ಮುಕ್ಕೂರು : ಕಾರಂತಜ್ಜನಿಗೊಂದು ಪತ್ರ ಚಲನಚಿತ್ರ ಪ್ರದರ್ಶನ

0

ಪುತ್ತೂರು : ಕಲಾತ್ಮಕ ಸಿನೆಮಾಗಳನ್ನು ವೀಕ್ಷಿಸುವುದರಿಂದ ಬೌದ್ಧಿಕ ವಿಕಸನಕ್ಕೆ ಕಾರಣವಾಗುತ್ತದೆ. ಮೇರು ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಸಾಹಿತ್ಯ ಲೋಕವನ್ನು ತೆರೆದ ಕಣ್ಣಿನಿಂದ ನೋಡಿದಾಗ ಅದು ನಮ್ಮ ಬದುಕಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಸುಳ್ಯ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಹೇಳಿದರು.

ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಇದರ ವತಿಯಿಂದ ಸವಣೂರು ಸಮೀಪದ ಮುಕ್ಕೂರು ಸ.ಹಿ.ಪ್ರಾ.ಶಾಲೆಯಲ್ಲಿ ಮಾ.18 ರಂದು ನಡೆದ ಕಾರಂತಜ್ಜನಿಗೊಂದು ಪತ್ರ ಚಲನಚಿತ್ರ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು. ಬೌದ್ದಿಕ ವಿಕಸನಸಲ್ಲಿ ಮೂರು ಹಂತಗಳಿವೆ. ಓದುವಿಕೆ, ಕೇಳುವಿಕೆ, ನೋಡುವಿಕೆ. ಇವು ಮೂರು ಹಂತಗಳು ಒಂದೊಂದು ಪರಿಣಾಮವನ್ನು ಸೃಷ್ಟಿಸುತ್ತಾ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ ಎಂದರು.

ನಮ್ಮ ಇಂದ್ರಿಯಗಳನ್ನು ನಾವು ಯಾವ ಚಟುವಟಿಕೆಗಳಿಗೆ ಹೆಚ್ಚು ಬಳಸುತ್ತೇವೂ ಅಷ್ಟು ಬೌದ್ಧಿಕ ವಿಕಾಸಗೊಳುತ್ತದೆ. ಇದರಲ್ಲಿ ಒಳ್ಳೆಯ ಚಲನಚಿತ್ರ ವೀಕ್ಷಣೆಯು ಸೇರಿದೆ. ಸಿನೆಮಾಗಳಲ್ಲಿನ ಸಾಹಿತ್ಯ, ಸಂಭಾಷಣೆ, ಅಭಿನಯವೂ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕಾರಂತರಂತಹ ಮಹಾನ್ ಸಾಧಕ ವ್ಯಕ್ತಿಯ ಸಾಹಿತ್ಯ ಆಧಾರಿತ ಸಿನೆಮಾ ಮಕ್ಕಳ ಮನಸ್ಸನ್ನು ಅರಳಿಸಿ ಹೊಸ ಕನಸನ್ನು ಮೂಡಿಸಬಹುದು. ನೇಸರ ಯುವಕ ಮಂಡಲದ ಈ ಪ್ರಯತ್ನ ಮಾದರಿ ಎಂದು ಅಶ್ವಿನಿ ಕೋಡಿಬೈಲು ಹೇಳಿದರು.

ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಕೆ.ಶಿವರಾಮ ಕಾರಂತ ಅವರ ಸಾಹಿತ್ಯ ಕ್ಷೇತ್ರದ ಕರ್ಮಭೂಮಿ‌ ಪುತ್ತೂರಿನಲ್ಲಿನಿದೆ. ಅವರ ಹೆಸರಿನ‌ ಕಾಲೇಜು‌ ಪೆರುವಾಜೆ ಗ್ರಾಮದಲ್ಲಿ ಇದೆ. ಅವರ ಸಾಹಿತ್ಯ ಸಾಧನೆಯನ್ನು ಸ್ಮರಿಸುವ ಕಾರ್ಯದ ಜತೆಗೆ ಮಕ್ಕಳನ್ನು ಸದಭಿರುಚಿಯ ನೆಲೆಗೆ ಕೊಂಡೊಯ್ಯುವ ಕಾರ್ಯ ಚಲನಚಿತ್ರ ಪ್ರದರ್ಶನದ ಮೂಲಕ ಆಗಿದೆ ಎಂದರು.

ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ, ನೇಸರ ಯುವಕ ಮಂಡಲ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಕ್ಕಳಿಗೆ ಬೇಕಾಗಿರುವ ಉತ್ತಮ ಚಲನಚಿತ್ರಗಳನ್ನು ಪ್ರದರ್ಶಿಸಿದೆ ಎಂದರು.

ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಉಳ್ಳಾಲ್ತಿ ಭಕ್ತವೃಂದದ ಸದಸ್ಯ ತೇಜಸ್ವಿತ್ ಎ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಎಂಜಿನಿಯರ್ ನರಸಿಂಹ ತೇಜಸ್ವಿ, ಮುಕ್ಕೂರು ಶಾಲಾ ಹಿತಚಿಂತನ ಸಮಿತಿಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಪ್ರಾರ್ಥಿಸಿದರು. ಮುಖ್ಯಗುರು ಲತಾ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು.

LEAVE A REPLY

Please enter your comment!
Please enter your name here