
ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರತೀಕ್ಷಾ ಶೆಣೈ ಅವರು ರಾಜ್ಯಮಟ್ಟದ ಈಜು ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ವತಿಯಿಂದ ಮಂಗಳೂರಿನ ಎಮ್ಮೆಕೆರೆ ಈಜುಕೊಳದಲ್ಲಿ ಜನವರಿ 21 ಹಾಗೂ 22ರಂದು ನಡೆದ ’ಕರ್ನಾಟಕ ಕ್ರೀಡಾಕೂಟ- 2025’ರಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಪ್ರತೀಕ್ಷಾ ಶೆಣೈ ಅವರು ಈ ಕ್ರೀಡಾಕೂಟದಲ್ಲಿ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್, 4×100 ಮೀಟರ್ ಮಿಡ್ಲೆ ರಿಲೇ ಹಾಗೂ 4×200 ಫ್ರೀಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಅಂತೆಯೇ 50 ಮೀಟರ್ ಫ್ರೀ ಸ್ಟೈಲ್, 50 ಮೀಟರ್ ಬ್ರೆಸ್ಟ್ ಸ್ಟ್ರೋಕ್, 4×100 ಫ್ರೀಸ್ಟೈಲ್ ರಿಲೇ ಇವುಗಳಲ್ಲಿ ದ್ವಿತೀಯ ಸ್ಥಾನ ಪಡೆದು ಮೂರು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಅಲ್ಲದೆ, 50 ಮೀಟರ್ ಬ್ಯಾಕ್ ಸ್ಟ್ರೋಕ್, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತೆಯಾಗಿ ಸಂಸ್ಥೆಗೆ ಹಾಗೂ ಪುತ್ತೂರಿಗೆ ಕೀರ್ತಿ ತಂದಿರುತ್ತಾರೆ. ಪ್ರತೀಕ್ಷಾ ಶೆಣೈ ಅವರು ಪುತ್ತೂರಿನ ಎಂ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮೀ ಎನ್ ಶೆಣೈ ದಂಪತಿಯ ಸುಪುತ್ರಿ.