ ವ್ಯವಸ್ಥೆ ಪಾರದರ್ಶಕವಾಗಿರಬೇಕೆಂದು ಗ್ರಾಮ ಮಟ್ಟದಲ್ಲಿ ಬೈಠಕ್ ನಡೆಸಿ, ಸಾರ್ವಜನಿಕರನ್ನು ಸೇರಿಸಿ ಅವರ ಮುಂದೆನೇ ಕಡತಗಳ ವಿಲೇವಾರಿ ಮಾಡುತ್ತಿದ್ದೇನೆ. ಅಕ್ರಮ- ಸಕ್ರಮ ಕಡತ ವಿಲೇವಾರಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಈಗ ರಾಜ್ಯದಲ್ಲಿಯೇ ನಂ 1 ಆಗಿದೆ. ಕೆಲವು ಕಡತಗಳು ವಿಲೇವಾರಿಗೆ ಅರ್ಹವಾಗಿದ್ದರೂ, ಅದಕ್ಕೆ ಕೆಲವರು ಬೇಕಂತಲೇ ಆಕ್ಷೇಪವಿಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ಆಕ್ಷೇಪಗಳನ್ನು ಅಧಿಕಾರಿಗಳು ತೆಗೆದು ಬಿಸಾಡಬೇಕು. ಸೋಮವಾರದಂದು ನನ್ನ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುವ ಕೆಲಸ ಮಾಡುತ್ತಿದ್ದು, 800 ಮಂದಿ ಅವರವರ ಸಮಸ್ಯೆಗಳನ್ನು ಹೇಳಿಕೊಂಡು ಬಂದಿದ್ದರು. ಅವರಲ್ಲಿ ಸುಮಾರು 400ರಷ್ಟು ಹಿರೇಬಂಡಾಡಿ, ಬಜತ್ತೂರು ಭಾಗದ ಜನ ಅಕ್ರಮ- ಸಕ್ರಮ, 94 ಸಿಯ ಅವರ ಅರ್ಜಿಗಳು ಹಲವು ವರ್ಷಗಳಿಂದ ವಿಲೇವಾರಿ ಆಗದೇ ಕಂದಾಯ ಇಲಾಖೆಯಲ್ಲಿ ಇರುವ ಬಗ್ಗೆ ಪ್ರಸ್ತಾಪಿಸಿದರು. ಈ ಮೊದಲು ಈ ಗ್ರಾಮಗಳಿಗೆ ಹತ್ತಿರದವರೇ ಆದ ಶಾಸಕರಿದ್ದರೂ ಅವರ ಸಮಸ್ಯೆ ಪರಿಹಾರ ಮಾಡಲು ಇವರಿಂದ ಆಗಿಲ್ಲ ಎನ್ನುವುದು ವಿಶೇಷವೆನಿಸುತ್ತದೆ. ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಮಾತ್ರ ಹೆಸರು ಉಳಿಯುತ್ತೆ. ರಾಜ್ಯ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿ ಯೋಜನೆಗಳು ಮೂಲಕ ಪ್ರತಿ ಬಡವರ ಮನೆಯನ್ನು ತಲುಪಿದ್ದು, ಓರ್ವ ಕಾಂಗ್ರೆಸ್ ಶಾಸಕನಾಗಿ ನಾನು ಕೂಡಾ ಜನರಿಗೆ ಉಪಯೋಗವಾಗುವಂತಹ ಉದ್ಯೋಗ ಮೇಳ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ ಎಂದರು.


ಅಕ್ರಮ- ಸಕ್ರಮ ಸಮಿತಿಯ ಸದಸ್ಯ ಮುಹಮ್ಮದ್ ಬಡಗನ್ನೂರು ಮಾತನಾಡಿ, ಅಕ್ರಮ- ಸಕ್ರಮ, 94ಸಿ, 94ಸಿಸಿಯನ್ನು ಕಾಂಗ್ರೆಸ್ ಸರಕಾರ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದು, ಅದನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಈ ಡಿಸೆಂಬರ್ ತಿಂಗಳಲ್ಲಿ ಮೂರು ಅಕ್ರಮ- ಸಕ್ರಮ ಬೈಠಕ್ ವಿವಿಧ ಗ್ರಾಮಗಳಲ್ಲಿ ನಡೆಸಲಾಗಿದೆ. ಅಕ್ರಮ- ಸಕ್ರಮ ಬೈಠಕ್ ಅನ್ನುವುದು ಒಂದು ನ್ಯಾಯಾಲಯದ ರೀತಿ ಕಾರ್ಯಾಚರಿಸುತ್ತಿದ್ದು, ನಾವೇ ಜನರ ಬಳಿಗೆ ಅದನ್ನು ತಲುಪಿಸಿ ಅವರ ಕಡತಗಳನ್ನು ವಿಲೇವಾರಿ ಮಾಡುವ ಕಾರ್ಯವನ್ನು ನಮ್ಮ ಶಾಸಕರು ಮಾಡುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರಕಾರ ನುಡಿದಂತೆ ನಡೆಯುವ ಸರಕಾರವಾಗಿದ್ದು, ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವ ಪಕ್ಷವಾಗಿದೆ. ನಮ್ಮ ಶಾಸಕರು ಕೂಡಾ ಇದೇ ರೀತಿ ನಡೆಯುತ್ತಿದ್ದು, ತನ್ನ ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.


ಪುತ್ತೂರು ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಈಗಿನ ಸರಕಾರದ ಅವಧಿಯಲ್ಲಿ ಅಕ್ರಮ- ಸಕ್ರಮವನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದ್ದು, ಡಿಜಿಟಲ್ ತಂತ್ರಾಂಶಗಳ ಮೂಲಕ ಇದು ನಡೆಯುತ್ತದೆ. ಈಗ ಅಕ್ರಮ- ಸಕ್ರಮ ಮಂಜೂರಾತಿಗೊಂಡರೆ ಏಕ ಕಾಲಕ್ಕೆ ಪ್ಲಾಟಿಂಗ್ ಕೂಡಾ ಆಗಿ ಜನರಿಗೆ ಹಕ್ಕು ಪತ್ರ ನೀಡಲಾಗುತ್ತದೆ. ನಮ್ಮ ಶಾಸಕರು ಅಭಿವೃದ್ಧಿಯ ಪರವಾಗಿದ್ದು, ಬಡವರ ಬಗ್ಗೆ ಕಾಳಜಿಯುಳ್ಳವರಾಗಿದ್ದಾರೆ. ಆದ ಕಾರಣ ಅಕ್ರಮ- ಸಕ್ರಮ ಕಡತಗಳ ವಿಲೇವಾರಿಯಲ್ಲಿ ಪುತ್ತೂರು ತಾಲೂಕು ರಾಜ್ಯದಲ್ಲಿಯೇ ನಂ.1 ಎನಿಸಿದೆ ಎಂದರು.


ವೇದಿಕೆಯಲ್ಲಿ ಅಕ್ರಮ- ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪಲೇಖ ಆಳ್ವ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಉಪ್ಪಿನಂಗಡಿ ಕಂದಾಯ ಹೋಬಳಿ ನಿರೀಕ್ಷಕ ಚಂದ್ರ ನಾಯ್ಕ, ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ತೌಸೀಫ್ ಯು.ಟಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಹಿರೇಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರವಿ ಪಟಾರ್ತಿ, ಹಿರೇಬಂಡಾಡಿ ಗ್ರಾ.ಪಂ. ಸದಸ್ಯರಾದ ಸತೀಶ್ ಶೆಟ್ಟಿ ಹೆನ್ನಾಳ, ಗೀತಾ ದಾಸರಮೂಲೆ, ಸವಿತಾ ಹರೀಶ್, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ, ಕಾಂಗ್ರೆಸ್ ಪ್ರಮುಖರಾದ ಅಸ್ಕರ್ ಅಲಿ, ಯೊಗೀಶ್ ಸಾಮಾನಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಹಿರೇಬಂಡಾಡಿ ಗ್ರಾ.ಪಂ. ಪಿಡಿಒ ಪ್ರವೀಣ್, ಲೊಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಹಿರೇಬಂಡಾಡಿ ವಿಎ ನರಿಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಹಿರೇಬಂಡಾಡಿಗೆ 1.13 ಕೋ. ರೂ. ಅನುದಾನ
ಹಿರೇಬಂಡಾಡಿ ಗ್ರಾಮದ ಶ್ರೀ ಉಳತ್ತೋಡಿ ಷಣ್ಮುಖ ದೇವಸ್ಥಾನದ ರಸ್ತೆ ಸೇರಿದಂತೆ ವಿವಿಧ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಿರೇಬಂಡಾಡಿ ಗ್ರಾಮಕ್ಕೆ ಈಗಾಗಲೇ 1.13 ಕೋ.ರೂ.ಗಳ ಅನುದಾನವನ್ನು ಮಂಜೂರುಗೊಳಿಸಿದ್ದು, ಈಗಾಗಲೇ ಇದರಲ್ಲಿ ಕೆಲವು ರಸ್ತೆ ಕಾಮಗಾರಿಗಳು ಆರಂಭವಾಗಿವೆ. ಇನ್ನುಳಿದ ರಸ್ತೆ ಕಾಮಗಾರಿಗಳು ಸದ್ಯದಲ್ಲೇ ಆರಂಭವಾಗಲಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಕೋಡಿಂಬಾಡಿ ವಿಎ ಮೇಲೆ ಆರೋಪ
ಕೋಡಿಂಬಾಡಿ ವಿಎ ಅಕ್ರಮ- ಸಕ್ರಮ, 94 ಸಿ ಫೈಲ್‌ಗಳನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ತನ್ನ ಕೆಲಸದ ಮೇಲೆ ಉದಾಸೀನತೆ ತೋರುತ್ತಿದ್ದಾರೆ. ಆದ್ದರಿಂದ ಬಡವರ ಕೆಲಸಗಳು ಆಗುತ್ತಿಲ್ಲ. ಸುಮಾರು 12ರಷ್ಟು 94 ಸಿ ಫೈಲ್‌ಗಳನ್ನು ಶಾಸಕರು ಶಿಫಾರಸ್ಸು ಮಾಡಿದ್ದರೂ, ಇಂದು ಅವರು ಮೂರು ಫೈಲ್‌ಗಳನ್ನು ಮಾತ್ರ ಮಾಡಿದ್ದಾರೆ ಎಂದು ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅಕ್ರಮ- ಸಕ್ರಮ ಬೈಠಕ್‌ನಲ್ಲೇ ಆರೋಪಿಸಿದರು. ಇದನ್ನು ಕೇಳಿ ವಿಎ ಅವರನ್ನು ಪ್ರಶ್ನಿಸಿದ ಶಾಸಕರು ವಿಎ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಇಂದಿನ ಅಕ್ರಮ- ಸಕ್ರಮ ಬೈಠಕ್‌ನಲ್ಲಿ 94ಸಿಯಡಿ 15 ಮಂದಿಗೆ ಹಕ್ಕು ಪತ್ರ ನೀಡಲಾಯಿತು. 53 ಅಕ್ರಮ- ಸಕ್ರಮ ಕಡತಗಳಿಗೆ ಮಂಜೂರಾತಿ ನೀಡಲಾಯಿತು.

LEAVE A REPLY

Please enter your comment!
Please enter your name here