
ಆಲಂಕಾರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೂವಿನ ಚಟ್ಟಿ ಹಾಗೂ ಇತರೇ ಸೊತ್ತುಗಳನ್ನು ವಿದ್ಯಾರ್ಥಿಗಳೇ ಪುಡಿಗೈದು ವಿಕೃತಿ ಮೆರೆದ ಘಟನೆ ಫೆ.26ರಂದು ಮಹಾಶಿವರಾತ್ರಿಯಂದು ಹಗಲು ವೇಳೆಯಲ್ಲೇ ನಡೆದಿದೆ.

ಶಾಲೆಯ ಹೂವಿನ ಚಟ್ಟಿ, ಹೂವಿನ ಗಿಡ, ವಾಲಿಬಾಲ್ ನೆಟ್ ಹಾಳು ಗೆಡವಲಾಗಿದೆ. ಕಸದ ತೊಟ್ಟಿಯಲ್ಲಿದ್ದ ಕಸವನ್ನು ಚೆಲ್ಲಿ, ಪಪ್ಪಾಯ ಗಿಡವನ್ನು ಮುರಿದು ಹಾಕಲಾಗಿದೆ. ಶಾಲಾ ನೋಟೀಸ್ ಬೋರ್ಡ್‌ಗೆ ಗೋಣಿ ಚೀಲ ತಳ್ಳಲಾಗಿದೆ.

ಶಾಲೆಯ ಆವರಣದಲ್ಲಿನ ಬಾಳೆಗಿಡದಲ್ಲಿದ್ದ ಗೊನೆಯನ್ನು ಕಡಿದು ತಂದು ಶಾಲಾ ಆವರಣದಲ್ಲಿ ಹಾಕಿ, ಬಾಳೆಕಾಯಿಗಳನ್ನು ಚೆಲ್ಲಾಪಿಲ್ಲಿಯಾಗಿ ಹಾಕಲಾಗಿದೆ. ಶೌಚಾಲಯದ ಟ್ಯಾಪ್ ಸಹ ಮುರಿದು ಹಾಕಿದ್ದಾರೆ. ರಜಾ ದಿನವಾದರೂ ಶಾಲಾ ಮುಖ್ಯಶಿಕ್ಷಕರು ಮಧ್ಯಾಹ್ನದ ತನಕ ಶಾಲೆಯಲ್ಲಿದ್ದು ನಂತರ ಕಾರ್ಯ ನಿಮಿತ್ತ ಪುತ್ತೂರಿಗೆ ತೆರಳಿದ್ದರು.
ಆ ಬಳಿಕ ಈ ಕೃತ್ಯ ನಡೆದಿದ್ದು ಇದನ್ನು ಗಮನಿಸಿದ ಸ್ಥಳೀಯರು ಮುಖ್ಯೋಪಾಧ್ಯಾಯರ ಮೊಬೈಲ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾರು ಮತ್ತೆ ಶಾಲೆಗೆ ಬಂದಿದ್ದು ಈ ವೇಳೆ ಶಾಲೆಯ ಆವರಣದಲ್ಲಿದ್ದ ಸ್ಥಳೀಯ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದು ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ಮುಖ್ಯಶಿಕ್ಷಕರ ಕೈಗೆ ಸಿಕ್ಕಿಬಿದ್ದಿದ್ದು ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಊರವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.