ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಫೆ.6ರ ಮಧ್ವನವಮಿ ದಿನ ಶ್ರೀ ಬ್ರಹ್ಮರಥೋತ್ಸವ ನಡೆಯಲಿದೆ.
ಬೆಳಗ್ಗೆ ದೇವರಿಗೆ ಮಹಾ ಪಂಚಾಮೃತಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅಪರಾಹ್ನ ರಥ ಶುದ್ಧಿ, ಯಜ್ಞಾರತಿ ನಡೆದು ಸಂಜೆ 5 ಕ್ಕೆ ದೇವರು ಪಲ್ಲಕ್ಕಿ ಉತ್ಸವದಲ್ಲಿ ಆಗಮಿಸಿ ಬ್ರಹ್ಮರಥಾರೋಹಣ ನಡೆದು ರಥೋತ್ಸವ ಜರಗಲಿದೆ. ರಾತ್ರಿ ದೇವಾಲಯದಲ್ಲಿ ಮಹಾ ಸಮಾರಾಧನೆ, ರಾತ್ರಿ ಉತ್ಸವ, ಏಕಾಂತ ಸೇವೆ ಉತ್ಸವಗಳು ನಡೆಯಲಿವೆ.
ಫೆ.07ರಂದು ಬೆಳಗ್ಗೆ 9.30ಕ್ಕೆ ಅವಭೃಥ ಅಭಿಷೇಕ, ಬಳಿಕ ಅವಭೃಥ ಉತ್ಸವ ಪೇಟೆ ಸವಾರಿ ನಡೆದು ದೇವರ ಅವಭೃಥ ನಡೆಯಲಿದೆ. ಬಳಿಕ ಹಗಲು ಉತ್ಸವ, ಪಲ್ಲಕ್ಕಿಯಲ್ಲಿ ದೇವರು ಅಪರಾಹ್ನ ದೇವಾಲಯಕ್ಕೆ ಮರಳಿದ ಬಳಿಕ ಧ್ವಜ ಅವರೋಹಣ, ಯಜ್ಞ ಮಂಟಪ ವಿಸರ್ಜನೆ, ಮಹಾಪೂಜೆ, ರಾತ್ರಿ ಅನ್ನಸಂತರ್ಪಣೆ, ರಾತ್ರಿ ದೇವಾಲಯದ ಒಳಾಂಗಣದಲ್ಲಿ ಉತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.