ಪುತ್ತೂರು:ವಾಟ್ಸಪ್ ಸ್ಟೇಟಸ್‌ನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮುಂಡೂರು ನಿವಾಸಿಯೋರ್ವರು ಶಾಸಕರ ಕಚೇರಿಗೆ ಬಂದು ಕ್ಷಮೆಯಾಚಿಸಿರುವ ಘಟನೆ ವರದಿಯಾಗಿದೆ.
ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು, ಪುತ್ತೂರಿನಲ್ಲಿ ಒಂದು ಗೋಣಿ ಸಿಮೆಂಟಿನ ಕೆಲಸ ಆಗಿಲ್ಲ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಒಂದು ಗೋಣಿ ಸಿಮೆಂಟಿನ ಕೆಲಸ ಆಗಿಲ್ಲ ಎಂದು ಹೇಳಿದವರಿಗೆ ಒಂದು ಕೋಟಿ ಖಾಲಿ ಸಿಮೆಂಟಿನ ಗೋಣಿ ಇದೆ, ಮುಂದೆ ಅವರಿಗೆ ಗೋಣಿ ವ್ಯಾಪಾರ ಮಾಡಬಹುದು’ ಎಂದು ಹೇಳಿಕೆ ನೀಡಿದ್ದರು.ಮುಂಡೂರು ಗ್ರಾಮದ ಪೊನೊಣಿ ನಿವಾಸಿ ಸೇಸಪ್ಪ ಶೆಟ್ಟಿ ಎಂಬವರು,ಈ ಹೇಳಿಕೆಯನ್ನು ಅಪಹಾಸ್ಯಕರ ರೀತಿಯಲ್ಲಿ ಪೋಸ್ಟ್ ಮಾಡಿ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು.ಈ ವಿಚಾರ ತಿಳಿಯುತ್ತಲೇ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.ತಮ್ಮ ಜಾಗದ ಅಕ್ರಮ ಸಕ್ರಮ ಕಡತವನ್ನು ಶಾಸಕ ಅಶೋಕ್ ಕುಮಾರ್ ರೈ ಬಳಿ ಬಂದು ಮಾಡಿಸಿಕೊಂಡು ಹೋದ ಸೇಸಪ್ಪ ಶೆಟ್ಟಿಯವರಿಗೆ ಕೃತಜ್ಞತೆ ಕೂಡಾ ಇಲ್ಲ ಎಂದು ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸೇಸಪ್ಪ ಶೆಟ್ಟಿಯವರ ವಿರುದ್ದ ಟೀಕಾತ್ಮಕ ಬರಹಗಳನ್ನು ಪ್ರಕಟಿಸಿದ್ದರು.
ಕಚೇರಿಗೆ ಬಂದು ಕ್ಷಮೆ ಕೇಳಿದರು:
ತಾನು ಹಾಕಿದ ಸ್ಟೇಟಸ್ ವಿಚಾರ ವೈರಲ್ ಆಗುತ್ತಿದ್ದಂತೆಯೇ ಶಾಸಕರ ಕಚೇರಿಗೆ ಬಂದ ಸೇಸಪ್ಪ ಶೆಟ್ಟಿಯವರು, ಕಣ್ ತಪ್ಪಿ ಇದು ನಡೆದಿದೆ.ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ.ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು.ಈ ವೇಳೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು, ನಮ್ಮಲ್ಲಿಗೆ ಬಂದು ಕೆಲಸ ಮಾಡಿಕೊಂಡು ಹೋಗಿ ನಮ್ಮನ್ನೇ ಅಪಹಾಸ್ಯ ಮಾಡಿದ್ದೀರಲ್ಲ ಎಂದು ಹೇಳಿದರು.ನಾನು ಮಾಡಿದ್ದು ತಪ್ಪಾಗಿದೆ,ಕ್ಷಮಿಸಿ ಎಂದು ಸೇಸಪ್ಪ ಶೆಟ್ಟಿ ಮತ್ತೆ ಮನವಿ ಮಾಡಿದರು.ನಾನು ಕ್ಷಮಿಸಿದ್ದೇನೆ.ಮುಂದೆ ನಮ್ಮ ಜೊತೆಯೇ ಇರಿ ಎಂದು ಶಾಸಕರು ಸೇಸಪ್ಪ ಶೆಟ್ಟಿಯವರಿಗೆ ತಿಳಿಸಿದರು.
ಸ್ಟೇಟಸ್‌ನಲ್ಲಿ ಅಪಹಾಸ್ಯ ಮಾಡಿ ಹಾಕಿದ್ದರು.ಅವರ ಅಕ್ರಮ ಸಕ್ರಮವನ್ನು ಬಿಜೆಪಿಯವರು ಮಾಡಿಕೊಟ್ಟಿರಲಿಲ್ಲ, ನಾನು ಮಾಡಿ ಕೊಟ್ಟಿದ್ದೆ.ಆ ಬಳಿಕ ನನ್ನ ವಿರುದ್ದವೇ ಸ್ಟೇಟಸ್ ಹಾಕಿದ್ದರು. ಕಚೇರಿಗೆ ಬಂದು ಕ್ಷಮಿಸಿ ಅಂದ್ರು ಕ್ಷಮಿಸಿದ್ದೇನೆ
ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು
ನನ್ನಿಂದ ತಪ್ಪಾಗಿದೆ.ಹಾಕಬಾರದಿತ್ತು,ಕಣ್ ತಪ್ಪಿನಿಂದ ಆವಾಂತರ ಆಗಿದೆ.ಸ್ಟೇಟಸ್ ಹಾಕಿರುವುದು ನನಗೆ ಬೇಸರ ತಂದಿದೆ.ನನಗೆ ಶಾಸಕರು ತುಂಬ ಉಪಕಾರ ಮಾಡಿದ್ದಾರೆ.ಅವರನ್ನು ಮರೆಯಲು ಸಾಧ್ಯವಿಲ್ಲ,ಮುಂದೆ ಅವರ ಜೊತೆಯೇ ಇರುತ್ತೇನೆ
ಸೇಸಪ್ಪ ಶೆಟ್ಟಿ ಪೊನೊಣಿ, ಮುಂಡೂರು