ಬಿಲ್‌ನಲ್ಲಿ ಕೈ ಚಳಕ ತೋರಿಸಿ ಏಜೆನ್ಸಿಯಿಂದ ಹಲವು ವ್ಯಾಪಾರಿಗಳಿಗೆ ವಂಚನೆ

0

ಉಪ್ಪಿನಂಗಡಿ: ಅಂಗಡಿ ಮುಂಗಟ್ಟುಗಳಿಗೆ ಏಜಿನ್ಸಿಯಿಂದ ಸರಬರಾಜು ಮಾಡಲಾಗುವ ವಸ್ತುಗಳ ಕಂಪ್ಯೂಟರೀಕೃತ ಬಿಲ್ ಗಳಲ್ಲಿ ಕೈ ಚಳಕವನ್ನು ತೋರಿ ಹಲವು ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಉಪ್ಪಿನಂಗಡಿ ಪರಿಸರದಲ್ಲಿ ನಡೆದಿದ್ದು, ಇದೀಗ ಕಂಪ್ಯೂಟರೀಕೃತ ಬಿಲ್ ಗಳನ್ನು ಆದಿಯಿಂದ ಅಂತ್ಯದವರೆಗೆ ಪರಿಶೀಲನೆಗೊಳಪಡಿಸುವ ಅನಿವಾರ್ಯತೆಯನ್ನು ಹುಟ್ಟು ಹಾಕಿದೆ.


ಸಾಮಾನ್ಯವಾಗಿ ವಸ್ತುಗಳ ಧಾರಣೆ ಮತ್ತು ಅದಕ್ಕೆ ಸರಕಾರ ನಿಗದಿ ಪಡಿಸಿದ ಜಿಎಸ್‌ಟಿ ದರ ಆಧಾರಿತ ಜಿಎಸ್‌ಟಿ ಮೊತ್ತವನ್ನು ಒಳಗಾಗಿಸಿ ಬಿಲ್ ಗಳನ್ನು ನೀಡಲಾಗುತ್ತದೆ. ಬಹುತೇಕ ಅಂಗಡಿ ಮಾಲಕರು ತಾವು ಖರೀದಿಸಿದ ಸೊತ್ತಿನ ಮೂಲ ಬೆಲೆ ಹಾಗೂ ಅದಕ್ಕೆ ಸಂದಾಯವಾಗುವ ಜಿಎಸ್ಟಿಯನ್ನು ಖಚಿತಪಡಿಸಿಕೊಂಡು ಬಳಿಕ ಅದರ ಮಾರಾಟ ದರವನ್ನು ನಿಶ್ಚಯಿಸುತ್ತಾರೆ. ಈ ಕಾರಣಕ್ಕೆ ಎಲ್ಲರ ದೃಷ್ಠಿ ವಸ್ತುವಿನ ಮೂಲ ಬೆಲೆಯತ್ತ ಮತ್ತು ಅದಕ್ಕೊಪ್ಪುವ ಜಿಎಸ್ಟಿಯತ್ತ ಮಾತ್ರ ನಿಯಮಿತವಾಗಿ ಹರಿಯುತ್ತದೆ ವಿನಹ ಕೆಳಗೆ ನಮೂದಿಸಲಾದ ಒಟ್ಟು ಮೊತ್ತವನ್ನು ಹೆಚ್ಚಿನವರು ಕೂಡಿಸಲು ಹೋಗುವುದಿಲ್ಲ. ಏಕೆಂದರೆ ಕಂಪ್ಯೂಟರ್ ನಲ್ಲಿ ಕೂಡಿಸಲಾದ ಲೆಕ್ಕ ಸರಿಯಾಗಿರುತ್ತದೆ ಎಂಬ ನಂಬಿಕೆಯಿಂದ ಬಹುತೇಕ ಮಂದಿ ವ್ಯಾಪಾರಿಗಳು ಅಂತಿಮ ಮೊತ್ತದತ್ತ ಪರಿಶೀಲನೆ ನಡೆಸದೆ ಮೊತ್ತವನ್ನು ಪಾವತಿಸುವ ಪ್ರಕ್ರಿಯೆಗೆ ಒಳಪಡಿಸುತ್ತಾರೆ.


ವ್ಯಾಪಾರಿಗಳ ಈ ಮನೋಸ್ಥಿತಿಯನ್ನು ಅರ್ಥೈಸಿಕೊಂಡಿದ್ದ ಏಜೆನ್ಸಿಯಾತ , ಪ್ರತಿಯೊಂದು ಬಿಲ್ಲಿನಲ್ಲಿಯೂ ಎಲ್ಲಾ ವಸ್ತುಗಳ ದರವನ್ನು ಮತ್ತು ಅದರ ಜಿಎಸ್ಟಿಯನ್ನು ಸರಿಯಾಗಿಯೇ ನಮೂದಿಸಿ ಕೊನೆಗೆ ಎಲ್ಲಾ ಮೊತ್ತವನ್ನು ಕೂಡಿಸುವಾಗ ತನ್ನ ಕೈ ಚಳಕ ತೋರಿ ಟೋಟಲ್ ಲೆಕ್ಕವನ್ನು ತಪ್ಪಿಸಿ ಅದಕ್ಕೆ ಎರಡು ಮೂರು ಸಾವಿರ ಜಾಸ್ತಿ ಕೂಡಿಸಿ ಅಂತಿಮ ಮೊತ್ತವನ್ನು ನೀಡುತ್ತಿದ್ದ. ಆತನ ನಿರೀಕ್ಷೆಯಂತೆ ವ್ಯಾಪಾರಿಗಳು ವಸ್ತುವಿನ ಧಾರಣೆಯನ್ನು ಮಾತ್ರ ಪರಿಶೀಲಿಸಿ ಅಂತಿಮ ಮೊತ್ತವನ್ನು ಆತನಿಗೆ ನಿರಾಯಾಸವಾಗಿ ನೀಡುತ್ತಿದ್ದರು. ಹೀಗೆಯೇ ಒಬ್ಬೊಬ್ಬ ವ್ಯಾಪಾರಿಯಿಂದ ಲಕ್ಷಕ್ಕೂ ಅಧಿಕ ಮೊತ್ತವನ್ನು ಇವ ಲಪಟಾಯಿಸಿದ್ದ.


ವಂಚನೆ ಬಯಲಾದ ಬಗೆ:
ಅಂಗಡಿಯೊಂದರ ಸಿಬ್ಬಂದಿಯೋರ್ವರು ತಮಗೆ ಸಿಕ್ಕ ಬಿಡುವಿನ ವೇಳೆ ಬಿಲ್ ಪರಿಶೀಲಿಸಿದಾಗ ಈ ಹೆಚ್ಚುವರಿ ಮೊತ್ತ ಬಿಲ್ಲಿನಲ್ಲಿ ನಿಗೂಢವಾಗಿ ಸೇರಿಕೊಂಡಿರುವುದನ್ನು ಪತ್ತೆ ಹಚ್ಚಿದ್ದರು. ಆದರೆ ಅಂಗಡಿ ಮಾಲಕರಿಗೆ ಏಜೆನ್ಸಿಯ ಮೇಲಿದ್ದ ನಂಬಿಕೆ ಮತ್ತು ಕಂಪ್ಯೂಟರ್ ಬಿಲ್ ನಲ್ಲಿ ವಂಚನೆ ಮಾಡಲಾಗದೆಂಬ ಭಾವನೆಯಿಂದ ಸಿಬ್ಬಂದಿಯ ಆರೋಪವನ್ನು ಕಡೆಗಣಿಸಿದ್ದರು. ಆದಾಗ್ಯೂ ತನ್ನಲ್ಲಿದ್ದ ಸಂದೇಹ ಬಗೆಹರಿಯದೆ, ಬಿಲ್ಲಿನ ಬಗ್ಗೆ ಉಳಿದ ವ್ಯಾಪಾರಿಗಳ ಗಮನ ಸೆಳೆದ ಈ ಸಿಬ್ಬಂದಿಯಿಂದಾಗಿ ಇಡೀ ವಂಚನಾ ಜಾಲ ಬಯಲಾಗಿದೆ. ಯಾವೆಲ್ಲಾ ವ್ಯಾಪಾರಿಗಳಿಗೆ ತಮಗಾದ ವಂಚನೆಯ ಅರಿವಾಗಿ ಏಜೆನ್ಸಿಯವನೊಡನೆ ಪ್ರಶ್ನಿಸಲಾಗಿದೆಯೋ ಅವರೆಲ್ಲರಿಗೂ ಬಿಲ್ ಮೂಲಕ ಕಬಳಿಸಿದ ಹೆಚ್ಚುವರಿ ಮೊತ್ತವನ್ನು ಮರು ಪಾವತಿಸಲಾಗಿದೆ. ಹಾಗೂ ಪ್ರಕರಣದ ಬಗ್ಗೆ ಯಾವುದೇ ದೂರು ಸಲ್ಲಿಸಬಾರದೆಂದೂ ಯಾರಿಗೂ ತಿಳಿಸಬಾರದೆಂದೂ ವಿನಂತಿಸಲಾಗಿದೆ. ಯಾರಿಗೆಲ್ಲಾ ತಮಗಾದ ವಂಚನೆ ಇನ್ನೂ ಅರಿವಿಗೆ ಬಂದಿಲ್ಲವೋ ಅವರೆಲ್ಲರಿಗೂ ಇದೇ ರೀತಿಯ ವಂಚನೆ ಮುಂದುವೆರೆಯುತ್ತಿರಬಹುದೆಂಬ ಶಂಕೆ ಮೂಡಿದೆ.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವ್ಯಾಪಾರಿಯೋರ್ವರು ಈ ಕೃತ್ಯವನ್ನು ಮಾಧ್ಯಮದ ಗಮನಕ್ಕೆ ತಂದಿದ್ದು, ಬಹು ಆಯಾಮವನ್ನು ಪಡೆದಿರುವ ಈ ವಂಚನಾ ಜಾಲದಲ್ಲಿ ಬಡಪಾಯಿ ವ್ಯಾಪಾರಿಗಳು ತಮಗರಿವಿಲ್ಲದೆಯೇ ವಂಚನಾ ಕೃತ್ಯಕ್ಕೆ ಸಿಲುಕಬಾರದು. ಕಂಪ್ಯೂಟರ್ ಬಿಲ್ ನಲ್ಲಿಯೂ ಕೈ ಚಳಕ ತೋರಿಸಲಾಗುತ್ತದೆ ಎಂಬ ಸತ್ಯವನ್ನು ಅರಿತು ತಾವು ಖರೀದಿಸಿದ ವಸ್ತುಗಳ ಬಿಲ್ ಅನ್ನು ಅಮೂಲಾಗ್ರ ಪರಿಶೀಲನೆಗೆ ಒಳಪಡಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಒಟ್ಟಾರೆ ನಂಬಿಕೆಯನ್ನೇ ದುರುಪಯೋಗಪಡಿಸುವ ಇಂದಿನ ಯುಗದಲ್ಲಿ ಯಾವುದೇ ಬಿಲ್ ಅನ್ನು ಅಮೂಲಾಗ್ರ ಪರಿಶೀಲನೆಗೆ ಒಳಪಡಿಸುವ ಅನಿವಾರ್ಯತೆ ಮೂಡಿಬಂದಿದೆ.

LEAVE A REPLY

Please enter your comment!
Please enter your name here