ಕುಮಾರಧಾರ ನದಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ ಗ್ರಾಮಸ್ಥರು

0


ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮವಾಗಿರುವ ಬಳ್ಪದ ಜನರು ತಾಲೂಕು ಕೇಂದ್ರವನ್ನು ಸಂಪರ್ಕಿಸಲು ಪಂಜ ಮೂಲಕ ಸುಮಾರು 20 ಕಿ.ಮೀ ಸುತ್ತು ಬಳಸಿ ಸಂಚರಿಸಬೇಕು.ಆದರೆ ಈ ಕುಮಾರಧಾರಾ ನದಿ ಯಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಯಲ್ಲಿ 6 ಕಿ.ಮೀ ಸಂಪರ್ಕಿಸಬಹುದು. ಇದೇ ರಸ್ತೆಯ 3 ಕಿ.ಮೀ ಯಲ್ಲಿ ಮಂಗಳೂರು-ಬೆಂಗಳೂರು ನಡುವಿನ ಕೋಡಿಂಬಾಳ ರೈಲ್ವೆ ನಿಲ್ದಾಣವೂ ಸಿಗುತ್ತದೆ.

ಈ ನಿಟ್ಟಿನಲ್ಲಿ ಗ್ರಾಮಸ್ಥರೇ ಸೇರಿಕೊಂಡು ಮಜ್ಜಾರು ಕಡವು ಎಂಬಲ್ಲಿಂದ ಬಳ್ಪ ಗ್ರಾಮದ ಕೇನ್ಯ ಎಂಬ ಪ್ರದೇಶವನ್ನು ಸಂಪರ್ಕಿಸುವ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಜೊತೆಗೆ ಸಮಿತಿಯನ್ನು ರಚಿಸಿ ಗ್ರಾಮಸ್ಥರ ಸಹಕಾರದಿಂದ ಸುಮಾರು ಐದು ಲಕ್ಷ ರೂ. ಮೊತ್ತವನ್ನು ಸಂಗ್ರಹಿಸಿ ತಾತ್ಕಾಲಿಕ ರಸ್ತೆ ಕೆಲಸ ಆರಂಭಿಸಿದ್ದಾರೆ.


ಬಳ್ಪ, ಕೇನ್ಯ, ಮಜ್ಜಾರು ಭಾಗದ ಹಿರಿಯರು, ಯುವಕರು ಮಕ್ಕಳೆನ್ನದೇ ಸುಮಾರು 200ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಶ್ರಮದಾನದ ಮೂಲಕ ಈ ರಸ್ತೆ ನಿರ್ಮಾಣದ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ. ನಾಲ್ಕು ದಿನದೊಳಗಡೆ ತಾತ್ಕಾಲಿಕ ರಸ್ತೆ ಕೆಲಸ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಸುಮಾರು 200 ಮೀಟರ್ ಉದ್ದದ ರಸ್ತೆಯನ್ನು ಕಲ್ಲು, ಮಣ್ಣು, ಮರಳು, ಮತ್ತು ಸುಮಾರು 16 ಸಿಮೆಂಟ್ ಪೈಪ್ ಮುಂತಾದ ಪರಿಕರಗಳಿಂದ ನಿರ್ಮಿಸುತ್ತಿದ್ದಾರೆ. ಈ ತಾತ್ಕಾಲಿಕ ರಸ್ತೆ ಮಳೆಗಾಲದಲ್ಲಿ ನೆರೆ ನೀರಿಗೆ ಹಾನಿಯಾಗಲಿದೆ. ಮುಂದಿನ ವರ್ಷ ಬೇಸಿಗೆ ಕಾಲದಲ್ಲಿ ಮತ್ತೆ ಪುನರ್ ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲಿ ಶಾಶ್ವತ ಸಂಪರ್ಕ ಸೇತುವೆ ಬೇಡಿಕೆ ಈಡೇರಿದರೆ ಕಡಬ, ಕೋಡಿಂಬಾಳ ರೈಲ್ವೆ ನಿಲ್ದಾಣ, ಪ್ರಸಿದ್ಧ ಪ್ರವಾಸಿ ಮತ್ತು ಕಾರಣಿಕ ಕ್ಷೇತ್ರಗಳಾದ ಮಜ್ಜಾರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸೇರಿದಂತೆ ಮಂಗಳೂರು, ಬೆಂಗಳೂರು ಮತ್ತು ಸುಳ್ಯ, ಮಡಿಕೇರಿ, ಕೇರಳ ಕಡೆಗೂ ಸಂಪರ್ಕ ಕೊಂಡಿಯಾಗಲಿದೆ.


ಬಳ್ಪ ‘ಸಂಸದರ ಆದರ್ಶ ಗ್ರಾಮ’ವಾಗಿರುವುದರಿಂದ ಈ ಸೇತುವೆ ಸಂಪರ್ಕ ಕಲ್ಪಿಸುವ ಬಳ್ಪ ಗ್ರಾಮದ ರಸ್ತೆಗಳು ಈಗಾಗಲೇ ಬಹುತೇಕ ಎಲ್ಲಾ ಕಡೆಗಳಲ್ಲಿ ಕಾಂಕ್ರಿಟೀಕರಣವಾಗಿವೆ. ಆದ್ದರಿಂದ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಮಜ್ಜಾರುಕಡವು ಭಾಗದಲ್ಲಿ ಸರ್ವ ಋತು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಳ್ಪ ಹಾಗು ಕೋಡಿಂಬಾಳ ಗ್ರಾಮಸ್ಥರು ಹಾಗು ಸಾರ್ವಜನಿಕರ ಹಣ ಮತ್ತು ಶ್ರಮ ಸೇವೆಯಿಂದ ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತಿದೆ. ಮಳೆಗಾಲಕ್ಕೆ ಈ ರಸ್ತೆ ಉಪಯೋಗ ಮಾಡುವಾಗಿಲ್ಲ, ಹಾಗಾಗಿ ಇಲ್ಲೊಂದು ಸರ್ವ ಋತು ಸೇತುವೆ ಬೇಕೆಂಬ ಹಕ್ಕೊತ್ತಾಯ ಮಾಡಲಾಗುವುದು. ಇದಕ್ಕಾಗಿ ಸಾರ್ವಜನಿಕರ ಸಹಕಾರದೊಂದಿಗೆ ಎರಡು ಗ್ರಾಮಸ್ಥರ ಹೋರಾಟ ಸಮಿತಿ ರಚಿಸಿಕೊಂಡು ಮುಂದಿನ ದಿನಗಳ್ಳಲ್ಲಿ ಹೊರಟ ನಡೆಸಲು ಚಿಂತನೆ ನಡೆಸಲಾಗಿದೆ.
-ವಾಸುದೇವ ಕೆರೆಕೊಡಿ,ಸಂಚಾಲಕರು,
ಕೋಡಿಂಬಾಳ-ಬಳ್ಪ ತಾತ್ಕಾಲಿಕ ರಸ್ತೆ ನಿರ್ಮಾಣ ಸಮಿತಿ.

LEAVE A REPLY

Please enter your comment!
Please enter your name here