ಜ.22 ರಿಂದ ರಣಮಂಗಲ ಜಾತ್ರೋತ್ಸವ
ಜ.26 ರಿಂದ ಶ್ರೀ ದೈವಗಳ ವರ್ಷಾವಧಿ ಉತ್ಸವ
ಪಾಣಾಜೆ: ಇಲ್ಲಿನ ಆರ್ಲಪದವು ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.19 ಮತ್ತು 20 ರಂದು ನಡೆಯಲಿದೆ.
ಜ.19ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆ, ಉಗ್ರಾಣ ತುಂಬಿಸುವುದು, ಭಜನಾ ಕಾರ್ಯಕ್ರಮ, ರಣಮಂಗಲ ಸಭಾಭವನ ಉದ್ಘಾಟನೆ ನಡೆಯಲಿದೆ. ಬಳಿಕ ವೇದಿಕೆ ಉದ್ಘಾಟನೆ ನಡೆಯಲಿದೆ. ನಂತರ ಕು. ಶರಧಿ ಕಡಮಾಜೆಯವರಿಂದ ಭರತನಾಟ್ಯ ಪುಷ್ಪಾಂಜಲಿ, ಅನ್ನಸಂತರ್ಪಣೆಯಾಗಿ ಅಪರಾಹ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ʻಕರ್ಣಪರ್ವʼ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಸಂಜೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ ನಡೆದು ವೈದಿಕ ಕ್ರಿಯೆಗಳು ನಡೆಯಲಿವೆ. ವೇದಿಕೆಯಲ್ಲಿ ಸುಬೋಧ ಪ್ರೌಢಶಾಲೆ ಪಾಣಜೆ, ಸ.ಉ.ಹಿ.ಪ್ರಾ. ಶಾಲೆ ಪಾಣಾಜೆ, ಸ.ಉ.ಹಿ.ಪ್ರಾ.ಶಾಲೆ ಒಡ್ಯ ಹಾಗೂ ಸ.ಹಿ.ಪ್ರಾ.ಶಾಲೆ ಸೂರಂಬೈಲು ವಿದ್ಯಾರ್ಥಿಗಳಿಂದ ಚಿಣ್ಣರ ಉತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆದು ರಾತ್ರಿ ಅನ್ನಸಂತರ್ಪಣೆ ಜರಗಿ ಬಳಿಕ ಲಕುಮಿ ತಂಡದ ಕುಸಾಲ್ಡ ಕಲಾವಿದರಿಂದ ʻಒರಿಯಾಂಡಲಾ ಸರಿ ಬೋಡುʼ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಜ.20ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು. ಬೆಳಿಗ್ಗೆ 7.28 ರಿಂದ 8.28ರ ಮಕರ ಲಗ್ನ ಸುಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆ, ಧಾರ್ಮಿಕ ಸಭಾ ಕಾರ್ಯಕ್ರಮ, ಪಲ್ಲಪೂಜೆ ನಡೆದು ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ 6.30 ಕ್ಕೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ʻಶ್ರೀ ದೇವಿ ಮಹಾತ್ಮೆʼ ಯಕ್ಷಗಾನ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.
ಜ.22 ರಿಂದ ವರ್ಷಾವಧಿ ಉತ್ಸವ
ಜ. 22 ರಂದು ರಣಮಂಗಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾರ್ತಿಕ ಪೂಜೆ, ಅತ್ತಾಳ ಪೂಜೆ ನಡೆಯಲಿದೆ. ಜ.23 ರಂದು ತುಲಾಭಾರ ಸೇವೆ, ಬಲಿ ಉತ್ಸವ, ಸಮಾರಾಧನೆ ನಡೆದು ರಾತ್ರಿ ಬಲಿ ಉತ್ಸವ, ಕಟ್ಟೆಪೂಜೆ ನಡೆಯಲಿದೆ. ಜ.24ರಂದು ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ದೇವರಿಗೆ ರಂಗಪೂಜೆ ನಡೆಯಲಿದೆ.
ರಾತ್ರಿ ದೈವಗಳ ಕಿರುವಾಳು ಭಂಡಾರ ಆರ್ಲಪದವು ದೈವಸ್ಥಾನಕ್ಕೆ ಬಂದು ಧ್ವಜಾರೋಹಣ ನಡೆಯಲಿದೆ. ಜ. 26ರಂದು ಬೆಳಿಗ್ಗೆ ಕಿನ್ನಿಮಾಣಿ ದೈವದ ನೇಮ, ಜ.27 ರಂದು ಪೂಮಾಣಿ ದೈವದ ನೇಮ ಹಾಗೂ ಜ. 28ರಂದು ಮಲರಾಯ ದೈವದ ನೇಮ ನಡೆದು, ಪಿಲಿಭೂತ ದೈವದ ನೇಮ ಜರಗಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ತಿಳಿಸಿದ್ದಾರೆ.