ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸ-5ನೇ ದಿನದ ಸಂಭ್ರಮ

0

ನೆಲ್ಯಾಡಿ: ಜೀರ್ಣೋದ್ದಾರಗೊಂಡಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ 5ನೇ ದಿನವಾದ ಫೆ.9ರಂದು ದೇವಸ್ಥಾನದಲ್ಲಿ ವಿವಿಧ ವೈದಿಕ, ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಸಂಜೆ ಗೌರಮ್ಮ ಶಬರಾಯ ಸಭಾಭವನದ ಎಲಿಕ್ಕಳ ಕೃಷ್ಣ ಶಬರಾಯ ವೇದಿಕೆಯಲ್ಲಿ ನಡೆದ ಧಾಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ತಿರ್ಲೆಯಲ್ಲಿ ಧರ್ಮದ ತಿರುಳು, ಸಂಸ್ಕೃತಿಯ ಪೊರ್ಲು ಅನಾವರಣಗೊಂಡಿದೆ. ಊರಿನ ದೇವಾಲಯದ ಜೀರ್ಣೋದ್ದಾರ ಆಗದೇ ಇದ್ದಲ್ಲಿ ಊರಿನವರಿಗೆ ತೊಂದರೆ ಆಗಲಿದೆ. ಭಾರತ ವಿಶ್ವಕ್ಕೆ ಹೃದಯವಿದ್ದಂತೆ. ಭಾರತದ ಆಧ್ಯಾತ್ಮಿಕತೆಯನ್ನು ವಿಶ್ವವೇ ಕೊಂಡಾಡಿದೆ ಎಂದು ನುಡಿದರು. ಧಾರ್ಮಿಕ ಶಿಕ್ಷಣ ಕೇಂದ್ರಗಳ ಮೂಲಕ ಧಾರ್ಮಿಕ ಶಿಕ್ಷಣ ಸಿಗಬೇಕು. ಈಶ ಪ್ರೇಮದ ಜೊತೆಗೆ ದೇಶ ಕಟ್ಟುವ ಕೆಲಸವೂ ಆಗಬೇಕು. ಮಕ್ಕಳು, ಯುವಜನತೆ, ತಾಯಂದಿರು ಧಾರ್ಮಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ಹೇಳಿದರು.


ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಬ್ರಹ್ಮಕಲಶೋತ್ಸವದ ಮೂಲಕ ತಿರ್ಲೆಯಲ್ಲಿ ದೇವಲೋಕವೇ ಸೃಷ್ಟಿಯಾಗಿದೆ. ಭಕ್ತಿ, ಶ್ರದ್ಧೆ, ನಂಬಿಕೆ, ವಿಶ್ವಾಸದೊಂದಿಗೆ ನನ್ನದು, ನಮ್ಮ ದೇವಸ್ಥಾನ ಎಂಬ ಭಾವನೆ ಭಕ್ತರಲ್ಲಿ ಕಾಣಿಸಿಕೊಂಡಿದೆ ಎಂದು ನುಡಿದರು. ನಶಿಸಿ ಹೋಗಿರುವ ಅನೇಕ ದೇವಸ್ಥಾನ, ಮಠಗಳು ಪುನವೀಕರಣಗೊಳ್ಳುವ ಮೂಲಕ ಧರ್ಮಜಾಗೃತಿಯಾಗುತ್ತಿದೆ. ದೇವಸ್ಥಾನಗಳು ಧರ್ಮಜಾಗೃತಿಯ ಸಂಕೇತವಾಗಿದೆ. ಮನುಷ್ಯನ ಬದುಕೇ ಅನ್ವೇಷಣೆಯಾಗಿದೆ. ದೇವಸ್ಥಾನಗಳ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು ಹೇಳಿದರು.


ಅತಿಥಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆದ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಜಂಜಾಟದ ಜೀವನಕ್ಕೆ ದೇವತಾರಾಧನೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಪ್ರೀತಿ, ವಿಶ್ವಾಸ, ಸಂಸ್ಕಾರ, ಸಂಸ್ಕೃತಿ ಸಮಾಜದ ಆಧಾರಸ್ತಂಭಗಳು. ಕುಂಭ ಮೇಳದ ಮೂಲಕ ಭಾರತ ಮತ್ತೆ ಮುಂಚೂಣಿಗೆ ಬಂದಿದೆ. ೪೦ ಕೋಟಿ ಜನರು ಒಟ್ಟಿಗೆ ಸೇರುವಂತೆ ಆಗಿದೆ. ಪುಣ್ಯ ಸ್ನಾನ ಮಾಡುವಂತೆ ಮಾಡಿದೆ ಎಂದರು.


ಇನ್ನೋರ್ವ ಅತಿಥಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರು ಮಾತನಾಡಿ, ತುಳುನಾಡಿನ ಸಾಕಷ್ಟು ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಇದರಿಂದ ಸಮಾಜದ ಅನಿಷ್ಟಗಳು ದೂರವಾಗಿ ಸುಭೀಕ್ಷೆ ನೆಲೆಸಲಿದೆ. ದೇವರ ಪ್ರತಿಷ್ಠೆ, ಬ್ರಹ್ಮಕಲಶದ ಮೂಲಕ ಭಕ್ತರ ಆತ್ಮದ ಬ್ರಹ್ಮಕಲಶವೂ ಆಗಬೇಕು. ಉತ್ತಮ ಸಮಾಜ ನಿರ್ಮಾಣ ಹೊಣೆಗಾರಿಯೂ ನಮ್ಮ ಮೇಲಿದೆ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು ಎಂದರು.


ಉಳ್ಳಾಲ ಶ್ರೀ ಅಂಬಾವನ ಧರ್ಮಶಿಕ್ಷಣ ಕೇಂದ್ರದ ಪ್ರಧಾನ ಸಂಚಾಲಕ ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಿದರು. ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ, ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್.,ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಬೆಂಗಳೂರಿನ ಉದ್ಯಮಿ ಅಜಿತ್ ರೈ ಮನವಳಿಕೆ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಮೃದಂಗ ವಿದ್ವಾನ್ ಕೆ.ವಿ.ಕಾರಂತ್ ಕಾಂಚನ, ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್‌ನ ದಂತ ವೈದ್ಯರಾದ ಡಾ.ರಾಜಾರಾಮ್ ಕೆ.ಬಿ., ಹೇಮಾವತಿ ಸುಬ್ಬರಾವ್ ಕಾಂಚನ, ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ, ಕಾಂಚನ ಶಾಲಾ ನಿವೃತ್ತ ಮುಖ್ಯಶಿಕ್ಷಕ ಸೂರ್ಯಪ್ರಕಾಶ್ ಉಡುಪ, ಉದ್ಯಮಿ ಬಾಲಕೃಷ್ಣ ನೈಮಿಷ ಕೊಕ್ಕಡ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ನೋಣಯ್ಯ ಗೌಡ ಡೆಬ್ಬೇಲಿ, ಹೇಮಲತಾ ಮುರಿಯೇಲು, ಜಾನಕಿ ನೆಕ್ಕರೆ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ್ ಕಾಂಚನ, ಬ್ರಹ್ಮಕಲಶೋತ್ಸವ ಸಮಿತಿಯ ಜೊತೆ ಕಾರ್ಯದರ್ಶಿ ಸುರೇಶ್ ತಿರ್ಲೆ, ಪ್ರಚಾರ ಸಮಿತಿ ಸಂಚಾಲಕ ರಾಜಶೇಖರ್ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರವೀಣ್ ಭಂಡಾರಿ ಪುರ-ಜಯಲಕ್ಷ್ಮೀ ದಂಪತಿ ಹಾಗೂ ನೋಣಯ್ಯ ಗೌಡ ಡೆಬ್ಬೇಲಿ-ಇಂದಿರಾ ದಂಪತಿ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್‌ಕುಮಾರ್ ಪಾಲೇರಿ, ವಿವಿಧ ಸಮಿತಿ ಸದಸ್ಯರಾದ ಶ್ರೀಧರ ಗೌಡ ತಿರ್ಲೆ, ಆನಂದ ತೋಟ, ಅರುಣ್‌ರಾಜ್ ಸರಳಾಯ, ಸೀತಾರಾಮ ಮಡಿವಾಳ ಅಗರ್ತ, ಲೋಕೇಶ್ ತಿರ್ಲೆ, ಹೇಮಚಂದ್ರ, ಯಶೋಧ ಡೆಬ್ಬೇಲಿ, ಲಿತಿನ್ ಪಾಂಡಿಬೆಟ್ಟು, ಡೀಕಯ್ಯ ತಿರ್ಲೆ, ರಾಜೀವಿ ತಿರ್ಲೆ, ಭಾಗೀರಥಿ ತಿರ್ಲೆ, ಹರಿಪ್ರಸಾದ್ ಪಾತೃಮಾಡಿ, ವಿಠಲ ಗೌರ‍್ಲೆ, ಕುಮಾರನ್ ಪಾಂಡಿಬೆಟ್ಟು, ಹೇಮಲತಾ ತಿರ್ಲೆ, ಸಂದೀಪ್ ಏಡ್ಮೆ, ಪ್ರಶಾಂತ್ ರೈ ಅರಂತಬೈಲ ಅವರು ಅತಿಥಿಗಳಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.
ಸಭಾನಿರ್ವಹಣಾ ಸಮಿತಿ ಸಹ ಸಂಚಾಲಕ ಬಾಲಚಂದ್ರ ರೈ ಪಾತೃಮಾಡಿ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಲಾವಣ್ಯ ಸಂದೇಶ್ ವಂದಿಸಿದರು. ಬಲ್ಮಠ ಸರಕಾರಿ ಪ.ಪೂ.ಕಾಲೇಜಿನ ಅಧ್ಯಾಪಕ ಮುರಳಿಕೃಷ್ಣ ಆಚಾರ್ ನಿರೂಪಿಸಿದರು. ವೀಣಾರಾಮಕೃಷ್ಣ ಭಟ್ ಆಂಜರ, ಉಷಾಪಾರ್ವತಿ, ವೈಶಾಲ್ಯ, ಶುಭಲಕ್ಷ್ಮೀ ಪ್ರಾರ್ಥಿಸಿದರು.


ವೈದಿಕ ಕಾರ್ಯಕ್ರಮ:
ಬೆಳಿಗ್ಗೆ ಉಷಾ:ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಸಂಹಾರ ತತ್ತ್ವಹೋಮ, ತತ್ತ್ವ ಕಲಶ ಪೂಜೆ, ಮಹಾಪೂಜೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿ ಪೂಜೆ, ಅಗ್ನಿ ಜನನ, ಶಿರಸ್ಥಾನ, ತತ್ವಹೋಮ, ನಿದ್ರಾಕಶಲ ಪೂಜೆ, ಶಯ್ಯಾಪೂಜೆ, ವಿದ್ಯೇಶ್ವರ ಕಲಶ ಪೂಜೆ, ವಿದ್ವತ್ ಪ್ರಾರ್ಥನೆ, ಸಂಹಾರ ತತ್ತ್ವಕಲಶಾಭಿಷೇಕ, ಧ್ಯಾನ ಸಂಕೋಚ ಕ್ರಿಯೆ, ಜೀವ ಕಲಶ ಪೂಜೆ, ಜೀವೋದ್ವಾಸನ ಕ್ರಿಯೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರೀ ಪೂಜೆ, ಅಗ್ನಿಜನನ ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ನಡೆಯಿತು. ಮಧ್ಯಾಹ್ನ ಜೀವಕಲಶ ಶಯ್ಯಾರೋಪಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಶುದ್ಧಿ ಕಲಶಾಭಿಷೇಕ, ಧ್ಯಾನಾಧಿವಾಸ, ಪೀಠಾಧಿವಾಸ, ಅಧಿವಾಸ ಹೋಮ, ಚಕ್ರಾಬ್ಧ ಮಂಡಲ ಪೂಜೆ, ಅಧಿವಾಸಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಭಜನೆ:
ಬೆಳಿಗ್ಗೆ ಕುಂತೂರು ಶ್ರೀ ಶಾರದಾ ಭಜನಾ ಮಂಡಳಿ, ಹಿರೇಬಂಡಾಡಿ ಉದಯಗಿರಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಸಂಜೆ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯ, ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಇಂದು ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ
ಫೆ.10ರಂದು ಬೆಳಿಗ್ಗೆ ಮಹಾಗಣಪತಿ ಹೋಮ ಹಾಗೂ ವಿವಿಧ ವೈದಿಕ ಕಾರ್ಯಕ್ರಮ ನಡೆದು 8.48ರಿಂದ 9.32ರ ಶುಭ ಲಗ್ನದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ, ಅಷ್ಟಬಂಧ ಕ್ರಿಯೆ, ಜೀವ ಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಶ್ರೀ ಕೊಣಾಲು ದೈವದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ,ತಂಬಿಲ ಸೇವೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಅರ್ಧ ಏಕಾಹ ಭಜನೆ ನಡೆಯಲಿದೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 7.30ಕ್ಕೆ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ. ರಾತ್ರಿ ೯ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಇವರಿಂದ ಸಾಕೇತ ಸಾಮ್ರಾಜ್ಞಿ ಯಕ್ಷಗಾನ ನಡೆಯಲಿದೆ.

ಇಂದು ಗೋಳಿತ್ತೊಟ್ಟಿನ ರಿಕ್ಷಾ ಚಾಲಕರಿಂದ ಉಚಿತ ಸೇವೆ
ಶ್ರೀ ಮಹಾವಿಷ್ಣುಮೂರ್ತಿ ದೇವರ ಹಾಗೂ ಶ್ರೀ ಕೊಣಾಲು ದೈವದ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಸೇವೆ ನೀಡಲು ಗೋಳಿತ್ತೊಟ್ಟಿನ ರಿಕ್ಷಾ ಚಾಲಕರು ಮುಂದಾಗಿದ್ದಾರೆ. ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆ ತನಕ ಗೋಳಿತ್ತೊಟ್ಟು ಜಂಕ್ಷನ್‌ನಿಂದ ತಿರ್ಲೆ ದೇವಸ್ಥಾನಕ್ಕೆ, ತಿರ್ಲೆ ದೇವಸ್ಥಾನದಿಂದ ಗೋಳಿತ್ತೊಟ್ಟು ಜಂಕ್ಷನ್ ತನಕ ಹಾಗೂ ಚಿಲುಮೆ ಬಸ್‌ನಿಲ್ದಾಣದಿಂದ ತಿರ್ಲೆ ದೇವಸ್ಥಾನಕ್ಕೆ, ತಿರ್ಲೆ ದೇವಸ್ಥಾನದಿಂದ ಚಿಲುಮೆ ಬಸ್‌ನಿಲ್ದಾಣದ ತನಕ ಉಚಿತ ಸೇವೆ ಇರಲಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಈ ಸೌಕರ್ಯ ಪಡೆದುಕೊಳ್ಳುವಂತೆ ರಿಕ್ಷಾ ಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here