ಉಪ್ಪಿನಂಗಡಿ: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುವುದರ ಜೊತೆಗೆ ಊರಿನ ಐಕ್ಯತೆ, ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಮತ್ತು ಈ ನೆಲೆಯಲ್ಲಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಉಪ್ಪಿನಂಗಡಿಯಲ್ಲಿ ಉಬಾರ್ ಡೋನರ‍್ಸ್ ವತಿಯಿಂದ ನಡೆದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ಸೇವೆ ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ. ಅದನ್ನು ಉಪ್ಪಿನಂಗಡಿಯ ಯುವಕರು ಜಾತಿ-ಧರ್ಮ-ಮತಗಳ ಭೇದವನ್ನು ಮರೆತು ಮಾಡುತ್ತಿದ್ದಾರೆ. ಈ ರೀತಿಯ ಮಾನವೀಯ ಸೇವೆಗಳನ್ನು ಮುಂದುವರಿಸಿ ನಿಮ್ಮೊಂದಿಗೆ ನಾನು ಮತ್ತೆ ಶಾಸಕರು ಸದಾ ಇದ್ದೇವೆ ಎಂದು ಭರವಸೆಯನ್ನಿತ್ತರು. ಹಾಗೆಯೇ ನಾನು ಬೆಂಗಳೂರು ಮತ್ತು ಗೋಕಾಕದಲ್ಲಿ ಯಾವಾಗಲೊಮ್ಮೆ ಕ್ರಿಕೆಟ್ ಪಂದ್ಯಾಟವನ್ನು ಸ್ವತಹ ಆಯೋಜಿಸುತ್ತಿದ್ದೆ ಎಂದರು
ಸಮಾರೋಪಕ್ಕೆ ಮುನ್ನ ಅವರು ಬ್ಯಾಟ್ ಹಿಡಿದು ಆಡಿದರು. ಶಾಸಕ ಅಶೋಕ್ ಕುಮಾರ್ ರೈ ಬೌಲಿಂಗ್ ಮಾಡಿದರು. ಉಬಾರ್ ಡೋನರ‍್ಸ್ ಸಂಸ್ಥೆಯ ಅಧ್ಯಕ್ಷ ಶಬ್ಬೀರ್ ಕೆಂಪಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಬ್ಬಾರ್ ಮಾರಿಪಳ್ಳ, ಕಾಂಗ್ರೆಸ್ ಮುಖಂಡರಾದ ರಕ್ಷಿತ್ ಶಿವರಾಮ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಮಿಥುನ್ ರೈ, ಹೇಮನಾಥ ಶೆಟ್ಟಿ, ಎಂ.ಎಸ್. ಮುಹಮ್ಮದ್, ಶಾಹುಲ್ ಕೆ.ಕೆ., ಸುಹೈಲ್ ಕಂದಕ್, ಗಿರೀಶ್ ಆಳ್ವ, ಇಬ್ರಾಹೀಂ ನವಾಝ್ ಬಡಕಬೈಲು, ಡಾ. ರಾಜಾರಾಮ್ ಕೆ.ಬಿ. ಇದ್ದರು.
ನಝೀರ್ ಮಠ ಸ್ವಾಗತಿಸಿದರು. ಯು.ಟಿ. ತೌಸೀಫ್ ವಂದಿಸಿದರು.