ವಿಟ್ಲ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ಸವಾರ ಮೃತಪಟ್ಟ ಘಟನೆ ಮಾಣಿ ಬಳಿಯ ಪೇರಮೊಗರು ಸತ್ತಿಕಲ್ ಎಂಬಲ್ಲಿ ನಡೆದಿದೆ.
ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ರವರ ಪುತ್ರ ಪೈಂಟರ್ ಕೆಲಸ ಮಾಡುತ್ತಿದ್ದ ಉಸ್ಮಾನ್ (24 ವ.) ಮೃತ ಯುವಕ.
ಉಸ್ಮಾನ್ ರವರು ಪೇರಮೊಗರು ಸಮೀಪದ ಸತ್ತಿಕಲ್ ಎಂಬಲ್ಲಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಅಂಗಡಿಯಿಂದ ಸಾಮಾನು ತರಲು ತೆರಳಿದ್ದ ಸಹಸವಾರನನ್ನು ಕಾಯುತ್ತಾ ನಿಂತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಉಸ್ಮಾನ್ ರವರಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಉಸ್ಮಾನ್ ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.