ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ವತಿಯಿಂದ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಾಗುತ್ತಿದ್ದು ಘಟಕದ ಗೌರವಾಧ್ಯಕ್ಷರಾದ ಸವಣೂರು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆಯು ಮಾ.17 ರಂದು ದರ್ಬೆ ಬೈಪಾಸ್ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ನೆರವೇರಿತು.
ಈ ಬಾರಿ ಎ.10ಕ್ಕೆ ಯಕ್ಷಗಾನ:
ವರ್ಷಂಪ್ರತಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕವು ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆರವರಿಂದ ಯಕ್ಷಗಾನ ಪ್ರಸಂಗ ಪ್ರದರ್ಶನವಾಗುತ್ತಿದ್ದು, ಕಳೆದ ವರ್ಷ ತ್ರಿಜನ್ಮ ಮೋಕ್ಷ ಎಂಬ ಪೌರಾಣಿಕ ಪುಣ್ಯ ಕಥಾನಕವನ್ನು ಆಡಿ ತೋರಿಸಲಾಗಿತ್ತು. ಪ್ರಸ್ತುತ ವರ್ಷವೂ ಯಕ್ಷಗಾನ ಪ್ರಸಂಗವನ್ನು ನಡೆಸಲು ಘಟಕವು ಉದ್ಧೇಶಿಸಿದ್ದು ಈ ವರ್ಷ ಎ.10ಕ್ಕೆ ಜಾತ್ರೋತ್ಸವದ ಮೊದಲ ದಿನದಂದು ಯಕ್ಷಗಾನ ಪ್ರಸಂಗ ಆಡಿ ತೋರಿಸಲಾಗುತ್ತಿದೆ. ಪ್ರಸ್ತುತ ವರ್ಷ ಯಾವ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿರವರಲ್ಲಿ ವಿಚಾರಿಸಿಕೊಂಡು ಮುಂದಿನ ದಿನಗಳಲ್ಲಿ ಯಕ್ಷಗಾನದ ಹೆಸರನ್ನು ತಿಳಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
2 ಕಡೆ ಆಮಂತ್ರಣ ಪತ್ರಿಕೆ ಬಿಡುಗಡೆ:
ಈ ಬಾರಿಯ ಯಕ್ಷಗಾನ ಪ್ರಸಂಗದ ಹೆಸರು ಅಂತಿಮವಾದೊಡನೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗುವುದು ಮತ್ತು ಕಳೆದ ವರ್ಷದಂತೆ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ಸಮ್ಮುಖದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಉಪಸ್ಥಿತಿಯಲ್ಲಿ ಬೆಳಿಗ್ಗೆ, ಸಂಜೆ ದರ್ಬೆ ಬೈಪಾಸ್ ಅಶ್ವಿನಿ ಹೋಟೆಲ್ ಸಭಾಂಗಣದಲ್ಲಿ ಎರಡು ಕಡೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿರವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಉದಯ ವೆಂಕಟೇಶ್, ಜಯಕುಮಾರ್ ರೈ ಎಂ.ಆರ್, ಎ.ಜೆ ರೈ, ಗಣೇಶ್ ರೈ ಡಿಂಬ್ರಿ, ರಾಕೇಶ್ ರೈ ಕೆಡೆಂಜಿ, ಡಾ.ರಾಜೇಶ್ ಬೆಜ್ಜಂಗಳ, ಪ್ರಶಾಂತ್ ರೈ ಮುಂಡಾಳಗುತ್ತು, ಎಂ.ಜಿ ರೈ, ಪ್ರೊ|ಸುಬ್ಬಪ್ಪ ಕೈಕಂಬ, ಎಂ.ಸಂಕಪ್ಪ ರೈ, ಹರಿಣಾಕ್ಷಿ ಶೆಟ್ಟಿ, ಭಾರತಿ ರೈ ಅರಿಯಡ್ಕ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆ ನೀಡಿದರು. ಕೋಶಾಧಿಕಾರಿ ದತ್ತಾತ್ರೇಯ ರಾವ್ ಲೆಕ್ಕಪತ್ರ ಮಂಡಿಸಿ, ಕಾರ್ಯದರ್ಶಿ ಚಂದ್ರಹಾಸ ರೈ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ..
ಕಳೆದ ವರ್ಷ ಘಟಕದ ವತಿಯಿಂದ ನಡೆದ ಯಕ್ಷಗಾನ ಪ್ರಸಂಗವು ಪ್ರೇಕ್ಷಕರ ಸೇರುವಿಕೆಯಿಂದ ಯಶಸ್ವಿಯಾಗಿತ್ತು ಮಾತ್ರವಲ್ಲ ಘಟಕದ ಸದಸ್ಯರ ಪ್ರೋತ್ಸಾಹವೂ ಅತೀ ಮುಖ್ಯವಾಗಿತ್ತು. ಪಟ್ಲ ಫೌಂಡೇಶನ್ ಸಂಸ್ಥೆಯು ಅಶಕ್ತ ಕಲಾವಿದರ ನೆರವಿಗೋಸ್ಕರ ಸುಮಾರು ರೂ.15 ಕೋಟಿ ಮೊತ್ತದ ಫಂಡ್ ರೈಸಿಂಗ್ ಮಾಡಲು ಉದ್ಧೇಶಿಸಲಾಗಿದ್ದು, ಪುತ್ತೂರು ಘಟಕದ ವತಿಯಿಂದ ಪಟ್ಲ ಫೌಂಡೇಶನ್‌ಗೆ ರೂ.50 ಸಾವಿರ ನೀಡಿದ್ದು ಈ ಬಾರಿ ರೂ.1 ಲಕ್ಷ ನೀಡಲು ಚಿಂತನೆ ನಡೆಸಿದೆ. ಎಂದಿನಂತೆ ಘಟಕದ ಸರ್ವ ಸದಸ್ಯರ ಪ್ರೋತ್ಸಾಹ ಈ ಬಾರಿಯೂ ಇರಲಿ, ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ತಲುಪಿಸಲಾಗುವುದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
-ದೇರ್ಲ ಕರುಣಾಕರ್ ರೈ, ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕ
ಮೌನ ಪ್ರಾರ್ಥನೆ..
ಇತ್ತೀಚೆಗೆ ಅಗಲಿದ ಪಟ್ಲ ಫೌಂಡೇಶನ್ ಇದರ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಪಡುಮಲೆರವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.