ಮೂರನೇ ದಿನ ಹನುಮಗಿರಿ ಮೇಳದವರಿಂದ ಸಾಕೇತ ಸಾಮ್ರಾಜ್ಞೆ ಯಕ್ಷಗಾನ
ಪುತ್ತೂರು: ಪರ್ಲಡ್ಕದಲ್ಲಿರುವ ಎಸ್.ಡಿ.ಪಿ. ರೆಮಿಡೀಸ್ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ಮೂರು ದಿನಗಳ ಕಾಲ ಸಂಭ್ರಮಿಸಿದ 21ನೇ ವರ್ಷದ ‘ಎಸ್.ಡಿ.ಪಿ. ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮ’ದ ಮೂರನೇ ದಿನವಾದ ಫೆ.24ರಂದು ಹನುಮಗಿರಿ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿಯವರಿಂದ ‘ಸಾಕೇತ ಸಾಮ್ರಾಜ್ಞೆ' ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂಟಾರು ರವೀಶ್ ತಂತ್ರಿಯವರು ಮಾತನಾಡಿ, ಹಿಂದೂಧರ್ಮ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಹಿಂದುಧರ್ಮ ಉಳಿಯಬೇಕಾದರೆ ಭಾರತದಲ್ಲಿರುವ ಎಲ್ಲಾ ಸಾಂಸ್ಕೃತಿಕ ಕಲೆಗಳು ಉಳಿಯಬೇಕು. ಸಾಂಸ್ಕೃತಿಕ ಕಲೆಗಳು ಉಳಿಯಬೇಕಾದರೆ ಹಿಂದೂಧರ್ಮ ಉಳಿಯಬೇಕು. ಧರ್ಮ ಸಂರಕ್ಷಣೆಗಾಗಿ ನಾವು ವಿವಿಧ ರೂಪದಲ್ಲಿ ತೊಡಗಿಸಕೊಳ್ಳಬಹುದು. ಸಾಂಸ್ಕೃತಿಕವಾಗಿಯೂ ಕಲೆಗಳನ್ನು ಉಳಿಸು ಬೆಳೆಸುವ ಜೊತೆಗೆ ಕಲೋಪಾಸನಾ ಕಾರ್ಯಕ್ರಮದ ಮೂಲಕ ನಿರಂತರವಾಗಿ ಪ್ರೋತ್ಸಾಹಿಸುವ ಕಾರ್ಯಕ್ರಮ ನಡೆಸುತ್ತಿರುವ ಡಾ.ಹರಿಕೃಷ್ಣ ಪಾಣಾಜೆಯವರು ತನ್ನ ಜೀವನವನ್ನು ಧರ್ಮ ಸಂರಕ್ಷಣೆಗೆ ವಿನಿಯೋಗಿಸುತ್ತಿದ್ದಾರೆ. ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಕಲೋಪಾಸನಾವು ದೇವರನ್ನು ಸೇರಲು ಇರುವ ಒಂದು ಮಾರ್ಗವಾಗಿದೆ ಎಂದರು, ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖಾ, ಗೌರಿ ಪಣಿಕ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಮೇಘನಾ ಪಾಣಾಜೆ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹನುಮಗಿರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ
ಸಾಕೇತ ಸಾಮ್ರಾಜ್ಞೆ’ ಎಂಬ ಯಕ್ಷಗಾನ ಪ್ರದರ್ಶನದ ಮೂಲಕ ಮೂರು ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಲಾ ಸಂಭ್ರಮ ಸಂಪನ್ನಗೊಂಡಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸಹಿತ ನೂರಾರು ಮಂದಿ ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು.