ನಿವೃತ್ತಿ ಹೊಂದಿದ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್‌ರವರಿಗೆ ವಿದಾಯ ಸಮಾರಂಭ

0

ನಿಸ್ವಾರ್ಥ ಸೇವೆಗೆ ಭಗವಂತನು ಆಶೀರ್ವಾದ ನೀಡಲಿ-ಲಾರೆನ್ಸ್ ಮಸ್ಕರೇನಸ್

ಪುತ್ತೂರು: ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಗಣಿತ/ವಿಜ್ಞಾನ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇನಾಸ್ ಗೊನ್ಸಾಲ್ವಿಸ್‌ರವರಿಗೆ ವಿದಾಯ ಸಮಾರಂಭ ಏರ್ಪಡಿಸಲಾಯಿತು.


ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಶಿಕ್ಷಕರಾದ ಇನಾಸ್ ಗೊನ್ಸಾಲ್ವಿಸ್‌ರವರು ನಮ್ಮ ಶಾಲೆಯಲ್ಲಿ 36 ವರ್ಷಗಳ ಕಾಲ ಅವಿರತವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಭಗವಂತನು ಆಶೀರ್ವಾದ ನೀಡಲಿ ಎಂದು ಹಾರೈಸಿದರು. ರಕ್ಷಕ-ಶಿಕ್ಷಕ ಸಂಘದ ಉಪಾಧಕ್ಷ ಪಿ.ಎಮ್ ಅಶ್ರಫ್ ಮಾತನಾಡಿ, ಶುಭಹಾರೈಸಿ ಸನ್ಮಾನಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಇವಾನ್ ಮಸ್ಕರೇನ್ಹಸ್ ಮಾತನಾಡಿ ಶುಭಹಾರೈಸಿದರು.

ಸನ್ಮಾನ:
ನಿವೃತ್ತಿ ಹೊಂದಿದ ಇನಾಸ್ ಗೊನ್ಸಾಲ್ವಿಸ್‌ರವರಿಗೆ ವೇದಿಕೆಯಲ್ಲಿರುವ ಗಣ್ಯರು ಶಾಲು ಹೊದಿಸಿ, ಸನ್ಮಾನ ಪತ್ರ, ಫಲಪುಷ್ಪ ಹಾಗೂ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ- ಶಿಕ್ಷಕೇತರ ವೃಂದದ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ನಿವೃತ್ತಿ ಹೊಂದಿದ ಶಿಕ್ಷಕರಿಗೆ ಅಭಿನಂದನಾ ಗೀತೆಯನ್ನು ಹಾಡಿ, ಹೂ ನೀಡಿ ಶುಭಾಶಯ ಕೋರಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಾಲಾ ಮುಖ್ಯ ಗುರುಗಳು, ಎಲ್ಲಾ ನಿವೃತ್ತ ಹಾಗೂ ವರ್ಗಾವಣೆಗೊಂಡ ಶಿಕ್ಷಕರು, ಆಹ್ವಾನಿತರು ಇನಾಸ್ ಗೊನ್ಸಾಲ್ವಿಸ್‌ರವರಿಗೆ ಹೂ ನೀಡಿ ಸನ್ಮಾನಿಸಿದರು.


ನಿವೃತ್ತಿ ಹೊಂದಿ ಬೀಳ್ಕೊಡಲ್ಪಟ್ಟ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ಮಾತನಾಡಿ, 36 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆಯನ್ನು ಮಾಡಲು ಅವಕಾಶ ನೀಡಿದ ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನಗೆ ಈ ವೃತ್ತಿಯನ್ನು ಮಾಡಲು ಅವಕಾಶ ನೀಡಿದ ಕಥೊಲಿಕ್ ಶಿಕ್ಷಣ ಮಂಡಳಿ ಅಧ್ಯಕ್ಷ ಬಿಷಪ್ ಸ್ವಾಮಿಗಳಿಗೆ, ಕಾರ್ಯದರ್ಶಿಗಳಿಗೆ, ಸಂಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ವಂದನೆ ಸಲ್ಲಿಸುತ್ತೇನೆ ಎಂದರು. ನಮ್ಮ ಶಾಲೆಯಲ್ಲಿ ಸಹೋದ್ಯೋಗಿ ಬಂಧುಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಕಳೆದ ಕ್ಷಣಗಳನ್ನು ಬದುಕಿನುದ್ದಕ್ಕೂ ಸ್ಮರಿಸುತ್ತೇನೆ. ನನ್ನ ವಿದ್ಯಾರ್ಥಿ ಬಳಗದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿ ಶುಭಹಾರೈಸುತ್ತೇನೆ ಎಂದು ಹೇಳಿದ ಅವರು ಶಾಲಾ ದತ್ತಿನಿಧಿ ಬಹುಮಾನಕ್ಕೆ ತಮ್ಮ ವತಿಯಿಂದ ಬಹುಮಾನದ ಮೊತ್ತವನ್ನು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು.

ಇನಾಸ್ ಗೊನ್ಸಾಲ್ವಿಸ್‌ರವರ ಪತ್ನಿ ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿ ಕಾರ್ಮಿನ್ ಪಾಸ್, ರಕ್ಷಕ-ಶಿಕ್ಷಕ ಸಂಘದ ಉಪಾಧಕ್ಷ ಪಿ.ಎಮ್ ಅಶ್ರಫ್, ಹಾಗೂ ಶಾಲಾ ನಾಯಕಿ ಕುಮಾರಿ ಸಮೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅನೀಶ ಸೋಫಿಯ ಡಿಸಿಲ್ವ ಇನಾಸ್ ಗೊನ್ಸಾಲ್ವಿಸ್‌ರವರ ಸನ್ಮಾನ ಪತ್ರ ವಾಚಿಸಿದರು. ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ ಸ್ವಾಗತಿಸಿದರು. ಶಿಕ್ಷಕಿ ಲೆನಿಟ ಮೊರಾಸ್ ವಂದಿಸಿದರು. ಶಿಕ್ಷಕಿ ರೂಪಾ ಮರಿಯ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಇನಾಸ್ ಗೊನ್ಸಾಲ್ವಿಸ್‌ರವರ ಪುತ್ರಿ ಕ್ವೀನಿ ಗೊನ್ಸಾಲ್ವಿಸ್, ನಿವೃತ್ತ ಶಿಕ್ಷಕರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ವರ್ಗಾವಣೆಗೊಂಡ ಶಿಕ್ಷಕರು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here