ನೂರಾರು ಮಂದಿಯಿಂದ ಹಾರಾರ್ಪಣೆ, ಅಶ್ರುತರ್ಪಣೆ
ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಕಳೆದ 33 ವರ್ಷಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿ ಗಳಿಸಿಕೊಂಡಿದ್ದ ಒಳಮೊಗ್ರು ಗ್ರಾಮದ ಶಾಂತಿವನ ನಿವಾಸಿ ಚಂದ್ರಕಾಂತ್‌ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.೨೫ ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಮೃತದೇಹದ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ಫೆ.೨೬ ರಂದು ಬೆಳಿಗ್ಗೆ ವ್ಯವಸ್ಥೆ ಮಾಡಲಾಗಿತ್ತು.

ಮೃತದೇಹವು ಕುಂಬ್ರ ಕಟ್ಟೆಯ ಬಳಿ ತಲುಪುತ್ತಿದ್ದಂತೆ ನೂರಾರು ಮಂದಿ ಆಗಮಿಸಿ ಮೃತದೇಹಕ್ಕೆ ಹಾರಾರ್ಪಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಸಾಲುಗಟ್ಟಿ ನಿಂತು ಮೃತದೇಹಕ್ಕೆ ಹಾರಾರ್ಪಣೆ ಮಾಡುತ್ತಿದ್ದಂತೆ ಎಲ್ಲರ ಕಣ್ಣುಗಳು ಒದ್ದೆಯಾಗಿದ್ದವು. ಸಾರ್ವಜನಿಕರ ಕಣ್ಣುಗಳಲ್ಲಿ ಹರಿಯುತ್ತಿದ್ದ ಕಣ್ಣೀರು ಚಂದ್ರಕಾಂತ್‌ರವರ ವ್ಯಕ್ತಿತ್ವ ಮತ್ತು ಅವರು ಈ ಸಮಾಜಕ್ಕೆ ಕೊಟ್ಟ ಪ್ರೀತಿ, ಗೌರವವನ್ನು ತೋರಿಸುತ್ತಿತ್ತು.

ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಕುಂಬ್ರ ಕೆಪಿಎಸ್ ಶಾಲಾ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್, ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ಸಾರೆಪುಣಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಪರ್ಪುಂಜ ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ ಸೇರಿದಂತೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ವಿವಿಧ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜ್ ಶಿಕ್ಷಕರು, ಸಾರ್ವಜನಿಕರು ಸೇರಿದಂತೆ ನೂರಾರು ಮಂದಿ ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆದರು.
ಕುಂಬ್ರದಿಂದ ಮೃತದೇಹವನ್ನು ಅವರ ಮನೆ ಶಾಂತಿವನಕ್ಕೆ ತಂದು ಬಳಿಕ ಅಲ್ಲಿ ಕುಟುಂಬಸ್ಥರ, ಬಂಧುಮಿತ್ರರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಮೂರ್ತೆದಾರರ ಸೇವಾ ಸಹಕಾರಿ ಸಂಘದಿಂದ ಹಾರಾರ್ಪಣೆ
ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿರುವ ಸಂಘದ ಕಛೇರಿ ಆವರಣದಲ್ಲಿ ಚಂದ್ರಕಾಂತ್‌ರವರ ಮೃತದೇಹದ ಅಂತಿಮ ದರ್ಶನದೊಂದಿಗೆ ಹಾರಾರ್ಪಾಣೆ ಮಾಡಲಾಯಿತು. ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ.ನಾರಾಯಣ್‌ರವರು ಮಾತನಾಡಿ, ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಾ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದ ಚಂದ್ರಕಾಂತರವರ ಅಗಲಿಗೆ ಅಪಾರ ನೋವು ತಂದಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿ ಅಂತಿಮ ನಮನ ಸಲ್ಲಿಸಿದರು. ಸಂಘದ ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗದವರು ಹಾರಾರ್ಪಾಣೆ ಮಾಡುವ ಮೂಲಕ ಅಂತಿಮ ನಮನ ಸಲ್ಲಿಸಿದರು.
ಕುಂಬ್ರ ವರ್ತಕರ ಸಂಘದಿಂದ ಅಂತಿಮ ನಮನ
ಕಳೆದ ೨೧ ವರ್ಷಗಳಿಂದ ಕುಂಬ್ರ ವರ್ತಕರ ಸಂಘದ ಗೌರವ ಸಲಹೆಗಾರರಾಗಿದ್ದ ಚಂದ್ರಕಾಂತ್‌ರವರು ಓರ್ವ ಸಂಘ ಜೀವಿಯಾಗಿದ್ದರು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಅವರ ಅಗಲಿಕೆ ನಮಗೆಲ್ಲರಿಗೂ ನೋವು ತಂದಿದೆ. ಅಗಲಿದ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈಯವರು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ ಹಾಗೂ ಪದಾಧಿಕಾರಿಗಳು ಹಾರಾರ್ಪಾಣೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.
ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂತಾಪ ಸೂಚನೆ
ಚಂದ್ರಕಾಂತ್ ಶಾಂತಿವನರವರು ಕುಂಬ್ರ ವರ್ತಕರ ಸಂಘದ ಗೌರವ ಸಲಹೆಗಾರರಾಗಿ ಕಳೆದ ೨೧ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸಂಘದ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಹಕಾರ ನೀಡುತ್ತಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಕೋರುವ ಸಲುವಾಗಿ ಚಂದ್ರಕಾಂತ್‌ರವರ ಮೃತದೇಹ ಕುಂಬ್ರ ತಲುಪುತ್ತಿದ್ದಂತೆ ವರ್ತಕರ ತಮ್ಮ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿ ಅಂತಿಮ ದರ್ಶನ ಪಡೆದರು. ಸುಮಾರು ಅರ್ಧ ಗಂಟೆಗಳ ಕಾಲ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಸಂತಾಪ ಸೂಚಿಸಿದರು. ಕುಂಬ್ರ ಸ್ನೇಹ ಸಾಗರ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವ ಸಲಹೆಗಾರರೂ ಆಗಿದ್ದ ಚಂದ್ರಕಾಂತ್‌ರವರ ಗೌರವಾರ್ಥ ಆಟೋ ರಿಕ್ಷಾ ಚಾಲಕರ ಮಾಲಕರು ೧ ಗಂಟೆ ರಿಕ್ಷಾ ತಿರುಗಿಸಿ ಇಟ್ಟು ಸಂತಾಪ ಸೂಚಿಸಿದರು.