ಪುತ್ತೂರು ನಗರಸಭೆ ಸಾಮಾನ್ಯ ಸಭೆ- ಉಪಾಧ್ಯಕ್ಷರ ಟಾರ್ಗೆಟ್-ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರ ಆಕ್ರೋಶ-ಗದ್ದಲ

0


ದೀರ್ಘ ಬೆಲ್‌ನೊಂದಿಗೆ ಸಭೆ ಅಂತ್ಯಗೊಳಿಸಿದ ಅಧ್ಯಕ್ಷರು

ಪುತ್ತೂರು: ನಗರಸಭೆಯ ಉಪಾಧ್ಯಕ್ಷರನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಆಕ್ರೋಶಿತರಾಗಿ ಕಾಂಗ್ರೆಸ್ ಸದಸ್ಯರನ್ನು ತರಾಟೆಗೆತ್ತಿಕೊಂಡ ಮತ್ತು ಈ ವೇಳೆ ಸಭೆಯಲ್ಲಿನ ಗದ್ದಲ ನಿಲ್ಲಿಸಲು ಅಧ್ಯಕ್ಷರು ದೀರ್ಘಾವಧಿ ಬೆಲ್ ಒತ್ತಿ ಕೊನೆಗೆ ಸಭೆಯನ್ನೇ ಅಂತ್ಯಗೊಳಿಸಿದ ಘಟನೆ ಪುತ್ತೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಸಭೆಯು ನಗರಸಭೆಯ ಮೀಟಿಂಗ್ ಹಾಲ್‌ನಲ್ಲಿ ಫೆ.19ರಂದು ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಾಮಾನ್ಯ ಸಭೆಯ ಕೊನೆಯಲ್ಲಿ ಸದಸ್ಯ ಭಾಮಿ ಅಶೋಕ್ ಶೆಣೈ ಅವರು, ಸಭೆ ಮುಗಿದರೆ ಧನ್ಯವಾದ ಹೇಳಿ ಎಂದಾಗ ಕಾಂಗ್ರೆಸ್ ಸದಸ್ಯೆ ಶೈಲಾ ಪೈ ಅವರು,ನಿಲ್ಲಿ ಎಲ್ಲಿಗೆ ಧನ್ಯವಾದ ಎಂದು ಮಾತು ಆರಂಭಿಸಿ, ತನ್ನ ವಾರ್ಡ್‌ನಲ್ಲಿ ನಿವೇಶನವೊಂದರ ಬೇಲಿ ವಿಚಾರವನ್ನು ಪ್ರಸ್ತಾಪಿಸಿದರು. ನಾನು ರೈಟಿಂಗ್‌ನಲ್ಲಿ ದೂರು ನೀಡಿಲ್ಲ. ಆದರೂ ಬೇಲಿ ಹಾಕುವಾಗ ನನ್ನ ಹೆಸರನ್ನು ಉಲ್ಲೇಖಿಸಿದ್ದು ಯಾಕೆ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದ ಅವರು, ಒಂದು ವೇಳೆ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದರೆ ಅದನ್ನು ಅಲ್ಲಿ ಹೇಳುವ ಉದ್ದೇಶವೇನಿತ್ತು. ನಾನು ಮಾತನಾಡುವುದು ಹೇಗೆ ದೂರು ಆಗುತ್ತದೆ ಎಂದು ಪ್ರಶ್ನಿಸಿದರಲ್ಲದೆ, ಸಭೆಯಲ್ಲಿ ಹೇಳುವುದನ್ನು ನೀವು ಮಾಡುವುದಾದರೆ ಸಭೆಯಲ್ಲಿ ನಾನು ಹೇಳಿದ ಅಭಿವೃದ್ಧಿ ಕಾರ್ಯವನ್ನು ಮಾಡಿ ಕೊಡಿ.ನಮ್ಮ ವಾರ್ಡ್‌ನಲ್ಲಿ ಎರಡು ದಿನದ ಒಳಗೆ ಸಂಕ ಸರಿ ಮಾಡಿಕೊಡಿ ಎಂದು ಆಗ್ರಹಿಸಿದರು.

ಪೌರಾಯುಕ್ತರು ಯಾವುದೇ ಉತ್ತರ ನೀಡದೆ ಸುಮ್ಮನಿದ್ದ ವೇಳೆ ಮಾತು ಮುಂದುವರಿಸಿದ ಶೈಲಾ ಪೈ ಅವರು ಅಧ್ಯಕ್ಷರನ್ನೂ ಪ್ರಶ್ನಿಸಿದರಲ್ಲದೆ, ಉಪಾಧ್ಯಕ್ಷರು ನಮಗೆ ತಾಳ್ಮೆ ತೆಗೆದುಕೊಳ್ಳಲು ಹೇಳುತ್ತಾರೆ. ಎಲ್ಲಿ ತಾಳ್ಮೆ ಇದೆ.ನನಗೆ ಉಪಾಧ್ಯಕ್ಷರು ತಾಳ್ಮೆಯ ಉಪದೇಶ ಹೇಳುವುದು ಬೇಡ.ಮೊನ್ನೆ ಶಾಸಕರು ಬರುವಾಗ ತಡವಾಗುತ್ತದೆ ಎಂದು ನೀವೆಲ್ಲ ಎದ್ದು ಹೋದದ್ದು ಯಾಕೆ? ನಿಮಗೆ ಆಗ ಎಸಿಯ ಕೊಠಡಿಯಲ್ಲಿ ಕೂತುಕೊಳ್ಳಲು ತಾಳ್ಮೆ ಇರಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು, ನೀವು ಪದೇ ಪದೇ ಉಪಾಧ್ಯಕ್ಷರನ್ನು ಯಾಕೆ ಟಾರ್ಗೆಟ್ ಮಾಡುವುದು ಎಂದು ಪ್ರಶ್ನಿಸಿದರು. ಆಡಳಿತ ಬಿಜೆಪಿ ಸದಸ್ಯರಾದ ರಮೇಶ್ ರೈ, ಜೀವಂಧರ್ ಜೈನ್,ಭಾಮಿ ಅಶೋಕ್ ಶೆಣೈ ಧ್ವನಿಗೂಡಿಸಿದರು.

ಈ ವೇಳೆ ಶೈಲಾ ಪೈ ಪರವಾಗಿ ಕಾಂಗ್ರೆಸ್ ಸದಸ್ಯರಾದ ರೋಬಿನ್ ತಾವ್ರೋ, ಮಹಮ್ಮದ್ ರಿಯಾಝ್ ಅವರು ಬಿಜೆಪಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಒಂದು ರೀತಿಯ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಅಧ್ಯಕ್ಷರು ಒಂದು ಬಾರಿ ಬೆಲ್ ಒತ್ತಿ ಸಭೆಯನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬಳಿಕ ದೀರ್ಘ ಬೆಲ್ ಒತ್ತಿ ಕೊನೆಗೆ ಸಭೆಯನ್ನೇ ಅಂತ್ಯಗೊಳಿಸಿದರು.ಈ ನಡುವೆ ನಾಮನಿರ್ದೇಶಿತ ಸದಸ್ಯ ಬಶೀರ್ ಅಹಮ್ಮದ್ ಅವರು, ನಮಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ ಎಂದು ಹೇಳುತ್ತಾ ಸಾಮಾನ್ಯ ಸಭೆಯ ವಿಷಯ ಸೂಚಿ ಪತ್ರವನ್ನು ಬಿಸಾಡಿದರಾದರೂ ಅದನ್ನು ಮತ್ತೆ ಹೆಕ್ಕಿಕೊಂಡು ಹೊರ ಹೋದರು.ಚರ್ಚೆಯ ಸಂದರ್ಭ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಗೈರಾಗಿದ್ದರು.ಅವರು ಸಭೆಯ ಆರಂಭದಲ್ಲಿ ಇದ್ದರು.ಪತ್ನಿಯ ಅನಾರೋಗ್ಯದ ಕುರಿತು ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರ ಅನುಮತಿ ಪಡೆದು ಸಭೆಯಿಂದ ಅರ್ಧದಿಂದಲೇ ತೆರಳಿದ್ದರು.


ಸಭೆಯ ಹೊರಗೂ ಚರ್ಚೆ:

ಸಭೆಯ ಮೀಟಿಂಗ್ ಹಾಲ್‌ನಿಂದ ಎಲ್ಲಾ ಸದಸ್ಯರು ಹೊರ ಹೋದ ಬಳಿಕ ಸದಸ್ಯೆ ಶೈಲಾ ಪೈ ಅವರು ಸಭಾಂಗಣದ ಹೊರಗೆ ಸ್ವಪಕ್ಷದ ಸದಸ್ಯರೊಂದಿಗೆ ತಮ್ಮ ನೋವನ್ನು ತಿಳಿಸಿದರು. ಈ ವೇಳೆ ಬಿಜೆಪಿ ಸದಸ್ಯೆ ಗೌರಿ ಬನ್ನೂರು ಅವರು,ಶೈಲಾ ಪೈ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿ, ನಿಮ್ಮ ನೋವು ನಮಗೆ ಅರ್ಥ ಆಗುತ್ತದೆ.ಬನ್ನಿ ಅಧ್ಯಕ್ಷರು ಮತ್ತು ಪೌರಾಯುಕ್ತರಲ್ಲಿ ಮಾತನಾಡುವ ಎಂದು ಹೇಳಿದರು.ಆದರೆ ಶೈಲಾ ಪೈ ಅವರು ಗೌರಿ ಬನ್ನೂರು ಅವರ ಮಾತನ್ನು ಕೇಳಲಿಲ್ಲ.

ಸ್ವ ಸಹಾಯ ಗುಂಪುಗಳಿಂದ ಬಾಕಿ ಆಸ್ತಿ ತೆರಿಗೆ ಸಂಗ್ರಹ :

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕ ವಸೂಲಾತಿಗಾಗಿ ಡೇ ನಲ್ಮ್ ಅಭಿಯಾನದಲ್ಲಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಅರ್ಹ ಮಹಿಳಾ ಸ್ವಸಹಾಯ ಸಂಘಗಳನ್ನು ತೊಡಗಿಸಿಕೊಂಡು ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ವಸೂಲಾತಿ ಮಾಡುವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮಾರ್ಗಸೂಚಿಯನ್ನು ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಸೂಚನೆಯಂತೆ ಪುತ್ತೂರು ನಗರಸಭೆಯಲ್ಲೂ ಮಹಿಳಾ ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಂಡು ಬಾಕಿ ಇರುವ ಆಸ್ತಿ ತೆರಿಗೆ ಸಂಗ್ರಹ/ವಸೂಲಾತಿಯನ್ನು ಅರ್ಹ ಸ್ವಸಹಾಯ ಗುಂಪುಗಳಿಗೆ ವಹಿಸುವ ಕುರಿತು ಸಭೆಯಲ್ಲಿ ಸದಸ್ಯರು ಅನುಮೋದನೆ ನೀಡಿದರು. ವಸೂಲಾತಿಯಲ್ಲಿ ಶೇ.5 ಕಮಿಷನ್ ಅನ್ನು ಸ್ವಸಹಾಯ ಸಂಘಕ್ಕೆ ನೀಡಲಾಗುವುದು ಎಂದು ಪೌರಾಯಕ್ತರು ಮಾಹಿತಿ ನೀಡಿದರು.


ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಕಾರ್ಯಕ್ರಮಗಳಿಗೆ ರೂ.9.85ಲಕ್ಷ:

ಸ್ವಚ್ಛ ಭಾರತ್ ಮಿಷನ್ 2.0ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ರೂ.30 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ವಿವಿಧ ಕಾರ್ಯಕ್ರಮಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ಕ್ಷೇತ್ರ ಅಧ್ಯಯನ ಪ್ರವಾಸ ಮತ್ತು ಘನತ್ಯಾಜ್ಯ ನಿರ್ವಹಣೆಯ ಕುರಿತು ಸಾಮರ್ಥ್ಯಾಭಿವೃದ್ದಿ ತರಬೇತಿಗೆ ರೂ.2.5 ಲಕ್ಷ, ಪೌರಾಯುಕ್ತರು, ಅಭಿಯಂತರರು, ಆರೋಗ್ಯ ಮತ್ತು ಆಡಳಿತ ವಿಭಾಗದ ಅಧಿಕಾರಿಗಳಿಗೆ ಸೂರತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಕ್ಷೇತ್ರ ಅಧ್ಯಯನ ಪ್ರವಾಸ ಮತ್ತು ಸಾಮರ್ಥ್ಯಾಭಿವೃದ್ಧಿ ತರಬೇತಿಗೆ, ಕಾರ್ಯಗಳಿಗೆ ರೂ. 2.30ಲಕ್ಷ, ಸದಸ್ಯರುಗಳಿಗೆ ಮತ್ತು ಕೌನ್ಸಿಲ್ ಸಿಬ್ಬಂದಿಗಳಿಗೆ ಗೋವಾ ಅಥವಾ ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಕ್ಷೇತ್ರ ಅಧ್ಯಯನ ಪ್ರವಾಸ ಮತ್ತು ಸಾಮರ್ಥ್ಯಾಭಿವೃದ್ದಿ ತರಬೇತಿಗೆ ರೂ.5 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.


ಜಲಸಿರಿಗೆ ಇಂಧನ ಪೂರೈಕೆ-ನಗರಸಭೆ ಹೊಣೆ:

ಪುತ್ತೂರು ನಗರಸಭೆ ನೆಕ್ಕಿಲಾಡಿ ಕೆಳಮಟ್ಟ ರೇಚಕ ಸ್ಥಾವರ, ಮೇಲ್ಮಟ್ಟದ ರೇಚಕ ಸ್ಥಾವರಗಳಿಂದ ಜಲರಿಸಿರಿಯವರು ಪೂರ್ಣಪ್ರಮಾಣದ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಆದರೆ ವಿದ್ಯುತ್ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ನಗರಸಭೆ ಇಂಧನ ಪೂರೈಕೆ ಮಾಡಬೇಕಾಗಿದೆ.ಪಂಪು ಹೌಸ್‌ಗಳ ಜನರೇಟರ್‌ಗಳಿಗೆ ಇಂಧನ ಪೂರೈಕೆ ಕುರಿತು ಪೌರಾಯುಕ್ತರು ಪ್ರಸ್ತಾಪಿಸಿದರು. ಈ ಕುರಿತು ಸದಸ್ಯರು ಚರ್ಚಿಸಿ ಅನುಮೋದನೆ ನೀಡಿದರು.ವಿದ್ಯುತ್ ಹೋದ ಸಮಯದಲ್ಲಿ ಮಾತ್ರ ಇಂಧನ ಪೂರೈಕೆ ಆಗಲಿದೆ.ಈ ಕುರಿತು ಅಲ್ಲಿ ಸಮಯ ಪರಿಶೀಲನೆ ಮಾಡಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದರು.


೩೪ ನೆಕ್ಕಿಲಾಡಿ ಗ್ರಾಮಕ್ಕೆ ನೀರು ಬೇಡಿಕೆ ಕೂತು ಪರಿಹರಿಸಿ: ೩೪ ನೆಕ್ಕಿಲಾಡಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಕುರಿತು ನಿರ್ಣಯಿಸಿದಂತೆ ೧ ಕಿಲೋ ಲೀಟರ್‌ಗೆ ರೂ.೨೧ರಂತೆ ದಿನವೊಂದಕ್ಕೆ ರೂ.೩ ಲಕ್ಷ ಲೀಟರ್ ನೀರು ಪೂರೈಕೆ ಮತ್ತು ೩ ತಿಂಗಳ ಠೇವಣಾತಿ ನಗರಸಭೆಗೆ ನೀಡಬೇಕೆಂದು ಪುತ್ತೂರು ನಗರಸಭೆಯಿಂದ ನೆಕ್ಕಿಲಾಡಿ ಗ್ರಾ.ಪಂಗೆ ಪತ್ರ ಬರೆಯಲಾಗಿತ್ತು.ಆದರೆ ನೀರಿನ ದರ ಕಡಿಮೆ ಮಾಡುವಂತೆ ಅಲ್ಲಿಂದ ಪತ್ರ ಬಂದಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ನಗರಸಭೆಯ ಸ್ಲ್ಯಾಬ್ ಪ್ರಕಾರ ದರ ಕೊಟ್ಟರೆ ಇನ್ನೂ ಹೆಚ್ಚಿನ ದರ ವಿಽಸಬೇಕಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದರು.ಸದಸ್ಯ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಈ ಕುರಿತು ಸಾಧಕ ಬಾಧಕಗಳನ್ನು ಪಂಚಾಯತ್ ಅಧ್ಯಕ್ಷರು, ಅಭಿವೃದ್ದಿ ಅಽಕಾರಿ ಹಾಗು ನಗರಭೆಯಿಂದ ಅಧ್ಯಕ್ಷರು, ಪೌರಾಯುಕ್ತರು ಕೂತು ಮಾತನಾಡಿ ಬಗೆಹರಿಸಿ ಎಂದರು.


ಮತ್ತೆ ಹಿಂದಿನ ದರಕ್ಕಿಳಿದ ಸಕ್ಕಿಂಗ್ ಯಂತ್ರದ ಬಾಡಿಗೆ: ಸಕ್ಕಿಂಗ್ ಯಂತ್ರಕ್ಕೆ ಸಂಬಂಧಿಸಿ ನಗರಭೆಯಿಂದ ಸೆಸ್ ಪೂಲ್ ವಾಹನ ದರ ತುಂಬಾ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಜನರು ಮಂಗಳೂರಿನಿಂದ ಕಡಿಮೆ ಬಾಡಿಗೆಗೆ ಖಾಸಗಿ ವಾಹನ ತರಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ನಗರಸಭೆ ಸಕ್ಕಿಂಗ್ ಯಂತ್ರಕ್ಕೆ ಬೇಡಿಕೆ ಕಡಿಮೆಯಾಗಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಈ ಕುರಿತು ಚರ್ಚಿಸಿದ ಸದಸ್ಯರು ಈ ಹಿಂದಿದ್ದ ದರವನ್ನು ಮತ್ತೆ ಕಾರ್ಯರೂಪಕ್ಕೆ ತರುವಂತೆ ತಿಳಿಸಿದರು.ಕೆ.ಜೀವಂಧರ್ ಜೈನ್, ಭಾಮಿ ಅಶೋಕ್ ಶೆಣೈ ಅವರು ಮಾತನಾಡಿದರು.ರಿಯಾಝ್ ಪರ್ಲಡ್ಕ ಅವರು, ಧಾರ್ಮಿಕ ಕೇಂದ್ರಗಳಿಗೆ ಜಾಸ್ತಿ ಮಾಡಬಹುದು ಎಂದರು.


ಬೊಳುವಾರಿಗೆ ಮಂಜೂರಾಗಿದ್ದ ಕಾಮಗಾರಿ ಬದಲಾವಣೆ:

ಲೋಕೋಪಯೋಗಿ ಇಲಾಖೆಯಿಂದ ಬೊಳುವಾರಿನಿಂದ ಪಡೀಲ್‌ನ ತನಕ ಚತುಷ್ಪಥ ರಸ್ತೆಯ ಕಾಮಗಾರಿ ಮಂಜೂರಾಗಿ ಟೆಂಡರ್ ಆಗಿದ್ದರಿಂದ ೧೫ನೇ ಹಣಕಾಸು ೨೦೨೦-೨೧ನೇ ಸಾಲಿನ ಉಳಿಕೆ ಅನುದಾನದಡಿಯಲ್ಲಿ ನಗರಸಭೆಯಿಂದ ಬೊಳುವಾರು ಸರ್ಕಲ್‌ಗೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಯನ್ನು ಬದಲಾಯಿಸಲಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಈ ಕುರಿತು ಸದಸ್ಯ ಸಂತೋಷ್ ಬೊಳುವಾರು ಅವರು ಮಾತನಾಡಿ, ಲೋಕೋಪಯೋಗಿ ಕಾಮಗಾರಿ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ.ಆದರೆ ಕಾಮಗಾರಿ ಆಗುವಾಗ ವರ್ಷಗಳು ಕಳೆಯಲಿದೆ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ವೃತ್ತದ ಬಳಿ ಡಾಮರೀಕರಣವನ್ನಾದರೂ ಮಾಡುವಂತೆ ಪ್ರಸ್ತಾಪಿಸಿದರು.


ಕೆರೆ ಅಭಿವೃದ್ಧಿ ಕಾಮಗಾರಿ ಅನುದಾನವೂ ಬದಲಾವಣೆ:

ಬನ್ನೂರು ಅಲುಂಬುಡದ ಕೆರೆ ಅಭಿವೃದ್ಧಿಗೆ ೨೦೨೩-೨೦೨೪ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ನಿರ್ಬಂಽತ ಅನುದಾನದ ಕಾಮಗಾರಿ ನಡೆಸಲು, ಕೆರೆಯ ಬಳಿ ಹೋಗುವ ರಸ್ತೆ ತಕರಾರಿನಿಂದಾಗಿ ಮಾಡಲಸಾಧ್ಯವಾಗಿದೆ.ಹಾಗಾಗಿ ಅದನ್ನೂ ಬದಲಾವಣೆ ಮಾಡಿರುವ ಕುರಿತು ಪ್ರಸ್ತಾಪವಾದಾಗ ಸದಸ್ಯೆ ಗೌರಿ ಬನ್ನೂರು ಅವರು ಆಕ್ಷೇಪ ವ್ಯಕ್ತಪಡಿಸಿದರು.ಕೆರೆ ಅಭಿವೃದ್ಧಿ ಅಗತ್ಯವಿದೆ.ಈ ಅನುದಾನವನ್ನು ಅಲ್ಲಿನ ರಸ್ತೆಗಾದರೂ ಇಡಬಹುದಿತ್ತಲ್ಲ ಎಂದರು. ಉತ್ತರಿಸಿದ ಪೌರಾಯುಕ್ತರು ಅದು ಕೆರೆ ಅಭಿವೃದ್ಧಿಗೆ ಬಂದಿರುವ ಅನುದಾನ. ಹಾಗಾಗಿ ಆ ಅನುದಾನವನ್ನು ನಗರಸಭೆ ನೀರು ಸರಬರಾಜು ನೆಕ್ಕಿಲಾಡಿ ಕೆಳ ಹಂತದ ಸ್ಥಾವರಕ್ಕೆ ಮತ್ತು ೧೭೫ ಹೆಚ್‌ಪಿ ಸಾಮರ್ಥ್ಯದ ವರ್ಟಿಕಲ್ ಟರ್ಬೂನ್ ಪಂಪು ಅಳವಡಿಸಲು ಬಳಕೆ ಮಾಡಲಾಗುವುದು ಎಂದರು.ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ, ಪ್ರತಿ ಬಾರಿ ನೆಕ್ಕಿಲಾಡಿ ಅಣೆಕಟ್ಟು ಸಹಿತ ಇತರ ನೀರಿನ ಕಾಮಗಾರಿಗೆ ನಗರಸಭೆಯಿಂದ ಅನುದಾನ ನೀಡುವುದಾದರೆ ಜಲಸಿರಿಯವರು ಯಾಕೆ ಇರುವುದು ಎಂದು ಪ್ರಶ್ನಿಸಿದರು.


ರಸ್ತೆಯಲ್ಲೇ ಕಸ ಹಾರುತ್ತಿದೆ:

ನಗರಸಭೆಯ ರಸ್ತೆಗಳ ಬದಿಯಲ್ಲಿ ಕಸಗಳು ಹಾರುತ್ತಿವೆ.ಈ ಕುರಿತು ನಗರಸಭೆ ಅಽಕಾರಿಗಳು ಗಮನಿಸುವಂತೆ ಗೌರಿ ಬನ್ನೂರು ಮತ್ತು ದೀಕ್ಷಾ ಪೈ ಪ್ರಸ್ತಾಪಿಸಿದರು.ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಮಾತನಾಡಿ ಸೂಪರ್‌ವೈಸರ್‌ಗಳನ್ನು ಅಲ್ಲಿ ಕಳುಹಿಸಿ ಪರಿಶೀಲಿಸುವಂತೆ ಆರೋಗ್ಯ ಅಽಕಾರಿಗಳಿಗೆ ನಿರ್ದೇಶನ ನೀಡಿದರು.ಆರೋಗ್ಯ ನಿರೀಕ್ಷಕ ರಾಮಚಂದ್ರ ಅವರು ಮಾತನಾಡಿ ಈ ಕುರಿತು ಸಂಬಂಽಸಿದವರಿಗೆ ನೋಟೀಸ್ ಮಾಡಿದ್ದೇವೆ ಎಂದರು.ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಅವರು ಮಾತನಾಡಿ ನಗರಸಭೆ ಪೌರ ಕಾರ್ಮಿಕರನ್ನು ಪ್ರತ್ಯೇಕವಾಗಿ ಕರೆಸಿ ಸಭೆ ಮಾಡಿ ಮಾಹಿತಿ ನೀಡಬೇಕಾಗಿದೆ ಎಂದರು.


ದೊಡ್ಡ, ಸಣ್ಣ ಚರಂಡಿಯಿಂದ ಮಣ್ಣು ತೆರವು ಮಾಡಿ:

ನಗರಭೆಯ ದೊಡ್ಡ ಮತ್ತು ಸಣ್ಣ ಚರಂಡಿಯಲ್ಲಿ ಮಣ್ಣು ತುಂಬಿದೆ.ಸಣ್ಣ ಮಳೆ ಬಂದರೂ ಕೃತಕ ನೆರೆಯಾಗುವ ಸಾಧ್ಯತೆ ಇದೆ.ಆದ್ದರಿಂದ ಜಾತ್ರೆಯ ಒಳಗೆ ಟೆಂಡರ್ ಕರೆಸಿ ಕಾಮಗಾರಿ ಮಾಡಿಸಿ ಎಂದು ಭಾಮಿ ಅಶೋಕ್ ಶೆಣೈ ಪ್ರಸ್ತಾಪಿಸಿದರು.ಹೂಳೆತ್ತುವ ಕೆಲಸ ಮಾಡಿಸೋಣ ಎಂದು ಪೌರಾಯುಕ್ತರು ಹೇಳಿದಾಗ, ನೀವು ಹೂಳೆತ್ತಿಸಿದರೆ ಸಾಲದು.ಮಣ್ಣು ತೆರವು ಮಾಡಬೇಕು ಎಂದು ಭಾಮಿ ಅಶೋಕ್ ಶೆಣೈ ಹೇಳಿದರು.ಧ್ವನಿಗೂಡಿಸಿದ ರಮೇಶ್ ರೈ ಅವರು ನೆಲ್ಲಿಕಟ್ಟೆಯಲ್ಲಿ ಮಳೆಗಾಲದಲ್ಲಿ ದೋಣಿಯಲ್ಲಿ ಹೋಗಬೇಕಾದ ಪರಿಸ್ಥಿತಿ ಇದೆ.ಅಲ್ಲೂ ಕಾಮಗಾರಿ ನಡೆಸುವಂತೆ ತಿಳಿಸಿದರು.ಯಶೋದಾ ಹರೀಶ್ ಮತ್ತು ವಿದ್ಯಾ ಗೌರಿ, ವಿಷಯದ ಮೇಲೆ ಮಾತನಾಡಿದರು.


ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತ ಮಧು ಎಸ್ ಮನೋಹರ್, ಸದಸ್ಯರಾದ ಕೆ.ಜೀವಂಧರ್ ಜೈನ್, ವಿದ್ಯಾ ಆರ್ ಗೌರಿ, ದಿನೇಶ್ ಶೇವಿರೆ, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.-ತಿಮಾತ್ ಝೊರಾ, ಮೋಹಿನಿ ವಿಶ್ವನಾಥ ಗೌಡ, ರೋಬಿನ್ ತಾವ್ರೋ, ಪ್ರೇಂ ಕುಮಾರ್, ರಮೇಶ್ ರೈ, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್, ಭಾಮಿ ಅಶೋಕ್ ಶೆಣೈ, ಯಶೋಧ ಹರೀಶ್ ಪೂಜಾರಿ, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ, ವಸಂತ ಕಾರೆಕ್ಕಾಡು, ಮಮತಾರಂಜನ್, ಬಿ.ಶೈಲಾ ಪೈ, ಇಸುಬು, ಮಹಮ್ಮದ್ ರಿಯಾಝ್ ಕೆ., ಪೂರ್ಣಿಮ ಕೋಡಿಯಡ್ಕ, ನಾಮನಿರ್ದೇಶಿತ ಸದಸ್ಯರಾದ ಶಾರದಾ ಅರಸ್, ಆಶೀ- ಬಲ್ನಾಡು, ಬಶೀರ್ ಅಹಮ್ಮದ್, ರೋಶನ್ ರೈ ಬನ್ನೂರು,ನಗರಸಭೆ ಅಽಕಾರಿಗಳು ಉಪಸ್ಥಿತರಿದ್ದರು.

ಸಾಹಸ್ ಸಂಸ್ಥೆಯಿಂದ ವೈಜ್ಞಾನಿಕ ಕಸ ವಿಂಗಡಣೆ ಮಾಹಿತಿ

ಹಸಿ ತ್ಯಾಜ್ಯ ಬಳಸಿಕೊಂಡು ಜೈವಿಕ ಅನಿಲ ಉತ್ಪಾದಿಸುವ ಮೂಲಕ ರಾಜ್ಯದ ನಗರಸಭೆಗಳ ಪೈಕಿ ವಿನೂತನ ಸಾಧನೆ ಮಾಡಿರುವ ಪುತ್ತೂರು ನಗರಸಭೆ ಇದೀಗ ತನ್ನ ವ್ಯಾಪ್ತಿಯ ನಾಗರಿಕರಿಗೆ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಉಚಿತ ಜಾಗೃತಿ ಕಾರ್ಯಕ್ರಮವನ್ನು ನಿರಂತರ ೩ ವರ್ಷಗಳ ಕಾಲ ನೀಡಲು ಮುಂದಾಗಿದೆ. ಈ ಕುರಿತು ಸಾಹಸ್ ಎಂಬ ಹೆಸರಿನ ಎನ್‌ಜಿಒ ಈ ಜಾಗೃತಿ ಕಾರ್ಯಕ್ರಮ ನಡೆಸಲು ನಗರಸಭೆ ಜತೆ ಒಡಂಬಡಿಕೆ ಮಾಡಿಕೊಂಡಿದ್ದು,ಮುಂದಿನ ೩ ವರ್ಷಗಳ ಕಾಲ ಎಲ್ಲ ೩೧ ವಾರ್ಡ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸಲಿದೆ. ಸಾಹಸ್ ಸಂಸ್ಥೆಯ ಕಾರ್ತಿಕ್ ಅವರು ನಗರಸಭೆಯಲ್ಲಿ ಸದಸ್ಯರುಗಳಿಗೆ ತಮ್ಮ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಹಣಕಾಸು ನೆರವನ್ನು ನಾವು ಇದಕ್ಕಾಗಿ ನಗರಸಭೆಯಿಂದ ಪಡೆಯುತ್ತಿಲ್ಲ. ಸಂಪೂರ್ಣ ಉಚಿತವಾಗಿ ಮಾಡಲಿದ್ದೇವೆ. ಇದರ ಜತೆ ಪುತ್ತೂರು ನಗರದ ಬನ್ನೂರಿನ ನೆಕ್ಕಿಲು ಎಂಬಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ೧೫ ಲಕ್ಷ ರೂ. ವೆಚ್ಚದ ಯಂತ್ರೋಪಕರಣಗಳನ್ನು ಕೂಡ ನೀಡಲಿದ್ದೇವೆ. ನಗರಸಭೆಯ ಎಲ್ಲಾ ೩೧ ವಾರ್ಡ್‌ಗಳಲ್ಲಿ ಜಾಗೃತಿ ಸಭೆಗಳನ್ನು ಮಾಡಲಿದ್ದೇವೆ. ಇದಕ್ಕೆ ಕೌನ್ಸಿಲರ್‌ಗಳ ಸಹಕಾರಬೇಕು ಎಂದರು.

LEAVE A REPLY

Please enter your comment!
Please enter your name here