‘ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್’ ಸಾಧನೆಗೈದ ಪುತ್ತೂರು ಮೂಲದ ತಾಯಿ -ಮಗ

0

ಪುತ್ತೂರು: ವಿಶ್ವ ಕನ್ನಡ ಕಲಾ ಸಂಸ್ಥೆ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಇವರ ಜಂಟಿ ಆಶ್ರಯದಲ್ಲಿ ಫೆ.23ರಂದು ಬೆಂಗಳೂರಿನಲ್ಲಿ ನಡೆದ ಆರನೇ ರಾಜ್ಯ ಮಟ್ಟದ ಕನ್ನಡ ಕವಿಗಳ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಪುತ್ತೂರು ಮೂಲದವರಾದ ಚಿಕ್ಕ ಮುಡ್ನೂರು, ಶಾಂತಿನಗರ ನಿವಾಸಿ ನೂತನ ಪ್ರಸಾದ್ ಹಾಗೂ ಅವರ ಪುತ್ರ ಮಾ| ಅನುಷ್ ಕೃಷ್ಣ’ ನ ಕವನ ಸೇರ್ಪಡೆಯಾಗಿರುತ್ತದೆ.



ಅನುಷ್ ಕೃಷ್ಣ ಎ.ಎನ್ ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಆರನೇಯ ತರಗತಿಯಲ್ಲಿ ಕಲಿಯುತ್ತಿದ್ದು ಶಾಸ್ತ್ರೀಯ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ನಾಲ್ಕನೇ ತರಗತಿಯಿಂದ ಒಂದಿಷ್ಟು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವನಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಪಡೆದಿರುತ್ತಾನೆ. ಎಳವೆಯಿಂದಲೇ ತನ್ನ ಬಿಡುವಿನ ವೇಳೆಯಲ್ಲಿ ಕಥೆ ಪುಸ್ತಕ ಓದುವುದು, ಕವನ ಬರೆಯುವುದು, ಕಥೆ ಬರೆಯುವುದು ಇವನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿದೆ. ಪ್ರಸ್ತುತ ಕವನ ಸಂಕಲನ ‘ಕೃಷ್ಣ ಲಹರಿ’ ಎಂಬುದು ಇವನ ಚೊಚ್ಚಲ ಕವನ ಸಂಕಲನವಾಗಿದೆ.

ಮಗನ ಸಾಹಿತ್ಯ ಕೃಷಿಗೆ ಪ್ರೋತ್ಸಾಹಿಸುವ ತಾಯಿ ನೂತನ ಪ್ರಸಾದ್ ಇವರು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವುದಲ್ಲದೆ, ಮನೋವೈದ್ಯಕೀಯ ಆಪ್ತ ಸಮಾಲೋಚಕಿ ಆಗಿರುತ್ತಾರೆ.
ತಮ್ಮ ಬಿಡುವಿನ ವೇಳೆಯನ್ನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ಇವರ ಪ್ರವೃತ್ತಿಯಾಗಿದೆ. ಇವರು ಸಾಕಷ್ಟು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವುದಲ್ಲದೆ ಒಂದಿಷ್ಟು ಯುವ ಮನಸುಗಳಿಗೆ ಮಾರ್ಗದರ್ಶಕರಾಗಿರುತ್ತಾರೆ. ಪತಿ ವಿಷ್ಣುಪ್ರಸಾದ್ ವಿ.ಭಟ್ ಹಾಗೂ ಮಾತೃಶ್ರೀಯವರಾದ ಸುಗುಣ .ಕೆ. ಮೂರ್ತಿ ಇವರು ತಮ್ಮ ಬರವಣಿಗೆಯ ಸ್ಪೂರ್ತಿಗೆ ಘನವಾದ ಶಕ್ತಿ ಎಂಬುದನ್ನು ಸದಾ ಸ್ಮರಿಸಿಕೊಳ್ಳುತ್ತಾರೆ.
ಇವರ ಹಿರಿ ಮಗ ಅಖಿಲೇಶ್ ವಿ ಭಟ್ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದು, ರಾಜ್ಯಮಟ್ಟದ ಯೋಗಪಟು ಕೂಡ.

LEAVE A REPLY

Please enter your comment!
Please enter your name here