ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಚಂದ್ರಕಾಂತ ಶಾಂತಿವನರವರ ಇತ್ತೀಚಿಗೆ ನಿಧನರಾಗಿದ್ದು ಅವರಿಗೆ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೇತೃತ್ವದಲ್ಲಿ ವರ್ತಕರ ಸಂಘ ಕುಂಬ್ರ, ಶ್ರೀರಾಮ ಭಜನಾ ಮಂದಿರ ಕುಂಬ್ರ, ಸ್ಪಂದನಾ ಸೇವಾ ಬಳಗ ಕುಂಬ್ರ, ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘ ಕುಂಬ್ರ ಈ ಎಲ್ಲಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆಯು ಮಾ.7ರಂದು ಕುಂಬ್ರ ಅಕ್ಷಯ ಆರ್ಕೇಡ್‌ನ ಮಿನಿ ಸಭಾಂಗಣದಲ್ಲಿ ನಡೆಯಿತು.
ಆರಂಭದಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಚಂದ್ರಕಾಂತ ಶಾಂತಿವನರವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್‌ರವರು ಮಾತನಾಡಿ, ಚಂದ್ರಕಾಂತ ಶಾಂತಿವನರವರು ಕಳೆದ 3 ದಶಕಗಳಿಂದಲೂ ಹೆಚ್ಚು ಕಾಲ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ವವ್ಯ ನಿರ್ವಹಿಸಿ ಸಂಘದ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಓರ್ವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವ್ಯಕ್ತಿಯಾಗಿದ್ದರು. ಬಹಳಷ್ಟು ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿದ್ದ ಚಂದ್ರಕಾಂತರವರು ಧರ್ಮ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ಸಂಘಕ್ಕೆ ಹಾಗೇ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಹೇಳಿದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘದ ಬೆಳವಣಿಗೆಗೆ ತನ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಿದ್ದಾರೆ. ಇದಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ನಮಗೆಲ್ಲರಿಗೂ ಅತೀವ ದುಃಖ ತಂದಿದೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಅವರ ಆತ್ಮಕ್ಕೆ ಶ್ರೀ ದೇವರು ಚಿರಶಾಂತಿ ಕರುಣಿಸಲಿ ಎಂದು ಹೇಳಿದರು. ಕುಂಬ್ರ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಎಲ್ಲರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಬೆರೆಯುತ್ತಿದ್ದ ವ್ಯಕ್ತಿ ಚಂದ್ರಕಾಂತ ಶಾಂತಿವನರಾಗಿದ್ದರು. ಅವರನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬರು ಶ್ರಮ ಪಟ್ಟಿದ್ದೇವೆ ಆದರೆ ಭಗವಂತನ ನಿರ್ಣಯದ ಮುಂದೆ ಅದು ಸಾಧ್ಯವಾಗಲಿಲ್ಲ ಅಗಲಿಕ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.
ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ಮಾತನಾಡಿ, ಕಳೆದ 21 ವರ್ಷಗಳಿಂದ ಸಂಘದ ಗೌರವ ಸಲಹೆಗಾರರಾಗಿ ಸಂಘವನ್ನು ಮುನ್ನಡೆಸಿದ್ದಾರೆ. ತನ್ನ ನೇರ ನಡೆನುಡಿ ಹಾಗೂ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಹೇಳಿದರು. ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿಯವರು ಮಾತನಾಡಿ, ಚಂದ್ರಕಾಂತ್‌ರವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಹೇಳಿದರು. ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರರವರು ಮಾತನಾಡಿ, ಚಂದ್ರಕಾಂತ್‌ರವರು ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಮುಖಿ ಚಿಂತನೆ ಹೊಂದಿದ ವ್ಯಕ್ತಿಯಾಗಿದ್ದರು ಎಂದು ಹೇಳಿ ನುಡಿ ನಮನ ಸಲ್ಲಿಸಿದರು. ಸ್ಪಂದನಾ ಸೇವಾ ಬಳಗದ ತಿಲಕ್ ರೈ ಕುತ್ಯಾಡಿ, ಕುಂಬ್ರ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಪುರಂದರ ರೈ ಕುಯ್ಯಾರು, ಪತ್ರಕರ್ತ ಸಿಶೇ ಕಜೆಮಾರ್‌ರವರು ಚಂದ್ರಕಾಂತ ಶಾಂತಿವನರವರ ಬಗ್ಗೆ ಮಾತುಗಳನ್ನಾಡಿ ನುಡಿ ನಮನ ಸಲ್ಲಿಸಿದರು.
ಮೂರ್ತೆದಾರರ ಸೇವಾ ಸಹಕಾರಿ ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಕಂಪ ಸ್ವಾಗತಿಸಿ, ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ ವಂದಿಸಿದರು. ಸಭೆಯಲ್ಲಿ ಚಂದ್ರಕಾಂತ ಶಾಂತಿವನರವರ ತಂದೆ ನಾರಾಯಣ ಪೂಜಾರಿ ಶಾಂತಿವನ ಹಾಗೇ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳು, ಸದಸ್ಯರುಗಳು, ಕುಂಬ್ರ ವರ್ತಕರ ಸಂಘ, ಶ್ರೀರಾಮ ಭಜನಾ ಮಂದಿರ ಕುಂಬ್ರ, ಸ್ಪಂದನಾ ಸೇವಾ ಬಳಗ ಕುಂಬ್ರ ಹಾಗೂ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘ ಕುಂಬ್ರ ಇದರ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು ಸಹಕರಿಸಿದ್ದರು.
ಇಂದು ಉತ್ತರಕ್ರಿಯಾಧಿ ಕಾರ್ಯಕ್ರಮ
ಚಂದ್ರಕಾಂತ ಶಾಂತಿವನರವರ ಆತ್ಮ ಸದ್ಗತಿಗಾಗಿ ಉತ್ತರಕ್ರಿಯಾಧಿ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮಾ.8ರಂದು ಮಧ್ಯಾಹ್ನ ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ನಿತೀಶ್ ಶಾಂತಿವನರವರು ತಿಳಿಸಿ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸುವಂತೆ ಕೇಳಿಕೊಂಡರು.