ಕಬಕದ ಮಹಮ್ಮದಿಯಾ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್‌ ಏಜೆನ್ಸಿಯಿಂದ ವಂಚನೆ ಆರೋಪ-ಉಮ್ರಾ ಯಾತ್ರೆಗೆ ತೆರಳಿದ್ದ ನೂರಾರು ಮಂದಿ ಸ್ವದೇಶಕ್ಕೆ ಮರಳಲಾಗದೇ ಅತಂತ್ರ ಸ್ಥಿತಿಯಲ್ಲಿ..!

0

ಪುತ್ತೂರು: ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾದ ಪವಿತ್ರ ಮಕ್ಕಾ-ಮದೀನಾಕ್ಕೆ ಕರೆದೊಯ್ದ ಮಹಮ್ಮದಿಯಾ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್‌ನ ಮಾಲಕರು ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಕೈ ಬಿಟ್ಟಿರುವ ಆರೋಪ ಕೇಳಿ ಬಂದಿದ್ದು ಸುಮಾರು 160 ಯಾತ್ರಾರ್ಥಿಗಳು ಅತಂತ್ರ ಸ್ಥಿತಿಯಲ್ಲಿರುವ ಬಗ್ಗೆ ತಿಳಿದು ಬಂದಿದೆ.

ಅಶ್ರಫ್ ಸಖಾಫಿ ಪರ್ಪುಂಜ ಎಂಬ ವ್ಯಕ್ತಿ ಮುಹಮ್ಮದಿಯಾ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್ ಏಜೆನ್ಸಿಯನ್ನು ನಡೆಸುತ್ತಿದ್ದು, ಕಡಿಮೆ ದರಕ್ಕೆ ಉಮ್ರಾ ಯಾತ್ರೆ ವ್ಯವಸ್ಥೆ ಮಾಡಿಸುವುದಾಗಿ ಹೇಳಿಕೊಂಡು ದ.ಕ ಹಾಗೂ ಹೊರ ಜಿಲ್ಲೆಯ ಸುಮಾರು 160 ಮಂದಿಯನ್ನು ಡಿ.14ಕ್ಕೆ ಮಕ್ಕಾಕ್ಕೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ. ಆದರೆ ಮಕ್ಕಾದಲ್ಲಿ ಉಮ್ರಾ ವಿಧಿ ವಿಧಾನ ಪೂರೈಸಿ ಮದೀನಾಕ್ಕೆ ಬಂದ ಬಳಿಕ ಅಶ್ರಫ್ ಸಖಾಫಿ ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ.

ಇದೀಗ ಭಾರತೀಯ ರಾಯಭಾರಿ ಕಚೇರಿ, ಸೌದಿ ಅರೇಬಿಯಾದ ಹಜ್ ಸಚಿವಾಲಯ, ಮತ್ತು ಕೆಸಿಎಫ್ ಸಂಘಟನೆಯ ಕಾರ್ಯಕರ್ತರು ಯಾತ್ರಾರ್ಥಿಗಳ ನೆರವಿಗೆ ಬಂದಿದ್ದಾರೆ. ಕೆಸಿಎಫ್ ವತಿಯಿಂದ ಕಳೆದ ನಾಲ್ಕೈದು ದಿನದಿಂದ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು ತಾಲೂಕಿನ ಕಬಕದಲ್ಲಿ ಕಚೇರಿಯನ್ನು ಹೊಂದಿರುವ ಈ ಟ್ರಾವೆಲ್ಸ್‌ನ ಅಶ್ರಫ್ ಸಖಾಫಿ ಪರ್ಪುಂಜ ಇತರ ಸಹ ಏಜೆನ್ಸಿಗಳ ಮೂಲಕ 160 ಮಂದಿಯನ್ನು ಸುಮಾರು 60-65 ಸಾವಿರ ರೂ.ನಲ್ಲಿ ಉಮ್ರಾ ಯಾತ್ರೆಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಮಕ್ಕಾದಿಂದ ಮದೀನಾಕ್ಕೆ ಕರೆದೊಯ್ದು ಬಳಿಕ ವಂಚಿಸಿರುವುದಾಗಿ ಆರೋಪಿಸಲಾಗಿದೆ.

ಈ ವ್ಯಕ್ತಿಯಿಂದ ಯಾತ್ರಾರ್ಥಿಗಳು ಮಾತ್ರವಲ್ಲ ಸಹ ಏಜೆನ್ಸಿಗಳು ಕೂಡ ಮೋಸ ಹೋಗಿದ್ದು, ತಮ್ಮ ಅಧೀನದಲ್ಲಿರುವ ಯಾತ್ರಾರ್ಥಿಗಳಿಗೆ ಉತ್ತರಿಸಲಾಗದೆ ಚಡಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಉಮ್ರಾ ಯಾತ್ರೆಗೆ 80-85 ಸಾವಿರ ರೂ. ಪಡೆದು ಏಜೆನ್ಸಿಯವರು ಉಮ್ರಾ ಯಾತ್ರೆ ಕಲ್ಪಿಸುತ್ತಿದ್ದು ಅಶ್ರಫ್ ಸಖಾಫಿ ಪರ್ಪುಂಜ ಎಂಬ ವ್ಯಕ್ತಿಯು ಕಡಿಮೆ ಪ್ಯಾಕೇಜ್‌ನಲ್ಲಿ ಉಮ್ರಾ ಯಾತ್ರೆಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದಾಗ ಅದನ್ನು ನಂಬಿದ ಅನೇಕರು ಮೋಸ ಹೋಗಿರುವುದಾಗಿ ತಿಳಿದು ಬಂದಿದ್ದು ಅಲ್ಲಿ ಊರಿಗೆ ಮರಳಲು ಟಿಕೆಟ್ ವ್ಯವಸ್ಥೆ ಮಾಡಿಲ್ಲ, ಊಟ, ತಿಂಡಿ, ವಸತಿಯ ವ್ಯವಸ್ಥೆಯೂ ಇಲ್ಲ ರೋಗಿಗಳು, ವೃದ್ಧರು, ಮಹಿಳೆಯರು, ಗರ್ಭಿಣಿಯರು, ಮಕ್ಕಳೂ ಕೂಡ ಇದ್ದು, ಎಲ್ಲರೂ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಮದೀನಾ ಮತ್ತು ದಮ್ಮಾಮ್‌ನಲ್ಲಿ ಪರದಾಡುವಂತಾಗಿದೆ ಎಂದು ಯಾತ್ರಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಅಶ್ರಫ್ ಸಖಾಫಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ, ಅಶ್ರಫ್ ಸಖಾಫಿ ಅವರದ್ದು ಎನ್ನಲಾದ ಉಡಾಫೆಯಿಂದ ಮಾತನಾಡಿರುವ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ. ಅಶ್ರಫ್ ಸಖಾಫಿ ವಿರುದ್ದ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here