ಪುತ್ತೂರು: ತಾಲೂಕು ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ನೇತೃತ್ವದಲ್ಲಿ ತಾಲೂಕಿನಾದ್ಯಂತ ನಡೆಯುತ್ತಿರುವ ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ 5 ನೇ ದಿನ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಜ.26 ರಂದು ನಡೆಯಿತು.
ನೋಡಲ್ ಅಧಿಕಾರಿ ತಾಪಂ ಇಒ ನವೀನ್ ಭಂಡಾರಿಯವರ ಮಾರ್ಗದರ್ಶನದಲ್ಲಿ ಕುಂಬ್ರದಿಂದ ಬೊಳ್ಳಾಡಿ ತನಕ ಹಾಗೇ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪರಿಸರದಲ್ಲಿ ನಡೆದ ಸ್ವಚ್ಚತಾ ಶ್ರಮದಾನದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಗ್ರಾಪಂ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಗ್ರಾಮಸ್ಥರು ಭಾಗವಹಿಸಿದರು.
ಕುಂಬ್ರದಿಂದ ಬೊಳ್ಳಾಡಿ ತನಕ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸುತ್ತಮುತ್ತ ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್, ಕಸ, ಕಡ್ಡಿಗಳನ್ನು ಹೆಕ್ಕಿ ಪೇಟೆಯನ್ನು ಸಂಪೂರ್ಣ ಸ್ವಚ್ಛತೆ ಮಾಡಲಾಯಿತು. ಸಂಗ್ರಹವಾದ ಕಸವನ್ನು ಗ್ರಾಪಂ ಸ್ವಚ್ಚತಾ ವಾಹಿನಿ ವಾಹನದಲ್ಲಿ ಘನತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಲಾಯಿತು. ಸ್ವಚ್ಚತಾ ಶ್ರಮದಾನದಲ್ಲಿ ಅನುಗ್ರಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕೆಪಿಎಸ್ ಶಾಲಾ ಮುಖ್ಯಗುರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ಪಂಚಾಯತ್ನ ಸದಸ್ಯರುಗಳು, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಭಾಗವಹಿಸಿದ್ದರು. ಉದ್ಯಮಿ ಆಶಿಕ್ ಎ.ಆರ್.ರವರು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕೆಲಸವು ನಡೆಯಿತು.
5 ನೇ ದಿನದ ಸ್ವಚ್ಚತೆ
ಜ.31 ರ ತನಕ ನಡೆಯಲಿರುವ ಬೃಹತ್ ಸ್ವಚ್ಛತಾ ಶ್ರಮದಾನದ 5 ದಿನದ ಸ್ವಚ್ಚತೆಯಲ್ಲಿ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ನಡೆಯಿತು. ಕೈಗೆ ಗ್ಲೌಸ್ ತೊಟ್ಟು ವಿದ್ಯಾರ್ಥಿಗಳು ಕೂಡ ಹುಮ್ಮಸ್ಸಿನಲ್ಲಿ ಸ್ವಚ್ಛತೆಯಲ್ಲಿ ತೊಡಗಿಕೊಂಡರು.
“ ಒಳಮೊಗ್ರು ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿಸುವ ಮೂಲಕ ಜನರಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಈ ಬೃಹತ್ ಸ್ವಚ್ಚತಾ ಶ್ರಮದಾನದ 5 ದಿನವೂ ಪ್ರತಿಯೊಬ್ಬರು ಉತ್ತಮ ಸ್ಪಂದನೆ ನೀಡಿದ್ದಾರೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ಹಾಗೇ ಶಾಲಾ ವಿದ್ಯಾರ್ಥಿಗಳಿಗೂ, ಉಪಹಾರದ ವ್ಯವಸ್ಥೆ ಮಾಡಿಕೊಟ್ಟವರಿಗೂ ಪಂಚಾಯತ್ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾ.ಪಂ