ಶಾಲೆ ಪರಿಸರದಲ್ಲಿ ತೊಂದರೆ ಕೊಡುವ ಹೋರಿಯನ್ನು ಬಂಧಿಸಿ-ಸೂರಂಬೈಲು ಶಾಲೆ ಮಕ್ಕಳ ಆಗ್ರಹ
ನಿಡ್ಪಳ್ಳಿ: ಸೂರಂಬೈಲು ಪರಿಸರದಲ್ಲಿ ಪ್ರತಿ ನಿತ್ಯ 2-3 ಹೋರಿಗಳು ಅನಾಥವಾಗಿ ತಿರುಗುತ್ತಿದ್ದು ನಮಗೆ ತೊಂದರೆ ಕೊಡುತ್ತಿದೆ. ಇದರಿಂದ ಭಯದ ವಾತಾವರಣ ಇರುವುದರಿಂದ ಶಾಲೆಗೆ ಬರಲು ಭಯ ಆಗುತ್ತಿದೆ.ಆ ಹೋರಿಗಳನ್ನು ಕಟ್ಟಿ ಹಾಕಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ ಘಟನೆ ಪಾಣಾಜೆ ಮಕ್ಕಳ ಗ್ರಾಮ ಸಭೆಯಲ್ಲಿ ನಡೆದಿದೆ.
ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳ ಗ್ರಾಮ ಸಭೆ ಫೆ.10 ರಂದು ಸೂರಂಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸೂರಂಬೈಲು ಶಾಲಾ ವಿದ್ಯಾರ್ಥಿ ಚೇತನ್ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಸಮಸ್ಯೆ, ಮಕ್ಕಳಿಗೆ ಸಿಗುವ ಸೌಲಭ್ಯ, ಸಲಕರಣೆಗಳ ಬಗ್ಗೆ ಚರ್ಚಿಸಿ ಮಕ್ಕಳ ಅಭಿವೃದ್ಧಿಗೆ ಆಡಳಿತಾತ್ಮಕವಾಗಿ ಪೂರಕ ಸ್ಪಂದನೆ ಸಿಗಲಿ ಎಂದು ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ಮಾತನಾಡಿ ಈಗಾಗಲೇ ಈ ಶಾಲೆಗೆ ಶಾಸಕ ಅಶೋಕ್ ಕುಮಾರ್ ರೈ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪಂಚಾಯತ್ ಆಡಳಿತ ಮಂಡಳಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗ್ರಾಮದ ಅಭಿವೃದ್ಧಿಗೆ ಶಾಸಕರು ರೂ. 6 ಕೋಟಿ ಅನುದಾನ ಬಿಡುಗಡೆ ಗೊಳಿಸಿದ್ದಾರೆ. ಮಕ್ಕಳ ಗ್ರಾಮ ಸಭೆಯಲ್ಲಿ ಬಂದ ಬೇಡಿಕೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಂಯೋಜಕಿ ನಿಶಾ ಪ್ರಿಯ ಮಾತನಾಡಿ ಮಕ್ಕಳ ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಬೆಟ್ಟಂಪಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು.ಕಾಯಿದೆಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಶಾಲೆಯಲ್ಲಿ ಇರುವ ನಿಯಮಗಳನ್ನು ಪಾಲಿಸಿಕೊಂಡು ತಮ್ಮ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸ ಬೇಕು. ಮಕ್ಕಳು ಕೆಟ್ಟ ವಿಚಾರದಲ್ಲಿ ಹೆಚ್ಚು ಗಮನ ಹರಿಸದೆ ಉತ್ತಮ ರೀತಿಯಲ್ಲಿ ಬದುಕಲು ಬೇಕಾದ ಎಲ್ಲಾ ಪ್ರಯತ್ನ ಪಡುವಂತೆ ಹೇಳಿದರು.
ಪಂಚಾಯತ್ ಸದಸ್ಯ ಅಬೂಬಕ್ಕರ್ ರಸ ಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು.ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪಾಧ್ಯಕ್ಷೆ ಜಯಶ್ರೀ.ಡಿ, ಪಂಚಾಯತ್ ಸದಸ್ಯರಾದ ಮೋಹನ್, ಸುಲೋಚನಾ, ಅಬೂಬಕ್ಕರ್, ವಿಮಲಾ ,ಪಿಡಿಒ ಆಶಾ, ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್,ಶಾಲಾ ಮುಖ್ಯ ಶಿಕ್ಷಕಿ ಉರ್ಮಿಳಾ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ವಿದ್ಯಾರ್ಥಿನಿ ಧನ್ಯಶ್ರೀ ಸ್ವಾಗತಿಸಿ, ವಿದ್ಯಾರ್ಥಿ ಚಿಂತನ್ ವಂದಿಸಿದರು.ವಿದ್ಯಾರ್ಥಿನಿ ವೃಂದಾ ಕಾರ್ಯಕ್ರಮ ನಿರೂಪಿಸಿದರು.ಪಂಚಾಯತ್ ಸಿಬ್ಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್, ರೂಪಾಶ್ರೀ ಸಹಕರಿಸಿದರು.
ಶಾಲೆಗಳಿಂದ ಬಂದ ಬೇಡಿಕೆಗಳು;
ಪಾಣಾಜೆ ಸರಕಾರಿ ಶಾಲೆಯ ಬೇಡಿಕೆ:
ಶಾಲಾ ಕೊಠಡಿ ನಿರ್ಮಾಣ, ಪ್ರಾಣಿಗಳು ಶಾಲೆಯ ಒಳಗೆ ಬಂದು ಜಗಲಿಯನ್ನು ಗಲೀಜು ಮಾಡುತ್ತವೆ ಅದರ ರಕ್ಷಣೆ.
ವಿವೇಕ ಶಾಲೆ ಪಾಣಾಜೆ
ವಿವೇಕ ಅಂಗ್ಲಮಾಧ್ಯಮ ಶಾಲೆಗೆ ಬರುವ ರಸ್ತೆ ಕಾಂಕ್ರೀಟ್ ರಸ್ತೆ ಮಾಡುವುದು.
ಸರಕಾರಿ ಶಾಲೆ ಸೂರಂಬೈಲು
ಕೊಳವೆಬಾವಿಗೆ ಪಂಪ್ ಹಾಕಿ ನೀರಿನ ವ್ಯವಸ್ಥೆ, ಶಾಲಾ ಆವರಣ ಗೋಡೆಯನ್ನು ಪೂರ್ಣಗೊಳಿಸುವುದು. ಆಟದ ಮೈದಾನ ವಿಸ್ತರಣೆ, ಆಟದ ಸಲಕರಣೆಗಳನ್ನು ನೀಡುವುದು.
ಶಿಕ್ಷಕರಿಗೆ ಪಾಠ ಜೊತೆ ಇಲಾಖೆ ಕೆಲಸ ಮಾಡುವುದು ಕಷ್ಟ ಸಾಧ್ಯ ಆದುದರಿಂದ ಕ್ಲರ್ಕ್ ನೇಮಕಗೊಳಿಸಬೇಕು..
ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ;
ಆಟದ ಮೈದಾನದಿಂದ ಶಾಲೆವರೆಗೆ ರಸ್ತೆ ಕಾಂಕ್ರೀಟ್ ವ್ಯವಸ್ಥೆ, ಕ್ರೀಡಾ ಸಾಮಾಗ್ರಿಗಳನ್ನು ಒದಗಿಸುವುದು, ಶಾಲೆಯ ಜಾಗ ಒತ್ತುವರಿ ಆಗುತ್ತಿರುವುದರಿಂದ ಆವರಣ ಗೋಡೆ ನಿರ್ಮಿಸಬೇಕು. ಮಳೆ ನೀರು ಇಂಗುವಿಕೆಗೆ ಇಂಗು ಗುಂಡಿ ನಿರ್ಮಿಸ ಬೇಕು. ಕಸದ ತೊಟ್ಟಿಯಿಂದ ದುರ್ವಾಸನೆ ಬರುತ್ತಿದ್ದು ಅದನ್ನು ತೆರವು ಗೊಳಿಸುವುದು. ಕಸದ ಚೀಲ ತುಂಬಿ ತುಳುಕುತ್ತಿದ್ದು ಅದನ್ನು ತೆರವು ಗೊಳಿಸಿ ಎಂದು ಆಗ್ರಹಿಸಿದರು.
ಸುಬೋಧ ಪ್ರೌಢ ಶಾಲೆ,ಪಾಣಾಜೆ
ಪಾರಿವಾಳದಿಂದ ಸಮಸ್ಯೆಯಾಗುತ್ತಿದ್ದು ಊಟ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಒಂದು ಪರಿಹಾರ ಒದಗಿಸುವುದು. ಗೇಮ್ಸ್ ರೂಮ್ ಬಾಗಿಲು ಕಿತ್ತು ಹೋಗಿದ್ದು ಸರಿಪಡಿಸಬೇಕು ಎಂದು ಮಕ್ಕಳು ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.