ಉಪ್ಪಿನಂಗಡಿ: ಗಳಿಸಿದ ಸಂಪತ್ತನ್ನು ಸದ್ವಿನಿಯೋಗಗೊಳಿಸಿ ಬಹು ಉಪಯೋಗಿ ನಾರಾಯಣ ಆರ್ಕೇಡ್ ಅನ್ನು ನಿರ್ಮಿಸುವ ಮೂಲಕ ಊರಿನ ಅಭಿವೃದ್ಧಿಯಲ್ಲಿ ಸಹಕಾರಿಯಾಗಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ತಿಳಿಸಿದರು.
ಉಪ್ಪಿನಂಗಡಿಯಲ್ಲಿ ನಿರ್ಮಾಣವಾಗಿರುವ ನಾರಾಯಣ ಆರ್ಕೇಡ್ ಎಂಬ ವಾಣಿಜ್ಯ ಸಂಕೀರ್ಣವನ್ನು ಮಾ.17ರಂದು ಸಂಜೆ ಉದ್ಘಾಟಿಸಿ, ಅವರು ಆಶೀರ್ವಚನ ನೀಡುತ್ತಿದ್ದರು.
ಸುಂದರ ಸಭಾಂಗಣ, ಅದಕ್ಕೊಪ್ಪುವ ಹವಾನಿಯಂತ್ರಿತ ವಸತಿ ಗೃಹ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಹಲವಾರು ವಾಣಿಜ್ಯ ಮಳಿಗೆಗಳ ವಾಣಿಜ್ಯ ಸಂಕೀರ್ಣವೊಂದು ನಿರ್ಮಾಣವಾಗಿರುವುದು ಊರಿನ ಅಭಿವೃದ್ಧಿಯ ದ್ಯೋತಕವಾಗಿದೆ. ಈ ಮೂಲಕ ಎಂ.ಎಸ್. ಜ್ಯುವೆಲ್ಲರಿ ಸಂಸ್ಥೆಯ ಸುವರ್ಣಮಹೋತ್ಸವವನ್ನು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಸ್ಮರಣೀಯಗೊಳಿಸಿದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಜಿ.ಎಲ್. ಸಮೂಹ ಸಂಸ್ಥೆಗಳ ಜಿ.ಎಲ್. ಬಲರಾಮ ಆಚಾರ್ಯರವರು ಮಾತನಾಡಿ, ಉತ್ತರದ ಚಾರ್ ಧಾಮ್ ಯಾತ್ರಾ ಸ್ಥಳದಂತೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯಸ್ವಾಮಿ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಹಾಗೂ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಗಳು ಕೂಡಾ ದಕ್ಷಿಣದ ಚಾರ್ ಧಾಮ್ ನಂತಾಗಬೇಕು. ಅದಕ್ಕಾಗಿ ಪೂರಕ ಯೋಜನೆಗಳು ರೂಪುಗೊಳ್ಳುತ್ತಿರುವಂತೆಯೇ ಯಾತ್ರಾರ್ಥಿಗಳಿಗೆ ಉತ್ತಮವಾದ ವಸತಿ ಸೌಕರ್ಯವನ್ನು ಒಳಗೊಂಡ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆಯು ಉಪ್ಪಿನಂಗಡಿಯಲ್ಲಿ ಆಗಿರುವುದು ಪ್ರಶಂಸನೀಯ. ಸಂಪಾದಿಸಿದ ಹಣವನ್ನು ಉಳಿಸಿ ಅದನ್ನು ಉದ್ಯಮದ ಮೂಲಕ ಸಮಾಜಕ್ಕೆ ಅರ್ಪಿಸುವ ಮೂಲಕ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಕೈ ಜೋಡಿಸಿದಂತಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ ಮಾತನಾಡಿ, ಚಿನ್ನಾಭರಣ ವ್ಯವಹಾರದಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಜನಪ್ರಿಯವಾಗಿರುವ ಎಂ.ಎಸ್. ನಾರಾಯಣ ಜ್ಯುವೆಲ್ಲರ್ಸ್ ಸಂಸ್ಥೆಯ ಕೊಡುಗೆಯಾಗಿ ನಾರಾಯಣ ಆರ್ಕೇಡ್ ಬಹು ರೂಪದೊಂದಿಗೆ ಲೋಕಾರ್ಪಣೆಗೊಂಡಿರುವುದು ಸಂತಸ ಮೂಡಿಸಿದೆ. ಇದರಿಂದಾಗಿ ಈಗಾಗಲೇ ರಾಜ್ಯ ಹೊರ ರಾಜ್ಯಗಳಿಂದ ಭಕ್ತರನ್ನು ಸೆಳೆಯುತ್ತಿರುವ ಉಪ್ಪಿನಂಗಡಿಯಲ್ಲಿ ಯಾತ್ರಾರ್ಥಿಗಳಿಗೆ ಉತ್ತಮ ವಸತಿ ವ್ಯವಸ್ಥೆ ಲಭಿಸುವಂತಾಗಿದೆ ಎಂದರು.

ಸುಧರ್ಮಾಸಭಾಗೃಹಮ್ ಅನ್ನು ಉದ್ಘಾಟಿಸಿದ ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ರವರು, ಸೇವಾ – ಗುಣಮಟ್ಟ -ವಿಶ್ವಾಸಾರ್ಹತೆಯ ಪರಂಪರೆಯೊಂದಿಗೆ ಜನಮಾನಸದೊಂದಿಗೆ ಬೆರೆತ ಎಂ. ಎಸ್. ನಾರಾಯಣ ಜ್ಯುವೆಲ್ಲರ್ಸ್ ಸಂಸ್ಥೆಯ ಹೊಸ ಉದ್ಯಮ ಕ್ಷೇತ್ರ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತೆ ಬೆಳಗಲಿ ಎಂದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಕೂವೆಚ್ಚಾರ್ ಮನೆತನದ ಸುನಂದಾ ನಾರಾಯಣ, ಸುಧನ್ವ ಕೆ.ಎಂ., ಸುಮೇಧ ಕೆ.ಎಂ. ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಕೃಷ್ಣ ಎಂ.ಎನ್. ಸ್ವಾಗತಿಸಿದರು. ವಾಣಿ ಕೃಷ್ಣ ಪ್ರಸಾವಿಕ ನುಡಿಗಳನ್ನಾಡಿದರು. ಟಿ ನಾರಾಯಣ ಭಟ್ ರವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈತ್ರಿ ಪ್ರಾರ್ಥಿಸಿದರು. ಶ್ರೀಪತಿ ಆಚಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ರಾಧಾಕೃಷ್ಣ ಕೂವೆಚ್ಚಾರ್, ಕೃಷ್ಣಮೂರ್ತಿ, ಅನಂತರಾಯ ಕಿಣಿ, ಗೋಪಾಲಕೃಷ್ಣ ಗಾಣದಮೂಲೆ, ಚಂದ್ರಹಾಸ ಶೆಟ್ಟಿ, ಸೇಸಪ್ಪ ರೈ, ಡಾ. ಸುಪ್ರಿತ್ ಲೋಬೋ, ಡಾ. ನಿರಂಜನ್ ರೈ, ಎನ್ ಗೋಪಾಲ ಹೆಗ್ಡೆ, ಸುಂದರ ಗೌಡ, ಕೈಲಾರ್ ರಾಜಗೋಪಾಲ ಭಟ್, ಧನ್ಯಕುಮಾರ್ ರೈ, ಪ್ರಪುಲ್ಲಾ ಜೆ. ಶೆಟ್ಟಿ, ಪ್ರಶಾಂತ ಡಿಕೋಸ್ತ, ರಾಜೇಶ್ ರೈ, ಪ್ರತಾಪ್ ಪೆರಿಯಡ್ಕ, ಜಗದೀಶ್ ಶೆಟ್ಟಿ, ರಾಮಕೃಷ್ಣ ಮಲ್ಲಾರ, ವಜ್ರ ಜೈನ್, ನಾರಾಯಣ ಹೇರಳೆ, ಕರುಣಾಕರ ಸುವರ್ಣ, ಡಾ. ಯತೀಶ್ ಶೆಟ್ಟಿ, ಮುರಳೀಧರ್ ಬಳ್ಳಕ್ಕುರಾಯ, ಗುರುರಾಜ ಪಡ್ಡಿಲ್ಲಾಯ, ವಾಸುದೇವ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.