ಪುತ್ತೂರು, ಕಡಬದಲ್ಲಿ 4,926 ವಿದ್ಯಾರ್ಥಿಗಳು, 14 ಪರೀಕ್ಷಾ ಕೇಂದ್ರಗಳು
ಪುತ್ತೂರು:2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾ.21ರಿಂದ ಪ್ರಾರಂಭಗೊಳ್ಳಲಿದೆ. ಪುತ್ತೂರು ತಾಲೂಕಿನ 9 ಹಾಗೂ ಕಡಬ ತಾಲೂಕಿನ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಎರಡು ತಾಲೂಕುಗಳಲ್ಲಿ ಒಟ್ಟು 4,926 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್‌ರವರ ನೇತೃತ್ವದಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಿಗದಿ ಪಡಿಸಿದಂತೆ ಪರೀಕ್ಷೆಯ ಪ್ರಥಮ ದಿನವಾದ ಮಾ.21ರಂದು ಪ್ರಥಮ ಭಾಷೆ ಕನ್ನಡ, ಮಾ.24 ಗಣಿತ, ಮಾ.26 ದ್ವಿತೀಯ ಭಾಷೆ, ಮಾ.29 ಸಮಾಜ ವಿಜ್ಞಾನ, ಎ.2 ವಿಜ್ಞಾನ ಹಾಗೂ ಎ.4 ತೃತೀಯ ಭಾಷಾ ಪರೀಕ್ಷೆಗಳು ನಡೆಯಲಿದೆ.
4,926 ವಿದ್ಯಾರ್ಥಿಗಳು:
ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 2,582 ಹುಡುಗರು ಹಾಗೂ 2,344 ಹುಡುಗಿಯರು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳು 4,786, ಖಾಸಗಿ ವಿದ್ಯಾರ್ಥಿಗಳು 99 ಹಾಗೂ ಪುನರಾವರ್ತಿತ 51 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
14 ಪರೀಕ್ಷಾ ಕೇಂದ್ರಗಳು :
ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ 7, ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ 2, ಗ್ರಾಮಾಂತರ ಪ್ರದೇಶದಲ್ಲಿ 5 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ. ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗ, ಉಪ್ಪಿನಂಗಡಿ ಸಂತ ಮೇರಿಸ್ ಪ್ರೌಢಶಾಲೆ, ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಕುಂಬ್ರ ಕೆಪಿಎಸ್ ಸ್ಕೂಲ್, ಕಡಬ ತಾಲೂಕಿನ ಕಡಬ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗ, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಸವಣೂರು ವಿದ್ಯಾರಶ್ಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಶ್ರೀರಾಮಕುಂಜೇಶ್ವರ ಪ್ರೌಢಶಾಲೆ, ನೆಲ್ಯಾಡಿ ಸೈಂಟ್ ಜಾರ್ಜ್ ಪ್ರೌಢಶಾಲೆಗಳಲ್ಲಿ ತೆರೆಯಲಾಗಿರುವ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
9.30ಕ್ಕೆ ವಿದ್ಯಾರ್ಥಿಗಳು ಪರೀಕ್ಷ ಕೇಂದ್ರಗಳಲ್ಲಿರಬೇಕು:
ಪರೀಕ್ಷೆಗಳು ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಳ್ಳಲಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 9.30ರ ಒಳಗಾಗಿ ನಿಗದಿಪಡಿಸಲಾಗಿರುವ ಕೇಂದ್ರಗಳಲ್ಲಿ ಹಾಜರಿರಬೇಕು. 9.45ಕ್ಕೆ ಗಂಟೆ ಹೊಡೆಯಲಾಗುವುದು. 10 ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು ವಿದ್ಯಾರ್ಥಿಗಳಿಗೆ ಪ್ರಶ್ನಾಪತ್ರಿಕೆಗಳು ವಿತರಣೆಯಾಗಲಿದೆ.
ಅಽಕಾರಿಗಳ ತಂಡ:
ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಉಭಯ ತಾಲೂಕಿನಲ್ಲಿ 14 ಮಂದಿ ಮುಖ್ಯ ಅಽಕ್ಷಕರು, 14 ಮಂದಿ ಕಸ್ಟೋಡಿಯನ್‌ಗಳು, 5 ಮಂದಿ ರೂಟ್ ಅಽಕಾರಿಗಳು, 14 ಮಂದಿ ಸ್ಥಾನಿಕ ಜಾಗೃತ ಅಽಕಾರಿಗಳು, 14 ಮಂದಿ ಮೊಬೈಲ್ ಸ್ವಾಽನಾಽಕಾರಿಗಳು, 250 ಮಂದಿ ಕೊಠಡಿ ಮೇಲ್ವಿಚಾರಕರು, 14 ಮಂದಿ ಕಚೇರಿ ಸಹಾಯಕರು, 14 ಮಂದಿ ಡಿ ದರ್ಜೆ ಸಹಾಯಕರು ಜೊತೆಗೆ ಭದ್ರತೆಗಾಗಿ 14 ಪೊಲೀಸ್ ಸಿಬಂದಿಗಳು, 14 ಮಂದಿ ಆಶಾ ಕಾರ್ಯಕರ್ತೆಯರು ಈ ಬಾರಿಯ ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಹಲವು ಸೌಲಭ್ಯ:
ಪರೀಕ್ಷಾ ಕೇಂದ್ರಗಳ ಪ್ರತಿ ಕೇಂದ್ರದಲ್ಲಿ ಒಂದು ಟೇಬಲ್‌ನಲ್ಲಿ ತಲಾ ಎರಡು ವಿದ್ಯಾರ್ಥಿಗಳಂತೆ ಒಂದು ಕೊಠಡಿಯಲ್ಲಿ 24 ಮಂದಿ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಚೇತನವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ತೆರೆಯಲಾಗಿದೆ. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಹುಡಗ, ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಮೆಸ್ಕಾಂ, ಕೆಎಸ್‌ಆರ್‌ಟಿಸಿ, ತಹಶೀಲ್ದಾರ್, ಕಾರ್ಯನಿರ್ವಹಣಾಽಕಾರಿ, ಉಪ ಖಜಾನೆ ಪುತ್ತೂರು, ಪೊಲೀಸ್ ಇಲಾಖೆ ಇತ್ಯಾದಿ ಇಲಾಖೆಗಳ ಸಹಕಾರಕ್ಕಾಗಿ ಪತ್ರ ಬರೆಯಲಾಗಿದೆ.
ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್ ಸೌಲಭ್ಯ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಉಚಿತ ಬಸ್ ಸೌಲಭ್ಯವನ್ನು ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅನುಮತಿ ನೀಡಿದೆ. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.
ನಿಷೇಧಾಜ್ಞೆ ಜಾರಿ
ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 21ರಿಂದ ಎ.4ರವರೆಗೆ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ವಸ್ತ್ರ ಧರಿಸಬಾರದು. ಪರೀಕ್ಷಾ ಕೇಂದ್ರದಲ್ಲಿ ಫ್ರಿಸ್ಟಿಂಗ್ ನಡೆಸುವ ಸಿಬ್ಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ಸಂವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೊಳಗಾಗಬೇಕು. ಪರೀಕ್ಷೆಗೆ ಹಾಜರಾಗುವವರು ಹ್ಯಾಂಡ್ ಹೆಲ್ತ್ ಮೆಟಲ್ ಡಿಟೆಕ್ಟರ್ ತಪಾಸಣೆಗೆ ಒಳಗಾಗಬೇಕು. ಮೆಟಲ್ ವಾಟರ್ ಬಾಟಲ್ಸ್ ಅಥವಾ ನಾನ್ ಟ್ರಾನ್‌ಸ್ಪರೆಂಟ್ ವಾಟರ್ ಬಾಟಲ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್/ ಸೆಲ್ಯುಲರ್ ಫೋನ್, ಟ್ಯಾಬ್ಲೆಟ್, ಪೆನ್‌ಡ್ರೈವ್, ಬ್ಲೂಟೂತ್ ಡಿವೈಸ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್, ಕೈಚೀಲ, ಪರ್ಸ್, ನೋಟು, ಟಾರ್ಚ್, ರೆಕಾಡಿಂಗ್ ವಸ್ತುಗಳನ್ನೂ ಸೇರಿದಂತೆ ಇನ್ನಿತರ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಹಿಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡಬೇಕಾದುದು ಕಡ್ಡಾಯ. ಕರ್ನಾಟಕ ಲೋಕ ಸೇವಾ ಆಯೋಗ ತನ್ನ ಪರೀಕ್ಷೆಯ ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ತಿಳಿಸಿರುವ ವಸಸಂಹಿತೆಯೇ ಈ ಪರೀಕ್ಷೆಗೂ ಅನ್ವಯವಾಗಲಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವರ್ಷ ಶೇ.100 ಫಲಿತಾಂಶದ ಗುರಿ ಹಾಕಿ ಕೊಳ್ಳಲಾಗಿದೆ. ಈಗಾಗಲೇ ಮೂರು ಪೂರ್ವ ಸಿದ್ದತಾ ಪರೀಕ್ಷೆಗಳನ್ನು ನಡೆಸಲಾಗಿದ್ದು ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯಬಹುದು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷೆಯ ಬಗ್ಗೆ ಯಾವುದೇ ಆತಂಕ ಪಡಬೇಕಾಗಿಲ್ಲ.
-ಲೋಕೇಶ್ ಎಸ್.ಆರ್
ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು