ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ

0

*ನಮ್ಮ ಕಾಂಪ್ಲೆಕ್ಸ್‌ನ ಬಳಿ ನಾನೇ ಸ್ವಾಗತ ಮಾಡಿದ್ದೆ – ಜಿ.ಎಲ್.ಬಲರಾಮ ಆಚಾರ್ಯ
*ವಾಜಪೇಯಿ ಅವರೊಂದಿಗೆ ಮಂಗಳೂರಿಗೆ ಕಾರಿನಲ್ಲಿ ಹೋಗಿದ್ದೆ – ಮುರಳಿಧರ ಶೆಟ್ಟಿ
*1991ರ ವಾಜಪೇಯಿ ಕಾರ್ಯಕ್ರಮಕ್ಕೆ ನಾನೇ ಅಧ್ಯಕ್ಷ – ಡಾ.ಎಂ.ಕೆ.ಪ್ರಸಾದ್

ಪುತ್ತೂರು: ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿಯಿಂದ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಾಜಪೇಯಿಯವರು ಪುತ್ತೂರಿನಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿದ ಮತ್ತು ವಾಜಪೇಯಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮನೆಗೆ ತೆರಳಿ ಮನೆ ಮಂದಿಯನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮ ನಡೆಯಿತು.


1991ರಲ್ಲಿ ಪುತ್ತೂರಿಗೆ ವಾಜಪೇಯಿ ಬಂದಾಗ ಅವರನ್ನು ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿ ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದ ಜಿ.ಎಲ್.ಬಲರಾಮ ಅಚಾರ್ಯ ಅವರನ್ನು ಅವರ ಕೊಂಬೆಟ್ಟು ನಿವಾಸದಲ್ಲಿ, 1981ರಲ್ಲಿ ವಾಜಪೇಯಿ ಅವರು ಪುತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಜೀವ ಶೆಟ್ಟಿಯವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ನೆನಪಿಗಾಗಿ ಮತ್ತು ಅವರ ಜೊತೆ ಮಂಗಳೂರಿಗೆ ಕಾರಿನಲ್ಲಿ ಜೊತೆಯಾಗಿ ಹೋದ ಸಂಜೀವ ಶೆಟ್ಟಿಯವರ ಹಿರಿಯ ಪುತ್ರ ಮುರಳಿಧರ ಶೆಟ್ಟಿಯವರನ್ನು ಹಾಗೂ ಪುತ್ತೂರಿನಲ್ಲಿ ನಡೆದ ವಾಜಪೇಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಎಂ.ಕೆ.ಪ್ರಸಾದ್ ಅವರನ್ನು ಅವರ ನಿವಾಸದಲ್ಲಿ ಫೆ. 18ರಂದು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.


ನಮ್ಮ ಕಾಂಪ್ಲೆಕ್ಸ್‌ನ ಬಳಿ ಕಾರ್ಯಕ್ರಮಕ್ಕೆ ನಾನೇ ಸ್ವಾಗತ ಮಾಡಿದ್ದೆ:
ಸನ್ಮಾನ ಸ್ವೀಕರಿಸಿದ ಸ್ವರ್ಣೋದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ಅವರು ಮಾತನಾಡಿ, ಪುತ್ತೂರಿನಲ್ಲಿ 1991ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾರ್ಯಕ್ರಮದ ವೇಳೆ ನಮ್ಮ ಕಾಂಪ್ಲೆಕ್ಸ್ ಬಳಿಯೇ ಅವರನ್ನು ನಾನು ಸ್ವಾಗತಿಸಿದ್ದೆ ಎಂದು ಹಿಂದಿನ ನೆನಪನ್ನು ಬಿಚ್ಚಿಟ್ಟರು.


ವಾಜಪೇಯಿ ಜೊತೆ ಮಂಗಳೂರಿಗೆ ಕಾರಿನಲ್ಲಿ ಹೋದೆ:
ಸನ್ಮಾನ ಸ್ವೀಕರಿಸಿದ ಮುರಳೀಧರ ಅವರು ಮಾತನಾಡಿ ವಾಜಪೇಯಿ ಅಜಾತ ಶತ್ರು ಯಾವುದೇ ರಾಜಕೀಯ ಪಕ್ಷಗಳಾಗಲಿ, ಯಾವುದೇ ಸಂಘಟನೆಗಳಾಗಲಿ ಅವರನ್ನು ವಿರೋಧಿಸಿಲ್ಲ. ವಾಜಪೇಯಿ ಅವರು ಕೂಡಾ ಯಾರನ್ನೂ ವಿರೋಧಿಸಿಲ್ಲ. ಅವರು ನಮ್ಮ ಮನೆಗೆ 1981ರಲ್ಲಿ ಬಂದಿರುವುದು ನಮ್ಮ ಭಾಗ್ಯ. ಅವರೊಂದು ಸ್ವಾಮೀಜಿಯವರಂತೆ. ಅವರು ಮನೆಗೆ ಬಂದಾಗ ನನ್ನ ತಂದೆಯವರು ಅವರಿಗೆ ಸನ್ಮಾನ ಮಾಡಿರುವುದು ಮನದಲ್ಲಿ ಈಗಲೂ ಇದೆ. ಅವತ್ತು ಅವರು ಮಂಗಳೂರಿಗೆ ಹೋಗುವಾಗ ನಾನು ಕೂಡಾ ಜೊತೆಗೆ ಹೋಗಿದ್ದೆ. ಪುತ್ತೂರಿನಲ್ಲಿ ಕೆಲವು ಮನೆಗಳನ್ನು ಸಂಘದ ಮನೆ ಎಂದು ಕರೆಯುತ್ತಾರೆ. ಇದರಿಂದ ಸಂತೋಷ ಆಗುತ್ತದೆ ಎಂದರು.


1991ರ ವಾಜಪೇಯಿ ಕಾರ್ಯಕ್ರಮಕ್ಕೆ ನಾನೇ ಅಧ್ಯಕ್ಷ :
ಸನ್ಮಾನ ಸ್ವೀಕರಿಸಿದ ಡಾ.ಎಂ.ಕೆ.ಪ್ರಸಾದ್ ಅವರು ಮಾತನಾಡಿ, ವಾಜಪೇಯಿ ಅವರ ಪುತ್ತೂರಿನಲ್ಲಿ ಕಾರ್ಯಕ್ರಮಕ್ಕೆ ನಾನೆ ಅಧ್ಯಕ್ಷನಾಗಿದ್ದೆ. ಅವರಿಗೆ ನೀಡಿದ ನಿಧಿ ಸಮರ್ಪಣೆಯ ಹಣವನ್ನು ಪುನಃ ಪಕ್ಷದ ಖರ್ಚಿಗೆಂದು ಹಿಂದಿರುಗಿಸಿದ್ದರು. ಅದು ಅವರ ದೊಡ್ಡ ಗುಣ. ಕಾರ್ಯಕ್ರಮ ಮುಗಿದ ಬಳಿಕ ಅವರೊಂದಿಗೆ ಸುಳ್ಯದ ತನಕ ಕಾರಿನಲ್ಲಿ ಹೋಗಿದ್ದೆ. ಇವತ್ತು ರಾಜಕಾರಣದಲ್ಲಿ ಸ್ವಾರ್ಥ ತುಂಬಿದೆ. ಆದರೆ ಸ್ವಾರ್ಥವಿಲ್ಲದ ರಾಜಕಾರಣಕ್ಕೆ ವಾಜಪೇಯಿ ಅವರು ಮಾದರಿ. 23 ಪಕ್ಷಗಳಿದ್ದರೂ ಒಂದು ಚೂರು ಜಗ್ಗದೆ ಒಳ್ಳೆಯ ರೀತಿಯಲ್ಲಿ 7 ವರ್ಷಗಳ ಕಾಲ ಅಡಳಿತ ನಡೆಸಿದರು. ಅದನ್ನು ನಾವು ಸ್ಮರಿಸಬೇಕು. ಗುಜರಾತ್ ಗಲಾಟೆ ಆದ ಸಂದರ್ಭದಲ್ಲೂ ಅವರು ಮೋದಿಯವರಿಗೆ ರಾಜ ಧರ್ಮ ಪಾಲನೆ ಮಾಡಲು ಹೇಳಿದರು. ಅಂತಹ ಸತ್ಯ, ನ್ಯಾಯದ ಪರವಾಗಿದ್ದ ವಾಜಪೇಯಿ ಅವರನ್ನು ನಾವು ನೆನಪಿಸಿಕೊಳ್ಳಬೇಕು. ಹಾಗಾಗಿ ನಾವು ತ್ಯಾಗ ಮನೋಭಾವದಿಂದ ಪಕ್ಷವನ್ನು ಕಟ್ಟಬೇಕು. ಬಿಜೆಪಿ ಮೇಲೆ ಬಂದರೆ ಮಾತ್ರ ಪ್ರಜಾಪ್ರಭುತ್ವ ದೇಶದಲ್ಲಿ ಉಳಿಯುತ್ತದೆ. ಇಲ್ಲದಿದ್ದರೆ ನಮ್ಮ ದೇಶ ಅಫ್‌ಘಾನಿಸ್ಥಾನ ಆಗಬಹುದು ಎಂದರು.


ವಾಜಪೇಯಿಯವರು ಪ್ರಗತಿಯ ಸಂಕೇತವಾಗಿದ್ದರು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪುತ್ತೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಾಗ ಪುತ್ತೂರಿನ ಅನೇಕ ಹಿರಿಯರು ಅವರನ್ನು ಗೌರವಿಸಿದ್ದಾರೆ. ಸಮಗ್ರತೆ, ಒಳಗೊಳ್ಳುವಿಕೆ ಮತ್ತು ಪ್ರಗತಿಯ ಸಂಕೇತವಾಗಿ ಅವರು ನಮ್ಮ ನೆನಪುಗಳಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ. ಅವರು ಭಾರತದ ಅತ್ಯುತ್ತಮ ನಾಯಕರಲ್ಲಿ ಒಬ್ಬರು, ಅವರು ಇತಿಹಾಸದಲ್ಲಿ ತಮ್ಮನ್ನು ತಾವು ದಾರ್ಶನಿಕ ನಾಯಕತ್ವ, ಅತ್ಯುತ್ತಮ ವಾಗ್ಮಿ ಮತ್ತು ಸಾರ್ವಜನಿಕ ಸೇವೆಗಳಿಗೆ ಅಚಲ ಬದ್ಧತೆಯಿಂದ ಗುರುತಿಸಿಕೊಂಡವರು ಎಂದರು.


ವಾಜಪೇಯಿ ಅವರಿಂದ ಸಾಮಾನ್ಯ ಜನರಿಗೂ ಮೂಲ ಸೌಕರ್ಯಗಳ ಸಿಕ್ಕಿದೆ:
ಬಿಜೆಪಿ ಜಿಲ್ಲಾ ಮುಖಂಡ ಗೋಪಾಲಕೃಷ್ಣ ಹೇರಳೆ ಅವರು ಮಾತನಾಡಿ, ಪಕ್ಷದ ಸೂಚನೆಯಂತೆ ವಾಜಪೇಯಿ ಅವರ ಜೊತೆಯಲ್ಲಿ ಯಾರಿಗೆಲ್ಲ ಒಡನಾಟ. ಅವರ ಸಮಕಾಲಿನರಾಗಿದ್ದು, ಅವರನ್ನು ಸ್ಪಂಧಿಸಿದ ಆಧರಣಿಯ ವ್ಯಕ್ತಿಗಳ ಮನೆಗಳ ಭೇಟಿ ಕಾರ್ಯಕ್ರಮ ನಡೆಯುತ್ತಿದೆ. ಈ ಪೈಕಿ ಸಂಜೀವ ಶೆಟ್ಟಿ ಮತ್ತು ಜಿ.ಎಲ್.ಆಚಾರ್ಯ ಜೊತೆಯಲ್ಲೇ ಸಾಗಿದವರು. ಸಂಘದ ಪೂರ್ಣಾವಧಿ ಪ್ರಚಾರಕರಾಗಿ. ಜನಸಂಘದಿಂದ ಬಿಜೆಪಿಯ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ವಾಜಪೇಯಿ ಅವರನ್ನು ನೆನಪಿಸುವ ಅಗತ್ಯವಿಲ್ಲ. ಅದರೆ ಅವರ ಜೀವನ ಹೇಗಿತ್ತು ಎಂಬುದನ್ನು ತಿಳಿಸುವುದು ಅಗತ್ಯವಾಗಿದೆ. ಇಲ್ಲಿನ ಪಕ್ಷ ಹೇಗೆ ನಡೆದುಕೊಂಡು ಬಂದಿದೆಯೋ ಅದೆಲ್ಲವು ವಾಜಪೇಯಿ ಕೊಡುಗೆ. ಭಾರತ ದೇಶದ ಗ್ರಾಮೀಣ ಭಾಗಕ್ಕೆ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ ಸೇರಿದಂತೆ ಹಲವು ಅಭಿವೃದ್ಧಿಪರ ಯೋಜನೆಗಳಿಂದಾಗಿ ಮೂಲ ಸೌಕರ್ಯಗಳು ಸಿಕ್ಕವು. ದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಅನನ್ಯವಾಗಿದೆ ಎಂದರು.


ಪುತ್ತೂರಿಗೆ ಡಾ.ಎಂ.ಕೆ.ಪ್ರಸಾದ್ ಅಜಾತ ಶತ್ರು:
ಬಿಜೆಪಿ ಜಿಲ್ಲಾ ಪ್ರಮುಖರಾಗಿರುವ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಪ್ರಚಾರಕರಾಗಿ, ಬಳಿಕ 1951ರಲ್ಲಿ ಜನಸಂಘದ ಕಾರ್ಯಕರ್ತರಾಗಿ ಕೊನೆಗೆ ಅವರು ಬಿಜೆಪಿಯ ನಾಯಕರಾಗಿದ್ದ ಸಂದರ್ಭದಲ್ಲಿ ಅವರು ಇಡಿ ದೇಶದಲ್ಲಿ ಪ್ರವಾಸ ಮಾಡಿದ್ದರು. ಈ ಸಂದರ್ಭ ಪುತ್ತೂರಿಗೆ ಅವರು ಮೂರು ಬಾರಿ ಬಂದಿದ್ದಾರೆ. ಅವರು ಓರ್ವ ಅಜಾತ ಶತ್ರು. ಅದೇ ರೀತಿ ನಮಗೆ ಪುತ್ತೂರಿನಲ್ಲಿ ಡಾ. ಎಂ.ಕೆ.ಪ್ರಸಾದ್ ಅವರು ಕೂಡಾ ಅಜಾತ ಶತ್ರು. ಅಟಲ್ ಬಿಹಾರಿ ವಾಜಪೇಯಿ ಅವರ 65 ವರ್ಷದ ಷಷ್ಠಾಬ್ದಿ ಕಾರ್ಯಕ್ರಮಕ್ಕೆ ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ಡಾ.ಎಂ.ಕೆ.ಪ್ರಸಾದ್ ಅವರು ಅಧ್ಯಕ್ಷರಾಗಿದ್ದರು. ಪುರಸಭೆಯ ಆಗಿನ ಅಧ್ಯಕ್ಷ ಲೋಕೇಶ್ ಹೆಗ್ಡೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆ ಕಾರ್ಯಕ್ರಮ ತುಂಬಾ ಅಭೂತಪೂರ್ವವಾಗಿ ಮೂಡಿಬಂದಿದೆ ಎಂದರು.


ಜಿ.ಎಲ್ ಆಚಾರ್ಯ ಅವರ ಮನೆಯಲ್ಲಿ ಜಿ.ಎಲ್ ಬಲರಾಮ ಆಚಾರ್ಯ, ಪತ್ನಿ ರಾಜೀ ಬಲರರಾಮ ಆಚಾರ್ಯ, ಪುತ್ರರು ಮತ್ತು ಮನೆ ಮಂದಿ ಉಪಸ್ಥಿತರಿದ್ದರು. ಸಂಜೀವ ಶೆಟ್ಟಿಯವರ ಮನೆಯಲ್ಲಿ ಅವರ ಪುತ್ರರಾದ ಮುರಳೀಧರ ಶೆಟ್ಟಿ, ಮನೋಹರ್, ಗಿರಿಧರ್, ಶಿವಕುಮಾರ್ ಮತ್ತು ಮನೆಯವರು ಉಪಸ್ಥಿತರಿದ್ದರು. ಡಾ.ಎಂ.ಕೆ.ಪ್ರಸಾದ್ ಅವರ ಮನೆಯಲ್ಲಿ ಅವರ ಪತ್ನಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪುತ್ರಿ ಅಶ್ವಿನಿ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ತೆಂಕಿಲ, ನಾಗೇಶ್ ಪ್ರಭು, ಕಾರ್ಯದರ್ಶಿ ಶಶಿಧರ್ ನಾಯಕ್, ಉಪಾಧ್ಯಕ್ಷ ನಾಗೇಂದ್ರ ಬಾಳಿಗ, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭೆ ಸದಸ್ಯರಾದ ಜೀವಂಧರ್ ಜೈನ್, ದೀಕ್ಷಾ ಪೈ, ಸಂತೋಷ್ ಬೊಳುವಾರು, ಮನೋಹರ್ ಕಲ್ಲಾರೆ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿದೇರ್ಶಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಶ್ರೀಧರ ಪಟ್ಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ಕೊರಾಂಗ, ನಿರಂಜನ್ , ಶಶಿಧರ್ ಸಪಲ್ಯ, ಜಯಕಾರೆಕ್ಕಾಡು, ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ಕಲ್ಲೇಗ, ಆಶಾ ಭಗವನ್, ದಯಾನಂದ ಕರ್ಮಲ, ದಯಾಕರ್ ಹೆಗ್ಡೆ, ಶಿವರಾಮ ಗೌಡ, ಲೋಕೇಶ್, ಲೋಕೇಶ್ ಪೂಜಾರಿ, ದಯಾನಂದ ಕೆ, ನಿರಂಜನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಕಾರ್ಯಕ್ರಮ ಸಂಚಾಲಕ ಯುವರಾಜ್ ಪೆರಿಯತ್ತೋಡಿ ಮತ್ತು ಸಹ ಸಂಚಾಲಕಿ ವಸಂತ ಲಕ್ಷ್ಮೀ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದರ್ಶನ ಹೋಮ, ದುರ್ಗಾನಮಸ್ಕಾರಕ್ಕೆ ಸಲಹೆ
ಬಿಜೆಪಿ ಕಚೇರಿಯಲ್ಲಿ ಶಕ್ತಿಯ ಕಲೆಯಿಲ್ಲ. ಹಾಗಾಗಿ ನನಗೊಬ್ಬರು ತಿಳಿಸಿದಂತೆ ಕಚೇರಿಯಲ್ಲಿ ಸುದರ್ಶನ ಹೋಮ ಮತ್ತು ದುರ್ಗಾ ನಮಸ್ಕಾರ ಪೂಜೆ ಮಾಡುವಂತೆ ಡಾ. ಎಂ.ಕೆ.ಪ್ರಸಾದ್ ಅವರು ಪಕ್ಷದ ಪ್ರಮುಖರಿಗೆ ಸಲಹೆ ನೀಡಿದ್ಧಾರೆ. ಬೇರೆ ಪಾರ್ಟಿಯಿಂದ ಬಂದವರನ್ನು ಮನೆ ಹಾಕಿ ದೊಡ್ಡ ಸಂಗತಿ ಮಾಡಿದ್ದರಿಂದ ಕಚೇರಿಯಲ್ಲಿ ಶಕ್ತಿಯಿಲ್ಲ. ಇದು ನಮ್ಮ ದೊಡ್ಡ ತಪ್ಪಾಗಿದೆ. ನಮ್ಮಲ್ಲೇ ಇರುವ ಮಾಣಿಕ್ಯಗಳನ್ನು ಗಮನಿಸದೇ ಇರುವುದು ದೊಡ್ಡ ತಪ್ಪು.
ಡಾ.ಎಂ.ಕೆ.ಪ್ರಸಾದ್

ಡಿ.ವಿ.ನನ್ನ ಗುರು
ಡಿ.ವಿ.ಸದಾನಂದ ಗೌಡರನ್ನು ಉಲ್ಲೇಖಿಸಿದ ಡಾ.ಎಂ.ಕೆ.ಪ್ರಸಾದ್ ಅವರು ’ಡಿ.ವಿ.ಹಾಗೆ ಹೀಗೆ ಎಂದು ನೀವು ಏನು ಬೇಕಾದರೂ ಹೇಳಿ. ಆದರೆ ಇವತ್ತಿಗೂ ಡಿ.ವಿ. ನನ್ನ ಗುರು’. ಬಿಜೆಪಿ ಅಸ್ತಿತ್ವ ಇಲ್ಲದಾಗ ಹಿಂದಿನ ಸಮಯದಲ್ಲಿ ನಮಗೆ ಒಂದು ಧೈರ್ಯ ತುಂಬಿದ್ದು ಡಿ.ವಿ. ಅವರ ಧೈರ್ಯದ ಮಾತಿನಿಂದ ನಾವು ಗೆದ್ದಿದ್ದೆವು. ಆ ಸಮಯ ವಿಶಿಷ್ಟ ಅನುಭವ. ಆಗ ನಾವು ಏನು ಮಾಡಿದ್ದೇವೆ ಹೇಗೆ ಗೆದಿದ್ದೇವೆ ಒಂದು ಕಲ್ಪಣೆಯೂ ಈಗ ಮಾಡಲು ಸಾಧ್ಯವಿಲ್ಲ. ಎಲ್ಲರು ಒಬ್ಬರಿಗೊಬ್ಬರು ಭಾರಿ ಅನ್ಯೋನ್ಯವಾಗಿದ್ದರು. ಆದರೆ ಇವತ್ತು ಅದೆಲ್ಲವೂ ಹೋಗಿದೆ. ಸ್ವಾರ್ಥ ರಾಜಕಾರಣವಿದೆ. ಹಿಂದೆ ಯಾರು ಎಷ್ಟು ಪೆಟ್ಟು ತಿಂದಿದ್ದಾರೆ. ಯಾರು ಎಷ್ಟು ಕಷ್ಟಪಟ್ಟಿದ್ದಾರೆ ಎಂದು ಈಗಿನ ಯುವ ಜನತೆಗೆ ಗೊತ್ತಿಲ್ಲ. ಇದನ್ನು ತಿಳಿಸುವ ಪ್ರಯತ್ನ ಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ. ಹಾಗಾಗಿ ನಮಗೆ ಸೋಲಾಗಿದೆ. ನಮ್ಮಲ್ಲಿ ಪ್ರಾಮಾಣಿಕತೆ ಹೋಗಿದ್ದರಿಂದ ಸೋಲಾಗಿದೆ. ಹಾಗಾಗಿ ಇನ್ನು ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು ಎಂದರು.

ಕೇಸರಿ ಬಟ್ಟೆ ಸುತ್ತಿದ ಕೂಡಲೇ ಹಿಂದುತ್ವವಾಗುವುದಿಲ್ಲ
ಈಗಿನ ಮಕ್ಕಳು ಜೈ ಶ್ರೀರಾಮ್ ಎಂದರೆ ಬಿಜೆಪಿ, ಹಿಂದುತ್ವ ಎಂದುಕೊಂಡಿದ್ದಾರೆ. ಹಿಂದುತ್ವ ಅದಲ್ಲ. ಬಿಜೆಪಿ ಬರಬೇಕಾದರೆ ನಾವು ಹಿಂದೆ ಕಷ್ಟಪಟ್ಟ ವಿಚಾರ ಯಾರಿಗೂ ಗೊತ್ತಿಲ್ಲ. ಜೈ ಶ್ರೀರಾಮ್ ಎಂದು ಕೇಸರಿ ಬಟ್ಟೆ ಸುತ್ತಿದ ಕೂಡಲೇ ಹಿಂದುತ್ವ ಆಗಲಿಲ್ಲ. ತ್ಯಾಗ ಬೇಕು. ಸರ್ವಸ್ವವನ್ನು ದಾನ ಮಾಡಬೇಕು. ದೇಶದ ಮೇಲೆ ಭಕ್ತಿ ಬೇಕು. ನಾಯಕರು ಹೇಳಿದನ್ನು ಕೇಳಬೇಕು ಎಂದ ಅವರು ಹಿಂದೆಲ್ಲಾ ಚುನಾವಣೆಗೆ ಒತ್ತಾಯದಿಂದ ನಿಲ್ಲಿಸುವ ಕೆಲಸ ಆಗುತ್ತಿತ್ತು. ಇವತ್ತು ಸೀಟ್‌ಗಾಗಿ ಜಗಳವಾಗುತ್ತದೆ.
ಡಾ.ಎಂ.ಕೆ.ಪ್ರಸಾದ್

LEAVE A REPLY

Please enter your comment!
Please enter your name here